Home / ಕವನ / ಕವಿತೆ / ಬದುಕು ಬೇಡ ಅನ್ನಿಸಲಿಲ್ಲ

ಬದುಕು ಬೇಡ ಅನ್ನಿಸಲಿಲ್ಲ

ಜ್ವರ ನೂರಾನಾಲ್ಕು ಡಿಗ್ರಿಗೆ ಏರಿ ಎದೆ ಹಾರಿ
ಹೋದಾಗಲೂ ಈ ಡಿಗ್ರಿಗಳ ಕೋಟೆಗಳ ಮೀರಿ
ಪ್ರಾಣಪಕ್ಷಿ ಎನ್ನುತ್ತಾರಲ್ಲ ಅದು ರೆಕ್ಕೆ ಬಿಚ್ಚಿ
ಪುರ್ರಂತ ದಿಗಂತ ಸೇರಿ ಅಂಥದೇ ಪಕ್ಷಗಳ ಪ್ರಭಾತಫೇರಿ
ಕೂಡಿಕೊಳ್ಳಲಿ ಈ ಜೀವ ಗರಂ ಇದ್ದುದು ನರಂ ಆಗಲಿ
ಅನ್ನಲಿಲ್ಲ ಆ ಹೊತ್ತಿನಲ್ಲೂ ಸಾವು ಬೇಕೆನಿಸಲಿಲ್ಲ

ಈ ಕೆಂಪು ಬಿಳಿ ಪಂಚ ಪಂಚ ಪ್ರಾತಃಕಾಲ
ಹೇಗೆ ಹೋಗಲಿ ಬದುಕಿನ ಬಟ್ಟೆಗಳ ಕಳಚಿ-
ಜೀವದ ತುಂಬ ವ್ಯಥೆ ತುಂಬಿ ಒಂದು ಥರಾ
ಹೊಟ್ಟೆ ತೊಳೆಸಿ ಬಂತು ಉಸಿರು ಅಲ್ಲೂ ಇಲ್ಲೂ
ತೇಕುತ್ತಿದ್ದಾಗಲೂ ಬದುಕು ಎಷ್ಟು ಸಿಹಿ ಎಷ್ಟು ಸಹ್ಯ
ಅನುಪಾನ ಉಪಚಾರ ತಣ್ಣೀರು ಪಟ್ಟಿಗಳ ಸಶ್ರಮ ಶಿಕ್ಷೆಯ ನಡುವೆ
ನನ್ನ ಚೈತನ್ಯ
ಗೋಕರ್ಣದ ಬೇಲೆ ದೇವಸ್ಥಾನಗಳನ್ನು ಸುತ್ತಾಡಿ
ಹಿರೇಗುತ್ತಿಯನ್ನು ಮೂಸುತ್ತ ಹೊರಟಿತು

ನನ್ನ ಹಳೆಯ ಕನ್ನಡ ಶಾಲೆಯ ಹತ್ತಿರ ಕಾರು ನಿಂತಿತು
ಇಲ್ಲಿಯ ಕ್ಲಾಸುಗಳಲ್ಲಿ ಅಂಗಿ ಚಡ್ಡಿಯ ನಾನು ಇದ್ದೆ
ಒಂದು ದಿನ ಮನೆಗೋಡಿ ಬರುವಾಗ ಇದೇ ಕಂಪೌಂಡಿನಲ್ಲೊಮ್ಮೆ ಬಿದ್ದೆ
ಮಣ್ಣು ಬಾಯೊಳಹೊಕ್ಕಿತು ಥೂಥೂ ಉಗಿದೆ ಎಲ್ಲ ನಗಬೇಕಿತ್ತು
ನಗಲಿಲ್ಲ ನಾ ಇದ್ದಾಗಲೇ ಅಲ್ಲಿದ್ದ ಧ್ವಜದ ಕಂಬ ಕಿತ್ತು ಇಲ್ಲಿ ಹುಗಿದರು
ನನ್ನ ಜೊತೆ ಇದ್ದವರೆಲ್ಲ ಈಗ ಎಲ್ಲೆಲ್ಲಿದ್ದಾರೆ ಮತ್ತೆ
ಹಾಗೆ ಒಟ್ಟಿಗೆ ಸೇರಲಾರೆವು ಇವೆಲ್ಲ ಒಮ್ಮುಖದ ಓಟ
ಯಾವುದೋ ಗುರಿ ಮುಟ್ಟಲಿಕ್ಕಿರುವ ಒಂದೇ ಉಸಿರಿನ ಆಟ
ಇಲ್ಲಿಯ ಕಬಡ್ಡಿ ಮೂಲೋದ್ಯೋಗ ವ್ಯಾಯಾಮ ಪ್ರಾರ್ಥನೆ
ಪಂಚಾಂಗ ಅಮೃತವಾಣಿ ವಾರದ ಚರ್ಚಾಕೂಟ ಬೆಳಗಿನ ಉಪ್ಪಿಟ್ಟು
ನನ್ನ ಮಾಸ್ತರರು ಅಕ್ಕವರು ಗೆಳೆಯರು ಚಾಡಿ ಮಾತು….
ಜ್ವರ ತೊಂಬತ್ತೊಂಬತ್ತಕ್ಕೆ ಇಳಿಯಿತು

