ಸತ್ಯವೆ ಗೆಲ್ಲುವುದು
ಅನೃತವು ಅಲ್ತು
ಇದು ಭವಿಷ್ಯತ್ತು.

ಗೆದ್ದುದೆ ಸತ್ಯ
ಸೋತುದೆ ಮಿಥ್ಯ
ಭೂತದ ರೀತ್ಯಾ.

ವರ್ತಮಾನದೊಳೊ?-
ಸಂಗ್ರಾಮವೆ ಸತ್ಯ
ಶಾಂತಿಯೆ ಮಿಥ್ಯ
ಮಿಗಿಲೆನೆ ಇದರಿತ್ಯರ್ಥಕೆ
ಸಮರವೆ ಮುಖ್ಯ
ಶಾಂತಿಯಸಹ್ಯ.

ಸಂಗ್ರಾಮದೊಳೇ ಸತ್ಯದ ಸುಳಿವು
ಸಂಗಾಮದೊಳೇ ಮಿಥ್ಯೆಯ ಅಳಿವು
ನನ್ನಿ ಯಾಸೆ ಜನಕೆಂದಿನವರೆಗೋ
ಆ ವರೆಗೂ ಹೋರಾಟವು ಸಿದ್ಧ
ಇದು ಸತ್ಯೋಪಾಸನೆ ಶುದ್ಧ
ಇದಕೆನುವರು ಯುದ್ಧ.

ಈ ಯುದ್ಧ ಸಮರ್ಥನವಾದ
ಓದುವಗೆಸಗಲಿ ಮೋದ!
*****