ಶಿಂದೀಗಿ ತಳದಳದಲ್ಲಿ ಸಂಗಮ್ಮನಽ ತಳ|
ಶಂಭೋ ಮಠದೇವ ಇಂದುದಯನಾಗೊ| ಜೋ ಜೋ||
ಭಂಗಾರ ತೊಟ್ಟೀಲ ಧೊರಿತಾಯಿ! ಕುಂದಲ|
ಸಿಂಗರದಾನ ಶ್ರೀಕೃಷ್ಣಗ ಛಂದಾಗಿ ತೂಗಾರಿ| ಜೋ…||
ಕರೆದು ಬಂದೆವು ಓಣಿ ನೆರೆದು ಬಂದಿತು ಮಂದಿ|
ಬಂದು ನಿಂತಾರವ್ವ ಕನ್ನಿ ಮುತ್ತೈದ್ಯಾರು| ಜೋ…||
ಸಕ್ಕರಿ ಪಾಯಸ ಬಸಿದು ಬಟ್ಟಲ ತುಂಬಿ|
ತುತಮಾಡಿ ಉಣಿಸಿದರ ಬಿಕಿಬಿಕಿ ಅಳತಾನ| ಜೋ…||
ಸಾದ ಸಿರಿಗಂಧ ತಯದು ಬಟ್ಟಲ ತುಂಬಿ|
ತೀಡಿ ತೀಡಿ ಹೆಚ್ಚಿದರ ಕಾಡಿ ಕಾಡಿ ಅಳತಾನ| ಜೋ…||
ನಾಗಬಂದೀನಂಗಿ ನಡುವಿನ ಮ್ಯಾಲ ತೊಡಸಿ|
ಆಡ್ಲಕ್ಕ ಹೋಗಂದ್ರ ಬೋರ್‍ಯಾಡಿ ಅಳತಾನ| ಜೋ…||
ಬಿಂದೂಲಿ ಇಡಸೀದ ಬಿಳಿಯಂಗಿ ತೊಡಸಿದ|
ಆಡಿ ಬಾ ಕಂದಂದ್ರ ಕಾಡಿ ಕಾಡಿ ಅಳತಾನ| ಜೋ…||
ನೀರಾಗ ನೆಳ ನೋಡಿ ಸೂರ್‍ಯ ಚಂದ್ರನ ಬೇಡಿ|
ಅದರಂಗ ತಾ ಬೇಡಿ ಬೋರ್‍ಯಾಡಿ ಅಳತಾನ| ಜೋ…||
ಎಳೆಮ್ಮಿ ನೊರೆಹಾಲ ತೊಟ್ಟಿಲದಾಗಿಟ್ಟೀದ|
ಆಡಿ ಬಂದ್ಕುಡಿಯಂದ್ರ ಕಾಡಿಕಾಡ್ಯಳತಾನ| ಜೋ…||
*****
ತೊಟ್ಟಿಲಲ್ಲಿ ಹಾಕುವ ಹಾಡು
ಹುಟ್ಟಿದ ಹನ್ನೆರಡನೆಯ ದಿನ ಕೂಸನ್ನು ತೊಟ್ಟಿಲಲ್ಲಿ ಹಾಕಿ ಹೆಸರಿಡುತ್ತಾರೆ. ಆಗ ಜೋಗುಳಹಾಡನ್ನು ಹಾಡುತ್ತಾರೆ. ಇಲ್ಲಿ ಕೊಟ್ಟಿರುವುದನ್ನು ಆ ಸಮಯದಲ್ಲಿ ಹಾಡುವರಾದರೂ ನಿತ್ಯಶಃ ಕೂಸನ್ನು ತೂಗುವಾಗ ಹೇಳಲಾಗುವಂತೆ ಇದರಲ್ಲಿಯ ವರ್ಣನೆಯ ವಿವರಗಳಿವೆ.
ಶಬ್ದ ಪ್ರಯೋಗಗಳು:- ಸಿಂದಿಗಿ=ಒಂದು ಊರು. ತಳ=ಸ್ಥಳ. ಸಾದ=ಕಪ್ಪು. ಬಿಂದೂಲಿ=ಮುಂಗೈಯ ಆಭರಣ. ನೆಳ=ನೆರಳು. ಅದರಂಗ=ಅದರಂತಹದನ್ನು.