ನಿಂತಲ್ಲಿ ನಿಲ್ಲದೆ ಮನಸು
ಧಾವಂತ ಮಾಡುತ ಇತ್ತು

ಶಾಂತಿಯನರಸಿ ಗುಳೆ ಹೊರಟಿತ್ತು
ಅಂತರಾತ್ಮನ ಮನೆ ಎಬ್ಬಿಸಿತ್ತು

ಸೂರ್‍ಯಗೆ ಮೋರೆ ತೋರದೆ ಇತ್ತು
ಸೂರ್‍ಯಕಾಂತಿಯ ನೋಡದೆ ಇತ್ತು

ಹಾಡುವ ಹೆಣ್ಣಿನ ಕೇಳದೆ ಇತ್ತು
ಆಡುವ ಮಕ್ಕಳ ಸೇರದೆ ಇತ್ತು

ಹರಿವ ನದಿಗುಂಟ ನಡೆಯದೆ ಇತ್ತು
ತೆರೆಗಳನೆಣಿಸುತ್ತ ಕೂರದೆ ಇತ್ತು

ಮುಗಿಲ ತೊಟ್ಟಿಲಲಿ ತೂಗದೆ ಇತ್ತು
ಬಿಳಲ ಜೋಕಾಲಿಯಲಿ ಆಡದೆ ಇತ್ತು

ಹೊಲಗದ್ದೆಗಳಲಿ ಸುಳಿದಾಡದೆ ಇತ್ತು
ಹಳ್ಳಿ ಮನೆಗಳಲಿ ತಂಗದೆ ಇತ್ತು

ಗುರುಗಳ ಗುರುತಿಲ್ಲದೆ ಇತ್ತು
ತಂದೆತಾಯಿಯರ ಎಂದೋ ಮರೆತಿತ್ತು

ತನಗೆ ತಾನೇ ಇರಿದು ಕೊಂಡಿತ್ತು
ದೇವರ ಮೊದಲೇ ಕೊಂದಾಗಿತ್ತು
*****