ಚೈತ್ರ ಬಂತು ಚೈತ್ರ
ಬದುಕು ಬವಣೆಯಾತ್ರೆ
ಅಳುವಿರಲಿ, ನಗುವಿರಲಿ
ಕಥೆಗೆ ತಕ್ಕ ಪಾತ್ರ
ಅಪ್ಪ ಅಮ್ಮ ಅಣ್ಣ ತಂಗಿ
ಜೊತೆಯಾದರು ಪಯಣಕೆ
ನಲಿವಿನಿಂದ ನೋವು ನುಂಗಿ
ನಡೆದೆವು ದೂರ ತೀರಕೆ
ತೀರ ದೂರ ಬದುಕು ಭಾರ
ಸೋಲುಂಡವು ಮೈಮನ
ಉರಿಯೋ ಬಿಸಿಲು ಸುರಿಯೋ ಮಳೆಯೋ
ಜಡವಾಯಿತು ಚೇತನ.
ಚೈತ್ರ ಬಂತು ಹರುಷ ತಂತು
ಸಂಭ್ರಮದಿ ಸಾಗರ
ಹಳತು ಬೇರು ಹೊಸ ಚಿಗುರು
ಬೇವು ಬೆಲ್ಲ ಬಂಧುರ
ಉಸಿರಾಯಿತು ಹಸಿರಾಯಿತು.
ಬದುಕಾಯಿತು ನಂದನ
ಚಿಗುರೊಡೆದು ಪಲ್ಲವಿಸಿತು
ಚೈತನ್ಯದ ಹೂಬನ
ಹೂವು ಗಂಧ ತುಂಬಿ ಬಂದ
ಝೇಂಕಾರದ ನಾದ
ಮನಸೆಳೆಯಿತು ಕಣ್ ತಣಿಸಿತು
ಪ್ರಕೃತಿ ಪ್ರಮೋದ.
ಮಾಮರದ ಕೋಗಿಲೆಯ
ಸುಶ್ರಾವ್ಯ ಗಾನ
ಎದೆಯ ಹಕ್ಕಿ ಪ್ರತಿಧ್ವನಿ
ತಂತನಾನ ತಾನ
ಚಿಗುರೆಲೆಗಳ ಆಗಮನ
ಹಣ್ಣೆಲೆಗಳ ನಿರ್ಗಮನ
ಉದಯಾಸ್ತಮಾನ
ಸೃಷ್ಠಿ ಸಂವಿಧಾನ.
ಮನ ಮನಗಳ ಮಧುರ ಬೆಸುಗೆ
ಭಾವಾತಿಬಂಧನ
ಸರಸ ವಿರಸ ಸಾಮರಸ್ಯ
ಸುಖದ ಸೋಪಾನ.
*****