ಇದು ಎಂಥ ಶಿಶಿರ! ಇದು ಎಂಥ ಶಿಶಿರ!
ಹಕ್ಕಿಗಳ ಸದ್ದಿಲ್ಲ ಮರಗಳಲಿ ಎಲೆಯಿಲ್ಲ
ಹಿಮ ಹೊದ್ದು ಮಲಗಿದೆ ಸರ್‍ವತ್ರ ಭೂಮಿ
ಬೀದಿಯಲಿ ಜನವಿಲ್ಲ
ಮಾತೆ ಕೇಳಿಸುವುದಿಲ್ಲ
ನಗೆಯಿಲ್ಲ ಸದ್ದಿಲ್ಲ ಎಲ್ಲೆಲ್ಲೂ ಮೌನ
ಉತ್ತರ ಧ್ರುವದಿಂದ ಬೀಸಿ ಬಂದಂಥ
ಗಾಳಿ ಕೊರೆಯುತಿದೆ
ಜೀವ ಹಿಂಡುತಿದೆ
ಮಬ್ಬು ತುಂಬಿದೆ ನಭ
ಬಿಸಿಲು ಮಂಕಾಗಿದೆ
ಸೂರ್‍ಯನಿದ್ದಾನೊ ಇಲ್ಲವೊ ತಿಳಿಯದು
ಮಂಜಿನೊಳಗೆ
ಆದರೂ ಜೀವರಸ ಬತ್ತುವುದಿಲ್ಲ
ಸತ್ತಂತೆ ನಿಂತಿರುವ ಒಂದೊಂದು ಮರವೂ
ಚಿಗುರೊಡೆಯದಿರದು ವಸಂತದಲಿ
ಬಂದೇ ಬರುವುದು ಆ ಕಾಲ
ಹೊಸ ಚಿಗುರು ಹೊಸ ಹೂವು
ಹೊಸ ಕಾಯಿ ಹೊಸ ಹಣ್ಣು
ಅಲ್ಲಿರುವವು ಕೋಗಿಲೆ ಅಲ್ಲಿರುವವು ಕಾಜಾಣ
ಅಲ್ಲಿರುವುದು ಎಲ್ಲಾ ಹಕ್ಕಿಗಳ ಹಾಡು
ಸಂಭ್ರಮದಿ ಎದ್ದು ನಿಲ್ಲುವುದು ಮಣ್ಣು
ಆಹಾ ವಸಂತ ಬಾರೋ ವಸಂತ
ಆ ಅಂಥ ವಸಂತಕ್ಕೆ
ಈ ಇಂಥ ಶಿಶಿರ
ಆ ಅಂಥ ಗಾನಕ್ಕೆ
ಈ ಇಂಥ ಮೌನ
*****