ನಾನು ವಸುಮತಿ ನಿನ್ನ ಶ್ರೀಮತಿ
ದಿವ್ಯಾಲಂಕಾರಭೂಷಿತೆ
ನಿನ್ನ ಹೃದಯ ವಿರಾಜಿತೆ
ಸಸ್ಯಶ್ಯಾಮಲೆ, ನವರತ್ನ ಕೋಮಲೆ
ಆಗಿದೆನಿಂದು ಅಂಗಾಂಗ ವಿಕಲೆ.
ದಾನವನೊಬ್ಬನ ಕೈಯಿಂದ ಅಂದು
ಉಳಿಸಿದೆ ವರಾಹರೂಪದೆ ಬಂದು
ನೂರಾರು ದಾನವರಿಂದು
ಎಳೆದಾಡುತಿಹರು ಬಳಿ ನಿಂದು
ನನ್ನ ಗರ್ಭ ಸಂಜಾತರು
ಕೊಡಲಿ ಹಿಡಿದ ಕಿರಾತಕರು
ಅಂಗಾಂಗವ ಅಣುವಾಗಿ ಸಿಗಿದು
ನೆತ್ತರು ಹರಿಸುತಿಹರೆನ್ನ ಕೊಂದು
ಪರಿಸರದ ಗಾಳಿ ವಿಷಮಯವಾಗಿ
ಉಸಿರುಗಟ್ಟಿ ಪ್ರಾಣ ಹಿಂಡುತಿದೆ
ಎನ್ನೊಡಲ ಜೀವಜಲ ಹಿಂಗಿ ಹೋಗಿ
ರೋಗದ ಗೂಡಾಗಿ ನಿಂತಿಹೆ ನಾನು.
ಮನುಕುಲ ಬೆಳೆದು ಅನಂತ ಅಪಾರ
ತಂದಿದೆ ನನಗೆ ಕರಗದ ತಲೆಭಾರ
ಸಮತೋಲನ ತಪ್ಪಿ ಕುಸಿಯುತಿಹೆನೋ
ಭಯದ ನೆರಳಲಿ ತತ್ತರಿಸುತಿಹೆನೋ.
ಹೃದಯಾಂತರಾಳದ ನೂರು ನೋವು
ಹೆಪ್ಪುಗಟ್ಟಿದೆ ನಿಟ್ಟುಸಿರಿನ ಕಾವು
ಒಮ್ಮೊಮ್ಮೆ ಸಿಡಿದು ಸಹಸ್ರ ಹೋಳು
ಕಣ್ಮುಂದೆ ಕಾಣುತಿಹೆ ಮಕ್ಕಳಾ ಗೋಳು
ತಾಳಲಾರೆ ಈ ಪರಿವೇದನಾ
ನೋಡಲಾರೆ ಸುಜನರ ರೋಧನಾ
ಶ್ರೀಪತಿ ದಯೆ ತೋರಿಸು
ಕೈಹಿಡಿದೆನ್ನ ಉದ್ಧರಿಸು
*****