ಲಕ್ಷೋಪಲಕ್ಷ ಕಣ್ಣುಗಳು
ಧೀಮಂತ ಮೂರ್ತಿಯ ದರ್ಶನಕೆ
ತ್ಯಾಗ ದೌನತ್ಯವ ಅರಿಯಲು
ಕಾತರಿಸುತ್ತಾರೆ
ಹತ್ತುತ್ತಾರೆ ಮೇಲೇರುತ್ತಾರೆ
ನಿನ್ನ ಅಡಿಯವರೆಗಷ್ಟೆ.
ಮತ್ತೆ ಮೇಲೇರುವ
ಕೆಚ್ಚಿಲ್ಲದ ಸಾಮಾನ್ಯರು
ನಿನ್ನ ಅಸಾಮಾನ್ಯತೆಗೆ
ಅದ್ಭುತ ಕಲಾಕೃತಿಗೆ
ಬೆರಗಾಗುತ್ತಾರೆ, ಶಿಲೆಯಾಗುತ್ತಾರೆ
ನಿನ್ನ ಅಂದ ಚೆಂದ ಉದ್ದ ಗಾತ್ರದ ಲೆಕ್ಕ
ಏನೀ ಅದ್ಭುತ | ಉದ್ಗಾರದ ಪುಳಕ
ಬಹಿರಂಗದ ಚೆಲುವ ಅಳತೆ
ಮಾಡುವವನಿಗೆ ಕಾಣುವುದೇ
ಆಂತರ್ಯದ ಬೆಳಕು
ಅರಿವಾಗುವುದೇ ಪಾಮರರಿಗೆ
ಎದೆಯಾಂತರಾಳದಿ
ಉರಿಯುವ ವೈರಾಗ್ಯ ಜ್ಯೋತಿ
ನಿನ್ನ ಕಣ್ಣುಗಳ ಕಾಂತಿಗೆ
ಆಂತರ್ಯದ ಬೆಳಕಿಗೆ
ವೈರಾಗ್ಯದ ಸಂಮ್ಮೋಹನಕೆ
ದಿಗಂಬರರಾಗುತ್ತಾರೆ
ಅರೆಗಳಿಗೆಯಷ್ಟೆ ಮತ್ತೆ
ಮಮಕಾರದ ಬಟ್ಟೆ ತೊಟ್ಟು
ಕೆಳಗಿಳಿಯುತ್ತಾರೆ
ಕತ್ತಲು ಕವಿಯುತ್ತದೆ
ಮೋಡ ಮುಸುಕುತ್ತದೆ
ಇಳಿಯುತ್ತಾರೆ
ಕೆಳಗಿಳಿಯುತ್ತಾರೆ
ರಸಾತಳದತ್ತ.
*****