ಸಂಘ ಪರಿವಾರವೆಂಬ ವಾನರ ಸೇನೆಯ ಮುಂದೆ ಲಕ್ಷ್ಮಣನಂತಹ ಲಾಲ್‌ಕೃಷ್ಣ ಅಡ್ವಾಣಿ ಅಪರಾಧಿ ಮುಖಭಾವ ಹೊತ್ತು ಹುಬ್ಬುಗಂಟಿಕ್ಕಿಕೊಂಡು ಕಟಕಟೆಯಲ್ಲಿ ನಿಂತಿದ್ದಾರೆ. ಶ್ರೀರಾಮನಂತಹ ವಾಜಪೇಯಿ ನಿಲ್ಲಲೂ ತ್ರಾಣವಿಲ್ಲದೆ ನ್ಯಾಯಪೀಠದಲ್ಲಿ ಆಸೀನರಾಗಿ ಪೈಲ್ಸ್‌ ರೋಗಿಯಂತೆ ಫೋಜ್ ಕೊಡುತ್ತಿದ್ದಾರೆ. ಲಾಲ್‌ಕೃಷ್ಣ ಪಾಕಿಸ್ತಾನದಲ್ಲಿ ಮಾಡಿದ ಕಮಾಲ್ ಅನ್ನು ಆರ್‌ಎಸ್‌ಎಸ್ `ಎಸ್’ ಅನ್ನದೆ `ನೋ’ ಎಂದು ಕಿಡಿ ಕಾರುತ್ತಿದೆ. ವಿ.ಹಿ. ಪರಿಷತ್ತು, ಭಜರಂಗದಳವೆಂಬ ವಾಲಿ-ಸುಗ್ರೀವರ ಸೇನೆ ಬಾಲಕ್ಕೆ ಬೆಂಕಿ ಬಿದ್ದಂತೆ ಒಂದೆಡೆ ಎಗರಾಡುತ್ತಿದ್ದರೆ, `ರಾಜೀನಾಮೆ ಹಿಂದಕ್ಕೆ ಪಡೆಯಿರಿ ಅಡ್ವಾಣಿ’ ಎಂದು ಒಂದಷ್ಟು ಜನ ಹಿಂದೆಯೂ ಬಿದ್ದಿದ್ದಾರೆ. ಆಂಧ್ರಾವಾಲಾ ವೆಂಕಯ್ಯನಾಯ್ಡು ತಾನೇ ಪಕ್ಷದ ಮುಂದಿನ ಅಧ್ಯಕ್ಷನೆಂಬ ಕನಸು ಕಾಣುತ್ತಾ ಮನದಲ್ಲೇ ಅಡ್ವಾಣಿ ತಿಥಿ ಮಾಡಿ ವಡೆ ಪಾಯಸ ತಿನ್ನುವಾಗಲೇ ಗುಜರಾತಿನ ಗುಜರಿ ನರೇಂದ್ರಮೋದಿ ಪಾಯಸದಲ್ಲಿ ಕಲ್ಲಿನಂತೆ ಕಾಣಿಸಿಕೊಳ್ಳುತ್ತಾನೆ. ತತ್‌ಕ್ಷಣವೇ ಆತನೇ ನಮ್ಮ ಪಕ್ಷಕ್ಕೆ ಲಾಯಕ್ಕಾದ ಅಧ್ಯಕ್ಷ. ಇಂತಹ ನರರಾಕ್ಷಸನಿಂದ ಮಾತ್ರವೇ ಹಿಂದುತ್ವ ಉಳಿಯಲು ಸಾಧ್ಯವೆಂದು ಕೆಲವರು ಹಕ್ಕೊತ್ತಾಯ ಮಾಡುತ್ತಾರೆ.

