ಕನಸಿಗರಿಗೆ ಮಾಸವೇಕ
ಕಣಸುತರುವ ಕಾರ್ತಿಈಕ!
ನಿಯತಿ ತನ್ನ ಬಿಡುವಿಗೆಂದು
ಮೀಸಲಿಡುವ ಕಾಲವಿಂದು.

ನಿಗಿ ನಿಗಿ ನಿಗಿ ನಗುವ ಹಗಲು,
ಝಗಿ ಝಗಿ ಝಗಿ ಝಗಿಸುವಿರಳು.
ಬಹು ಮನೋಜ್ಞ ಲಲಿತ ಮಧುರ-
ರಾಗ ರಚಿತ, ಭಗಣರುಚಿರ
ಭಾವದೀಪ್ತ ಸಂಧ್ಯೆ!-ಎಂತು
ನುಡಿವೆನಿದಿರ ಚೆಲುವ? ಕಂತು
ತನ್ನ ತೋಷಕಿರವುಗೊಡಲು
ತಾನೆ ಕುಂಚಿ ಹಿಡಿದನೆನಲೆ?

ಅತ್ತ ಇತ್ತ ಸುತ್ತ ಸುಳಿದು,
ಹರಳ ಚೆಲ್ಲಿ, ಹೊನ್ನ ಕಳೆದು,
ಹೋದಳೆನಲೆ ಆಪ್ಸರಸಿ
ಇನಿಯನರಸಲವಸರಿಸಿ?

ಅಗೋ ನೋಡು! ಗೊಲ್ಲ ಹುಡುಗ,
ಕೋಡ ತುದಿಯನೇರಿ ನಿಂತು,
ಸ್ಪರ್ಶಮಣಿಯ ಮಾಟದಂತೆ
ಸತ್ಯದಿಳೆಯು ಚೋದ್ಯವೆನಿಪ
ಸಂಜೆ ರವಿಯ ಸ್ವರ್ಣಕಾಂತಿ-
ಗೊಡ್ಡಿ ತನುವ, ಹೋ ಹೋ
ಎಂದು ಕುಣಿದು, ಮೇರುಗಿರಿಯ
ಶಿಖರವಡರಿ ವಿಹರಿಪಮರ-
ಕುವರನನ್ನೆ ಹೋಲುತಿಹನು!

ಇಗೋ! ಪುರಂಧ್ರಿ ಕಾಮ್ಯವಾದ
ಸೋಪಾನ ರಮ್ಯವಾದ
ಸರಸಿಯೊಳಗೆ, ಕಿರು ಕಿರುದೆರೆ,
ಮುಗಿಲ ರಂಗನೆರಚಿಯಾಡಿ,
ವೃದ್ಧಸಖನೆನೆಳೆಯರಂತೆ
ಗುಡಿಯ ನೆಲ ಗೇಲಿಮಾಡಿ,
ಗೆಲುವುಗೊಂಡು ನಲಿಯುತಿರಲು;
ನೀರಿಗೆಂದು ಬಂದ ಬಾಲೆ
ತನ್ನ ಕಾಲನಿಳಿಯಬಿಟ್ಟು,
ತಂದ ಕೊಡವ ಮುಳಗಿಸಿಟ್ಟು,
ಪಡುವದೆಸೆಗೆ ದಿಟ್ಟಿಯಟ್ಟಿ,
ಅಲ್ಲಿ ಸಂಜೆ ಮುಗಿಲನೊಳಗೆ-
ತನ್ನ ಹೃದಯದಾಳದಲ್ಲಿ
ಭಾವರಾಗದುಲ್ಬದಲ್ಲಿ
ತನಗೆ ತಾನು ತಿಳಿಯದಂತೆ
ರೂಪುಗೊಳ್ಳುವೊಲುಮೆಯಂತೆ-
ಮೆಲ್ಲ ಮೆಲ್ಲನೆ ಕಳೆಯಕೊಂಡು
ಸ್ಪಷ್ಟವಾಗುತ್ತಿರುವ ಚಂದ್ರ-
ಲೇಖೆಯನ್ನು ಕಂಡು, ಇಂದು
ಆವುದೋ ಕನಸಿಗಾಗಿ
ಆವದೋ ಬಯಕೆಗಾಗಿ
ಉತ್ಸೇಕಗೊಳ್ಳುತ್ತಿರುವ
ಬಗೆಯ ಚೆಂದವನ್ನು ನೋಡು!

