ಬನ್ನಿ ರೇ ಸಖಿ, ಎನ್ನಿರೇ-ನಲವೊಂದೆಯೇ ಸಾರ
ನಮಗು ಮುದಕು ನೇರಾ
ಭವದೂರಾ.
ಹಸುರೊಳು ಹೊಳೆಯುವ ಹಿಮಮಣಿಯಂತೆ
ಅಲೆಮೇಲಾಡುವ ಹೊಂಬಿಸಿಲಂತೆ
ಮನುಜರಾಸೆ ಮೇಲೆ
ಆಗಲೆಮ್ಮ ಲೀಲೆ
ಹಗುರುಬಗೆಯ ನಗೆಯ ಹೊಗರ ನೆರೆ
ಹರುಷವಹುದಪಾರಾ.
ಒಲಿವೆನೊಲಿವೆನೆನೆ ಒಲಿಯೆವು ನಾವು
ನಮ್ಮ ಸಿರಿಗನ್ನ ನಿಮ್ಮೆದೆ ನೋವು
“ಚೆಲುವೆ ಓ, ನಲವೆ ಹಾ, ಕೊಳುವೆಯಾ ಅಸುವಾ”
ಎಂಬ ದೈನ್ಯಕಾನಂದಿಸುವಾ
ಹರಳುಬಿಗಿಯ ಹುರುಳಿನೆದೆಯ ಹೊರ-
ಹೊಳಪ ತೋರ್ವೆವಾವು.
ನಮ್ಮಾಸೆನಂಜು ನಿಮಗೇರ್ವುದಲಾ
ನಿಮ್ಮಾಸೆನಂಜು ನಮಗೇರದಲಾ
ಪಡಿಯರತಿಯೊಲೆದೆಬಾಗಿಲ ಬಳಿ ನಿಂದಿರೆ ಸಿರಿಯು
ತನುಮನ ನಡೆಸಲು ಸರಸತಿಯು
ನೇಹವಿರದ ಮೋಹವೆರೆದು ಜಗವೆಲ್ಲ ಗೆಲ್ವೆವಾವು.
ಬನ್ನಿರೇ ಸಖಿ, ಎನ್ನಿರೇ- ನಲವೊಂದೆಯೇ ಸಾರ
ನಮಗು ಮುದಕು ನೇರಾ-ಭವ ದೂರಾ.
*****