ಹಿಡಿಯಿರೋ ಅವನ
ಮಾತು ಬಲ್ಲವರೆಲ್ಲರೂ ಹಿಡಿಯಿರೋ!
ಮಾತುಮಾತಿನಲಿ ಅವನಿಗಾಗಿ ಗುಂಪು ಕೂಡಿದ ನೀವು
ಅವ ನಮ್ಮವ ಅವ ನಮ್ಮವನೆಂದು ಗುಂಪು ಗುಂಪಾಗಿ ಗುದ್ದಾಡುತ್ತೀರಿ

ಆ ಬ್ರಾಹ್ಮಣ್ಯ ಶಿಖಿಗೆ ಅತಿ ಆಚಾರಿಗಳಿಗೆ
ಮತಾಂಧ ಅಭಿಮಾನಿಗಳಿಗೆ ಜನಿವಾರ ಶಿವದಾರಗಳಿಗೆ
ನಾಮ ವಿಭೂತಿಗಳಿಗೆ ಗಂಟೆ ಜಾಗಟೆ ಹೂ ಪತ್ರೆ ಜಾತ್ರೆ ಪರಿಷೆಗಳಿಗೆ
ಸಿಗದ ರೀತಿಯಲ್ಲಿ ಅವನು

ಈ ನಿಮ್ಮ ಶೂದ್ರ ಪ್ರಜ್ಞೆಗೆ ದಲಿತ ಧೋರಣೆಗೆ
ಕಪ್ಪು ಮಾತುಗಳಿಗೆ ಎಡಗೈ ಬಲಗೈ ಕುಸ್ತಿಗಳಿಗೆ ಸಿಗಲಿಲ್ಲ
ಸಮಕಾಲೀನ ಪ್ರಜ್ಞೆಯ ಕಾಲಿಗೂ ಸಿಗದ
ಮಣ್ಣ ವಾಸನೆಯ ಮೂಗಿಗೂ ಹತ್ತದೆ
ಲಿಂಗಭಕ್ತಿಯ ಅನಂಗನಂಗಕ್ಕೂ ದಕ್ಕದೆ

ವರಕವಿ ಗಿರಿಕವಿ ಪಟ್ಟಭದ್ರ ಬಿರುದು ಬಾವಲಿಗಳಿಗು ಮರುಳಾಗದೆ
ಹೆಸರಾಂತ ಕೀರ್ತಿ ಕನ್ನೆಗೂ ಒಲಿಯದೆ
ನುಡಿಗಡಣದೊಡವೆಗಳಿಗಂತೂ ಮೈಗೊಡದೆ
ನಿಮ್ಮ ಪ್ರತಿಮೆಗಳಲ್ಲಿ ಮೂರ್ತೀಭವಿಸದೆ
ನಿಮ್ಮ ಸಂಕೇತಗಳ ಕಣ್ಸನ್ನೆಗಳಿಗೆ ಮೋಹಗೊಳ್ಳದೆ

ನಿಮ್ಮ ನಾದದ ಮೋಡಿಗೆ ತಲೆದೂಗದೆ ವಾದಕ್ಕಂತೂ ಎಂದೂ ಜಗ್ಗದೆ
ನಿಮ್ಮ ಸಮಯಸ್ಪೂರ್ತಿಯ ವೇಳೆಯನರಿಯದೆ
ಓಡುತ್ತಿದ್ದಾನೆ ತಪ್ಪಿಸಿಕೊಂಡು
ಹಿಡಿಯಿರಿ ಮಾತು ಬಲ್ಲವರೆಲ್ಲರೂ
ಹಿಡಿಯರೋ ಹಿಡಿಯಿರಿ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)