ಒಡತಿ ಬರುವ ಬೇಹ ಕೊಡಲು
ಮಿಂಚಿ ಮುಂಚೆ ಹೋದಳೆನ್ನೆ,
ಪಡುವಲಾಚೆ ಸಂಜೆ ಸಾಗೆ,
ಜಗವೆ ನಿಶ್ಶಬ್ದಮಾಗೆ-
ಕೃತ್ತಿಕೆಗಳ ತಿಲಕವಿಟ್ಟು
ರೋಹಿಣಿ ಮೂಗುತಿಯ ತೊಟ್ಟು
ಮಾರ್ಗಶೀರ್ಷ ಪದಕ ಝಗಿಸೆ
ಪುನರ್ವಸವೆ ಕಾಂಚಿಯೆನಿಸೆ
ಮಿಕ್ಕ ಚುಕ್ಕಿ ಢಾಳಿನಿಂದ
ತನ್ನದೊಂದೆ ಠೀವಿಯಿಂದ
ಪೆರೆಯ ಸೊಡಲ ಬೆಳಕಿನಲ್ಲಿ
ಮಂದ ಮಂದ ಗಮನದಲ್ಲಿ
ಬಾನ ಸೆಜ್ಜೆಗೈತರುವ
ಇರುಳ ಚೆಲುವನೆಂತೊರೆವ!

ಇಂದು ಹುಣ್ಣಿಮೆಯ ಹಬ್ಬ,
ನಮ್ರ ಶುಭ್ರ ಚಂದ್ರಹಾಸ
ತಿರೆಯಿರವನು ನಾಕದೊಂದು
ಕನಸಿನೊಳಗೆ ತೇಲಿಸಿಹುದು.
ಅಗೋ! ಮೇಲೆ, ದೂರದಲ್ಲಿ-
ಚಕ್ರವಾಳದಂತರದೊಳು,
ಲೆಕ್ಕವಿಲ್ಲದಷ್ಟು ಸೊಡರ
ಹೊನ್ನ ಹೊಗರ ದಳಗಳಿಂದ,
ಗೋಪುರಾಂತ ದೀಪ್ತವಾಗಿ
ಮಲೆಯ ತದಿಯ ಗುಡಿ ಅದೊಂದೆ
ಕಾಣತಿಹುದು ಮೂಡಲೊಳಗೆ
ಬೆಳುದಿಂಗಳ ಪಾಲ್ಗಡಲೊಳು-
ಮುನ್ನ ಅವ್ಯಕ್ತದಿಂದ
ಘನಶ್ಯಾಮನಾಭಿಯಿಂದ
ಮೊಳೆದುತಂದೆ ಬಿರಿಯಲಿರುವ
ಶತ ಶತ ದಳ ಕಮಲದಂತೆ.