ಕಟಕಟೆಯಲ್ಲಿ ನಿಂತಿರುವ ಅಡ್ವಾಣಿ ರಾಜೀನಾಮೆಯನ್ನು ವಾಪಾಸ್ ಪಡೆಯುವುದಿಲ್ಲವೆಂದು ಮೂರು ಸಾವಿರದ ಮುನ್ನೂರ ಮೂರನೇ ಸಾರಿ ರಾಗ ಎಳೆಯುತ್ತಾರೆ. ಪ್ರವೀಣ್ ತೊಗಾಡಿಯಾ ಎಂಬ ತಲೆಕೆಟ್ಟ ಆಸಾಮಿ ಪಬ್ಲಿಕ್ ಪ್ರಾಸಿಕ್ಯೂಟರ್‍ ಸ್ಥಾನದಲ್ಲಿ ನಿಂತಿದ್ದಾರೆ. ಬಾಯಿಬುಡುಕ ವೆಂಕಯ್ಯನಾಯ್ಡು ಡಿಫೆನ್ಸ್ ಲಾಯರ್‍ ಪಾತ್ರ ವಹಿಸಿದ್ದಾರೆ. ಆರ್ಗ್ಯುಮೆಂಟ್ ಆರಂಭವಾಗುತ್ತದೆ.

ಪ್ರವೀಣ್ ತೊಗಾಡಿಯಾ: ತಾವೇ ನಿಂತು ಬಾಬರಿ ಮಸೀದಿ ಕೆಡವಿಸಿದ ಅಡ್ವಾಣಿಜೀಗೆ ಹದಿಮೂರು ವರ್ಷಗಳ ನಂತರ ವಿಷಾದ ವ್ಯಕ್ತಪಡಿಸುವಂತಹ ಅಜ್ಞಾನೋದಯ ಏಕಾಯಿತು?

ವೆಂಕಯ್ಯನಾಯ್ಡು: ವೆರಿ ಸಿಂಪಲ್; ರೋಮ್ ದೇಶದಲ್ಲಿದ್ದಾಗ ರೋಮ್ನರಂತೆ ಇರಬೇಕೆಂಬ ಡೈಲಾಗ್ ಕೇಳಿಲ್ಲವೆ? ಅದು ಅಪಾಯರಹಿತ ಕೂಡ ಮೈ ಫ್ರೆಂಡ್.

ಪ್ರ. ತೊ. : ನೊ ನೋ, ವಿಷಾದಿಸಲೆಂದೇ ಅಡ್ವಾಣಿಜಿ ಪಾಕ್‌ಗೆ ಹೋದರೆಂಬ ಅಸಲಿ ಗುಮಾನಿ ನಮ್ಮ ಸಂಘದವರನ್ನು ಕಿತ್ತು ತಿನ್ನುತ್ತಿದೆ ಯುವರ್‍ ಆನರ್‍.

ವೆಂ. ನಾ. : ಇಂತಹ ಗುಮಾನಿಯ ಬಗ್ಗೆಯೇ ಗುಮಾನಿ ಇದೆ ಯುವರ್‍ ಆನರ್‍. ಅಡ್ವಾಣಿ ತಮ್ಮ ಹುಟ್ಟೂರು ಕರಾಚಿ ಕಂಡು, ಅವರು ಓದಿದ ಶಾಲೆ ನೋಡಿ ಆನಂದಿಸಲೆಂದೇ ಹೋಗಿದ್ದಂಡಿ. ಭಾರತಕ್ಕೆ ಪರ್ವೇಜ್ ಮುಷರ್‍ರಫ್ ಬಂದಿರಲಿಲ್ಲವೆ. ತಾವು ಪುಟ್ಟಿನ ನೆಹರ್‌ವಾಲಿ ಹವೇಲಿ ಚೂಸಿ ಆನಂದಿಸಲಿಲ್ಲವೆ? ಭಾರತ ಪಾಕಿಸ್ತಾನದ ನಡುವೆ ಕಚ್ಚಾಟ ಜಿದ್ದಾಜಿದ್ದಿ ಬೇಡ. ಕಾಶ್ಮೀರದ ಮ್ಯಾಟರ್‍ ಪಾಕ್‌ಗೆ ನಾಟ್ ಇಂಪಾರ್ಟೆಂಟ್ ಅಂದಿರಲಿಲ್ಲವೆ? ಮರಚಿಪೋಯಾರಾ?

