ಇಸ್ಲಾಂ ಎಂದರೇನು?
ಆತಂಕವಾದದೊಂದಿಗೆ
ಜೋಡಿಸದಿರಿ ನನ್ನ ಇಸ್ಲಾಂನ್ನು
ಅದರ ಬೇರುಗಳು ಪ್ರೀತಿಯಲ್ಲಿವೆ
ಅದರ ಸೆರಗಿನಲ್ಲಿ
ಗುಲಾಬಿಗಳು ಅರಳಿವೆ
ನೆರೆಯವನನ್ನು ಜಾತಿಯಲಿ
ಹುಡುಕುವವನು ಇವನಾದರೆ
ನೆರೆಯವನು ಹಸಿದಿರುವಾಗ
ಉಣ್ಣುವುದು “ಹರಾಮ್”
ಎನ್ನುತ್ತದೆ ನನ್ನ ಇಸ್ಲಾಂ
ಶತ್ರುವನ್ನು ಪ್ರೀತಿಯಿಂದ
ತಬ್ಬಿಕೊಂಡು ಮನದ
ಕಲ್ಮಶ ತೊಳೆಯುತ್ತದೆ
ಪ್ರೀತಿಸುವುದನ್ನು ಕಲಿಸುತ್ತದೆ ಇಸ್ಲಾಂ
ಗುಲಾಮರಿಗೆ ಒಂಟೆಯ
ಮೇಲೆ ಕೂಡಿಸಿ ಸ್ವತಃ
ನಡೆದು ಬರುತ್ತಾರೆ ಪೈಗಂಬರ್‌ರು
ನನ್ನ ಇಸ್ಲಾಂ ಹೇಳಿದ್ದು ಇದನ್ನೇ
ನೆರೆಯವರ ದುಃಖದಲ್ಲಿ
ಭಾಗಿಯಾಗಿರುತ್ತದೆ ನನ್ನ ಧರ್‍ಮ.
ಪಕ್ಕದ ಮನೆಯವರ
ಸಂಕ್ರಮಣ ಹಬ್ಬಕ್ಕೆ ಎಳ್ಳು ಬೆಲ್ಲ ತಿಂದು
ತನ್ನ ರಂಜಾನಿನ ಸೇವಿಗೆ ಪಾಯಿಸ
ನೆರೆ ಮನೆಗೆ ರವಾನಿಸುತ್ತದೆ
ನನ್ನ ಇಸ್ಲಾಂ.
ದಿಲ್ಲಿಯ ಮನಸ್ಸು ನೊಂದುಕೊಂಡರೆ
ಕರಾಚಿಯ ಕರಳು ಕುಟುಕುತ್ತದೆ.
ಸಹಬಾಳ್ವೆಯ ಪಾಠ
ಹೇಳಿಕೊಟ್ಟಿದೆ ನನಗೆ ಇಸ್ಲಾಂ.
ಭಯೋತ್ಪಾದನೆಯೊಂದಿಗೆ ದಯವಿಟ್ಟು
ಜೋಡಿಸದಿರಿ ನನ್ನ ಇಸ್ಲಾಂನ್ನು.
ಅದರ ಬೇರುಗಳು ಪ್ರೀತಿಯಲ್ಲಿದೆ
ಅದರ ಸೆರಗಿನಲಿ
ಗುಲಾಬಿಗಳು ಅರಳಿವೆ.
*****