ಎರಡು ದಶಕದ ಜೈಲುವಾಸಕ್ಕೆ ಕೊನೆಯಾಯ್ತು
ಗೃಹಬಂಧನದ ಜೈಲಿನ ಗೋಡೆಗಳಿಗೆ
ಅಪ್ಪಳಿಸಿದ ನಿನ್ನ ಪ್ರಜಾಸತ್ತೆಯ ಧ್ವನಿ
ಮ್ಯಾನ್‌ಮಾರ್‌ನ ತುಂಬ ಪ್ರತಿಧ್ವನಿಸುತ್ತಿತ್ತು.
ಅರವತ್ತೈದರ ತೆಳ್ಳನ ದೇಹದಲ್ಲಿ
ಬಿರುಗಾಳಿಗೂ ಬಗ್ಗದ ಆತ್ಮವಿಶ್ವಾಸವಿತ್ತು.
ನೀಳ ದೇಹದಲ್ಲಿ ಸಾಗರದಷ್ಟು ಸಿಟ್ಟು
ಬಂದೂಕಿನ ನಳಿಕೆಗೂ ಹೆದರದ ಕೆಚ್ಚು
ಮುಖದಲಿ ಹೊಳೆವ ಪ್ರಶಾಂತ ಕಣ್ಣುಗಳು
ಮ್ಯಾನ್‌ಮಾರ್‌ನ ಭವಿಷ್ಯದ ಕಿರಣಗಳಾಗಿದ್ದವು.
ಮಿಲಿಟರಿ ಶಾಸನದಲಿ ರೆಕ್ಕೆ ಕತ್ತರಿಸಿದ
ಹಕ್ಕಿಯ ಚಡಪಡಿಕೆ ಪಂಜರದಲ್ಲಿತ್ತು.
ಮರಣಶಯ್ಯಯಲ್ಲಿರುವ ಪತಿಯ ಮುಖ
ನೋಡಲು ಬಿಡದ ಮಿಲಿಟರಿ ದಬ್ಬಾಳಿಕೆ
ಪತಿಯ ಅಂತಿಮ ಇಚ್ಛೆ ಪೂರೈಸಲು ಅಡ್ಡಿಯಾಯ್ತು.
ದಶಕಗಳೇ ಸಂದವಲ್ಲೇ ಸೂಕಿ
ಕರುಳ ಕುಡಿ ಮೊಮ್ಮಕ್ಕಳ ಮುಖನೋಡಿ
ಜನಶಕ್ತಿ ಕೇಂದ್ರವನು ಹಿಡಿದಿಡುವ
ಹುಚ್ಚು ಹುನ್ನಾರ ಮಿಲಿಟರಿ ಸರ್‍ಕಾರಕ್ಕೆ
ಅಂತಿಮ ತೀರ್‍ಮಾನದ ದಿನ
ಜನರೇ ವಹಿಸಿಕೊಳ್ಳುತ್ತಾರೆ ಅಧಿಕಾರ.
ಗಂಡ, ಮಕ್ಕಳಿಂದ ಅಗಲಿಸಿದ
ಪತಿಯ ಅಂತಿಮ ದರ್‍ಶನಕ್ಕೂ ಬಿಡದ,
ನೋಬಲ್ ಶಾಂತಿ ಪುರಸ್ಕಾರ
ಪಡೆಯಲೂ ಬಿಡದ ಆ
ಮಿಲಿಟರಿ ಸರ್‍ಕಾರವ ಸೋಲಿಸಿ
ಜೈಲಿನಲ್ಲಿದ್ದೇ ಚುನಾವಣೆಯ ಗೆದ್ದೆಯಲ್ಲೇ.
ಪ್ರಜಾಸತ್ತೆಯ ಚುನಾವಣೆಯಲ್ಲಿ
ಮ್ಯಾನ್‌ಮಾರ್‌ನ ಜನತೆ ಉತ್ತರಿಸಿದ್ದಾರೆ.
ಜೈಲಿನಲ್ಲಿದ್ದ ಸೂಕಿಗೆ ಗೆಲಿಸಿದ್ದಾರೆ.