ಕಿವಿಯಲ್ಲಿ ಅಘನಾಶಿನಿ ಮೊರೆದಳು
ಅಘನಾಶಿನೀ ನನಗೆ ಹಾದಿ ಬಿಡು
ಅಲ್ಲಿ ತಾರೀಕಟ್ಟೆಯಲ್ಲಿ ಒಂದರೆಗಳಿಗೆ ಕೂತು
ನಿನ್ನ ನೋಡಿ ಮೈ ಮರೆಯುವೆ ಹೇಳು
ಈ ಚಂದ್ರನ್ನ ನಕ್ಷತ್ರಗಳ ತೊಟ್ಟಿಲು ಕಟ್ಟಿ ತೂಗಿದರಾರು
ನಿನ್ನ ಗರ್ಭದ ಪಾತಾಳದೊಳಗೆ ಸೇರಿದ ಜೀವಗಳೆಷ್ಟು
ಈ ದಡವನ್ನು ಕಾಲುಗಳು ತುಳಿದವು
ನಕ್ಷತ್ರಗಳು ಮೈ ತೊಳೆಯಲು ನಿನ್ನಲ್ಲಿಗೇ ಬಂದಿದ್ದವೇ
ಈ ತಾರಿಕಟ್ಟಿ ಕಟ್ಟಿದವರಾರು ಸಭಾಹಿತರ ಮನೆಯವರು
ಯಾವಾಗ ಬಂದರು ನಿನಗೆಷ್ಟು ವರ್ಷ ಇಲ್ಲಿ ರಾಮಸೀತೆ
ಬಂದಿದ್ದು ನಿಜವೇ ಆ ನಾಯಿಯನ್ನು ಆ ಜನರು ಗುಂಡಿಟ್ಟು
ಕೊಂದರೇ ಈ ತೆಂಗಿನ ಮರದ ಕಾಯಿಗಳನ್ನು ಕದ್ದವರಾರು
ದಿವಸದ ಮೊದಲಿನ ದೋಣಿ ಎಷ್ಟಕ್ಕೆ ಹೊರಡುತ್ತದೆ
ಇವರೆಲ್ಲ ಎಲ್ಲಿಯವರು ಏನಾಗಲಿರುವರು ನೀನು ಎಲ್ಲಿಂದ ಬಂದೆ
ಹೋಗುವೆ ಎಲ್ಲಿಗೆ ಈ ನೈಟ್ ಹಾಲ್ಟ್ ಬಸ್ಸು ಇವತ್ತು ರಾತ್ರಿ
ಎಷ್ಟಕ್ಕೆ ಬಂತು ಈ ಹಾದಿ ದೀಪದ ಮಂದ ಬೆಳಕಲ್ಲಿ
ಹೊಳೆವ ಕಲ್ಲು ಬೂದಿ ಮಣ್ಣು ಬೀದಿನಾಯಿ ಪಾಗಾರ ಕೆಂಪುಬಸ್ಸು
ಇವುಗಳ ಅರ್ಥ ಹೇಳು ಅಘನಾಶಿನೀ ನಿನ್ನ ಸುದೀರ್ಘ ಮೌನ
ಕಳೆದು ಏನೇನೆಂದು ಉಸುರು ಈ ನಿನ್ನ ಗಂಡನ ಹೆಸರು
ಹೇಳು ಇಲ್ಲದಿದ್ದರೆ ನನ್ನ ತಲೆ ಹಾಳಾಗಿ ಹೋಳಾಗಿ ಹೋಗುವುದು
ತಾಯೀ ಅದಕ್ಕಾಗಿಯಾದರೂ ಮಾತಾಡು ನನ್ನ ಚೈತನ್ಯ
ನಿನ್ನ ಮಾತುಗಳಿಂದ ಶಾಂತವಾಗಲಿ
*****

 

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...