ಎಂದು ಬರುವಳೋ ನನ್ನ ಹುಡುಗಿ
ಎನ್ನ ಮನಸೂರೆಗೊಂಡ ಬೆಡಗಿ
ಮನೆ ಮನಗಳ ಬರಿದು ಮಾಡಿ
ವಿರಹದ ಉರಿಗೆನ್ನ ದೂಡಿ
ಬೆಂದು ಬಸವಳಿದೆನ್ನ ನೋಡಿ
ನಗುತಿರುವಳು ದೂರ ಓಡಿ
ಎಂದು ಬರುವಳೋ…
ಮೃದು ಮಧುರ ಸ್ವರ ಸವಿ ಜೇನಿನ ಅಧರ
ಬಳೆಗಳ ಸಂಚಾರ, ಬಿಂಕ ಬಿನ್ನಾಣದ ವೈಯ್ಯಾರ
ಬಳುಕಿ ನಡೆವ ಕಾಲ್ಗಳ ನೂಪುರದಿಂಚರ
ಸೀರೆಯ ನೆರಿ ಚಿಮುಕಿಸಿ ನಡೆವ ಶೃಂಗಾರ
ಎಂದು ಬರುವಳೋ…
ಸೊಂಟದ ಬಳುಕಾಟ
ಕಣ್ಸನ್ನೆಯಲಿ ಕರೆವ ಮೈಮಾಟ
ಜಿಂಕೆಯ ಚಿನ್ನಾಟ ನವಿಲಿನ ನಡೆದಾಟ
ಕುಲುಕುಲು ನಗುವ ಚೆಂದುಟಿಗಳ ರಸದೂಟ
ಎಂದು ಬರುವಳೋ…
ಮುಚ್ಚಿದ ಕದವ ತೆಗೆಯುವರಿಲ್ಲ
ದೀಪ ಹಚ್ಚುವವರಿಲ್ಲ
ಬಾ ಎಂದು ಕರೆದು ಆದರಿಸುವವರಿಲ್ಲ
ಅತ್ತಿತ್ತ ಹೊರಳಿದರೂ ನಿದ್ದೆಯಿಲ್ಲ
ಕನಸಲ್ಲೂ ಬಿಡದೆ ಕಾಡುವ ರೂಪಸಿ
ಮನದ ಮೂಲೆಯ ತಿಣುಕಿ ಕೆಣಕುವ ಊರ್ವಶಿ
ಎಂದು ಬರುವಳೋ ನನ್ನಾಕೆ
ಎನ್ನ ಹೃದಯವ ಕದ್ದಾಕೆ.
*****