ಮಿಲಿಟರಿ ಮಾಡಿದ ಅನ್ಯಾಯಕೆ
ಪ್ರತ್ಯುತ್ತರ ನೀಡಿ, ಎಚ್ಚರಿಸಿದ್ದಾರೆ.
ನಿನ್ನ ದೃಢ ನಿಲುವಿನ ಮುಂದೆ
ಮಂಡೆಯೂರಿನ ಮಿಲಿಟರಿ
ಬಂಧನದ ಬೇಡಿ ಕಳಚಿದಾಗ
ವಿಶ್ವದ ತುಂಬ ಸಂತೋಷದ ಲಹರಿ,
ಹಬ್ಬದ ಸಂಭ್ರಮ, ಸಿಡಿಲ ಮರಿಗೆ
ಹೃದಯ ತುಂಬಿದ ಸ್ವಾಗತ.
ಕಳಚಿ ಬಿದ್ದಿತು ಸರಳುಗಳ ಸರಪಳಿ
ಸೆರೆಮನೆಯ ಗೋಡೆಗಳು ಅದುರಿದವು
ಚೆಲ್ಲಾಪಿಲ್ಲಿಯಾದವು ಜನಶಕ್ತಿಯ ಮುಂದೆ
ಅಮೂಲ್ಯ ಬದುಕಿನ ಆ ಇಪ್ಪತ್ತು
ವರ್‍ಷಗಳ ಅಜ್ಞಾತವಾಸಕೆ,
ಮಕ್ಕಳಿಂದ, ಪತಿಯಿಂದ ಅಗಲಿಸಿದವರಿಗೆ
ಅವಳ ನಿಟ್ಟುಸಿರಿನ ಶಾಪ ತಟ್ಟದಿದ್ದೀತೆ?
ಜನರು ಮೈದಡವಿ ಮಾನವೀಯತೆಯ
ಬಿಗಿದಪ್ಪಿದರು ಭರವಸೆಯ ಬೆಳಕನು
ಇದು ಜನತೆಯ ಗೆಲುವು ನೋಡು
ಪ್ರಜಾಸತ್ತೆಯ ಉಳಿವು ಸತ್ಯವಾಯ್ತು,
ಸ್ವಾತಂತ್ರ ಹಕ್ಕಿಗೆ ಮುಕ್ತಿ ದೊರಕಿತು.
ಸೌಮ್ಯವಾದ ಶಾಂತ ಮುಖದಲ್ಲಿ
ಕಬ್ಬಿಣದಷ್ಟು ಕಠೋರ ನಿರ್‍ಧಾರ
ಒಡಲಾಳದಲ್ಲಿ ಅಸಹನೆಯ ಹೊಗೆ
ತುಟಿಯ ಮೇಲೆ ಮಾಸದ ಹೂನಗೆ
ಗುಬ್ಬಚ್ಚಿಯ ದೇಹದಲ್ಲಿ ಪರ್‍ವತದ ಆತ್ಮವಿಶ್ವಾಸ,
ಗುರಿ ಸಾಧಿಸುವವರೆಗೂ ನಿಲ್ಲದ ನಡಿಗೆ.
ಜಾಗತಿಕ ನೈತಿಕ ಕೊಂಡಿಗಳು
ಒಂದೊಂದೇ ಕಳಚಿ ಬೀಳುವ ಹೊತ್ತು
ಲೇಕ್‌ಸೈಡ್ ಮನೆಯಿಂದ ಹೊರಬಂದ
ಮೃದು ಮಾತಿನ ಒಡತಿ ಶಕ್ತಿ ಸಂಕೇತವಾಗಿ
ಭತ್ತದ ಉತ್ಸಾಹದ ಚಿಲುಮೆಯಾಗಿ
ಭರವಸೆಯ ಬೆಳಕಿನ ಚಿಗುರೆ ಕಂಗಳ
ಒಡತಿಗೆ ಕೊನೆಗೂ ದಕ್ಕಿತು ಮುಕ್ತಿ
*****
(ಸೂಕಿ ಗೃಹಬಂಧನದಿಂದ ಬಿಡುಗಡೆಯಾದ ದಿನ ಬರೆದ ಕವಿತೆ)