ನನ್ನನರಿಯದೆ ನಿನ್ನನರಿಯಲಳವಲ್ಲ,
ನನ್ನ ಕಾಣದ ಮುನ್ನ ಕಾಣೆ ನಾ ನಿನ್ನ
ನೆಂದು ಸಾರುವುವೈಸೆ ಧರುಮಂಗಳೆಲ್ಲ-
ಆದೊಡಾಂ ಕಾಂಬೆನೆಂತರಿವೆನೆಂತೆನ್ನ? ೪
೨ಕಡೆಮುಗಿಲ್ವರಮೆನಿತೊ ಕಣ್ಣಾಲಿ ದೂರಂ
ನೋಡಬಲ್ಲಡೆ, ನೋಡಬಲ್ಲುದೇಂ ತನ್ನ?
ಸುರಿಸಬಲ್ಲಡೆ ಸರಿಗೆಯಿಂ ಸ್ವರಾಸಾರಂ,
ಕೇಳಬಲ್ಲುದೆ ೩ಕುಡುಪಣಂ ಕ್ವಣಿತಮನ್ನ? ೮
**
ನಿಸಿಯ ಬೆಸಲಿಗೆ ಸುಸಿಲ್ಮಿಸುಕುವಂತೊಲ್ಲ
ದೇಕೆನ್ನ ಮಬ್ಬೆದೆಗೆ ಮೂಡೆ ‘ಆತ್ಮಾನಂ
ವಿದ್ದಿ’ ಆ ಸತ್ಯದರಿಮೆಯಮ್ಲಾನ ನಂ?-
ಬ್ರಹ್ಮಚರ್ಯಂ ವಿನಾತ್ಮಜ್ಞತೆಗೆ ಸಲ್ಲ! ೧೨
**
ಭವತಿ ಭಿಕ್ಷಾಂ ದೇಹಿ ತನುಮನಕೆ ತಾಯೆ
ಬ್ರಹ್ಮದೀಕ್ಷೆಯನೆನಗೆ ಮರಣಾಂತಮೀಯೆ!
*****
೧ ‘ನಿನ್ನನೇ ನೀನು ತಿಳಕೊ’ (`Know thyself’- Thales)
೨ ಚಕ್ರವಾಳ
೩ ವೀಣೆಯನ್ನು ಬಾಜಿಸುವ ಕೋಲು