ರವಿಲೋಕ ಪ್ರಜೆಗಳಿಂತು
ಹರಕೆ ಹೊತ್ತು ಪರಿಸೆಗೊಂಡು
ಜಾತ್ರೆಯಾಗಿ ಇಳಿದು ಬಂದು
ಗುಡಿಯೊಳಿಂತು ನೆರೆದರೆನಲು-
ಎಲ್ಲೆಲ್ಲು,- ಹೊಸಿಲ ಮೇಲೆ
ಗೂಡಿನೊಳಗೆ ಜಗುಲಿ ಮೇಲೆ
ಕೈಸಾಲೆ ಕಂಬದಲ್ಲಿ
ಹಂತದಲ್ಲಿ ಗುಳಿಗಳಲ್ಲಿ
ಬೃಂದಾವನದ ಸುತ್ತ
ದೇವನಿದಿರು ಸುತ್ತಮುತ್ತ
ಸೊಡಲಮಲ್ಲಿಯಂಜಲಿಯೊಳು
ರಂಗವಲ್ಲಿಯಾರತಿಯೊಳು,
ತೂಗಿ ಬಾಗಿ ಕುಡಿಯ ಮೆರೆಸಿ
ಇದೇ ಸುವರ್ಲೋಕಮೆನಿಸಿ
ಬೆಳಗುತಿಹುದು ದೀಪಮಾಲೆ.

ಉಚ್ಚನೆನದೆ ನೀಚನೆನದೆ
ಪೌರವೃದ್ದರೊಂದುಗೂಡಿ,
ಅಂಜಲಿಯೊಳು ಹಣತೆಯಾಂತು,
ಮಂತ್ರಪೂತ ಆಜ್ಯದೀಪ.
ದಾರತಿಯನು ಮುಂದೆ ಕೊಂಡು,
ವೇದಘೋಷ ಘೋ ಎನ್ನೆ,
ಘಂಟಾರವ ಶಿವೋಮೆನ್ನೆ,
ಶಂಖಸ್ವನ ಮೊಗೆಯುತಿರಲು,
ದುಂದುಭಿಗಳು ಮೊಳಗುತಿರಲು,
ತಾಳ ಮೇಳ ಮೇಳವಿಸೆ-
ತನ್ನ ಸತ್ವವರಿವ ಜೀವ
ಮುಕ್ತಿಯಂತ್ಯ ನಿವೇದನವ
ಹಾ ಹೂ ಗಾನದೊಡನೆ
ಇಂತೆ ಸಲಿಪುದೆನ್ನುವಂತೆ –
ದೇವ ದೇವನಡಿಮಲರೊಳು
ಸೊಡಲ ಸಲಿಸಿ ದೀಪವೆತ್ತೆ;

ಗುಡಿಯ ಹೊರಗೆ ಉತ್ಸವದೊಳು
ಬಿಜಯಗೈವ ದೇವನಿದಿರು,
ತೈಲಸಿಕ್ತ ನೂತ್ನ ವಸನ-
ದಾಲಂಬದಲ್ಲಿ ಅಗ್ನಿ –
ತನ್ನ ತನುವನುರೆ ತಾಪಿಸಿ
ಆತ್ಮತೇಜವುದ್ದೀಪಿಸಿ
ನಿರ್ವಾಣಕ್ಕೆ ಮನಮಾಡುವ
ಪರಮ ಯೋಗಿಯಾತ್ಮದಂತೆ-
ಉಜ್ವಲಿಸಿ ಪ್ರಜ್ಜ್ವಲಿಸಿ
ಗೋಪುರಾಗ್ರಗಾಮಿಯಾಗಿ
ನೀಲ ಗಗನತಲವ ಮುಟ್ಟಿ
ತಲ್ಲೀನನಾಗುತಿರಲು;

ಸೋಜಿಗವನ್ನು ನೋಡಿ ನೋಡಿ
ಧನ್ಯ ಭಾವವಡೆದು ಮಂದಿ-
ದೀಪದರ್ಶನಾನಂದಿ-
ಭಾವಮಾತ್ರರಾಗುತ್ತಿರುವ
ಪರಿಯನೆಂತು ನಾವೇಳ್ವೆ!

ದಿಟ ದಿಟ ದಿಟ ಕಾರ್ತೀಕ
ಕನಸಿಗರಿಗೆ ಮಾಸವೇಕ!
ದೀಪದೀಪ್ತ ಕಾರ್ತೀಕ
ಜ್ಯೋತಿರ್ಮಯ ಕಾರ್ತೀಕ
ಆಸ್ತೀಕ ಕಾರ್ತೀಕ!
*****