ಮುಗಿಲೇರಿದ ಸಿರಿಗನ್ನಡ ಬಾವುಟ
ಹಾರಲಿ ಮೊದಲು ಎದೆಯಲ್ಲಿ
ಚರಿತೆಯ ಪಡೆದಿಹ ಕನ್ನಡ ರಥಕೆ
ಹೊಸ ಹಾದಿಯನು ತೋರುತಲಿ
ಮಲಗಿದ ಮನಗಳು ಎಚ್ಚರವಾಗಲಿ
ಕನ್ನಡ ಮೈತಾಳಿ
ಭವಿಷ್ಯ ಕಾಣದ ನೆಲಜಲ ಕಾಯಲು
ಅಭಿಮಾನವ ಚೆಲ್ಲಿ
ಎದ್ದಿಹ ಕನ್ನಡ ವಿರೋಧಿ ಸದ್ದನು
ಅಡಗಿಸಿ ಗತ್ತಿನಲಿ
ಬರೆಯಲಿ ಇಂದೇ ಹೊಸ ಅಧ್ಯಾಯವ
ಚರಿತೆಯ ಪುಟಗಳಲಿ
ಆಗಿಹ ಅನ್ಯಾಯವ ಅರಿಯುತಲಿ
ಏಳಲಿ ಕನ್ನಡಿಗ
ಆಶ್ವಾಸನೆಗಳ ನಂಬಿ ಕೂರದೆ
ಮುನ್ನಡೆಯಲಿ ಬೇಗ
ನಾಗಾಲೋಟದ ಸೃಷ್ಟಿಯ ಜತೆಗೆ
ಹೆಗಲೇಕೆ ತಾನಾಗಿ
ಜಗದಿತಿಹಾಸದಿ ಕನ್ನಡ ಉಳಿಸಿ
ಬೆಳಗಲಿ ಬೆಳಕಾಗಿ
*****



