ಪ್ರ. ತೊ. : ಓಹ್ ಆದ್ಮಿ ಬಾಯ್ತಪ್ಪಿ ಅಂದು ಬೇನಾಮಿಗೆ ತುತ್ತಾಗಲಿಲ್ಲವೆ? ಪಾಕ್‌ನಲ್ಲಿಯೇ ಅವರ ವಿರುದ್ಧ ಧ್ವನಿ ಎದ್ದಾಗ ದನಿ ಬದಲಿಸಿ, `ಭಾರತದ ಮೇಲೆ ತಮಗೆ ದ್ವೇಷ’ ಎಂದು ಮಾಧ್ಯಮಗಳ ಎದುರು ತಪಡೆ ಬಡಿದಿದ್ದನ್ನು ಬೂಲ್ ಗಯಾ ಕ್ಯಾ? ಶೃಂಗಸಭೆಗೂ ಹಾಜರಾಗದೆ ಮಿಡ್‌ನೈಟ್‌ನಲ್ಲಿ ಫ್ಲೈಟ್ ಏರಿ ಪರಾರಿಯಾಗಲಿಲ್ಲವೆ? ನಿಯತ್ತು ಅಂದ್ರೆ ಅದು ಕಣ್ರಿ ನಾಯ್ಡು.

ವೆಂ. ನಾ. : ಮತ್ತೊಂದು ಪಾಯಿಂಟು ಯುವರ್‍ ಆನರ್‍. ಮೊರಾರ್ಜಿ ದೇಸಾಯಿಗೆ ನಿಶಾನ್-ಎ-ಪಾಕಿಸ್ತಾನ್ ಪ್ರಶಸ್ತಿ ಬಂದಾಗ ಅವರೂ ಪಾಕಿಗಳನ್ನು ಕೊಂಡಾಡಿದ್ದುಂಟು. ಪತ್ರಿಕಾ ಕಟಿಂಗ್ಸ್ ನೋಡಿ ಯುವರ್‍ ಆನರ್‍.

ಪ್ರ. ತೊ. : ಆಫ್‌ಕೋರ್ಸ್. ಮೊರಾರ್ಜಿ ಆರ್‌ಎಸ್‌ಎಸ್ ಪ್ರಾಡಕ್ಟ್ ಅಲ್ಲ ಮಿಸ್ಟರ್‍ ನಾಯ್ಡು…. ಆದರೆ ಈ ಹಿಂದುತ್ವವಾದಿ ಜೀವಮಾನವಿಡೀ ಆರ್‌ಎಸ್‌ಎಸ್‌ನಲ್ಲಿದ್ದು ಅದರ ಬೆಂಬಲದಿಂದಲೇ ದಿಲ್ಲಿ ಗದ್ದುಗೆ ಏರಿ ಸಕಲ ಸೌಲಭ್ಯವನ್ನೂ ಪಡೆದು ತಿಂದು ತೇಗಿ ಮುದಿಯಾದ ಮೇಲೆ ಪಾಕ್‌ಗೆ ಹೋಗಿ ಪಾಕಿಸ್ತಾನದ ಬಿರಿಯಾನಿ ರುಚಿಗೆ ಮರುಳಾಗಿ ಮುಷರಫ್‌ಗೆ ಮುತ್ತಿಟ್ಟಿದ್ದು ಅಖಂಡ ಹಿಂದೂಗಳಿಗೆ ಗೈದ ಘನಘೋರ ಅಪರಾಧ.

ವೆಂ. ನಾ. : ಹೊರ ದೇಶಕ್ಕೆ ಹೋದ ದೇಶದ ನಾಯಕನೊಬ್ಬ ಅಲ್ಲಿನ ನಾಯಕನನ್ನು ಹೊಗಳೋದು ಸದ್ಭಾವನೆ ಕಣಯ್ಯ ತೊಡರುಗಾಲು ವಾಡಿಯಾ.

ಪ್ರ. ತೊ. : ಇದು ದ್ವಂದ್ವ ಹೇಡಿತನ ಹಾಸ್ಯಾಸ್ಪದ. ಬಾಬರಿ ಮಸೀದಿ ಮ್ಯಾಟರ್‍ ಒಂದೇ ಆಗಿದ್ದರೆ ಸೈರಿಸಿಕೊಳ್ಳಬಹುದಿತ್ತು. ಪಕ್ಕಾ ಜಾತಿವಾದಿ ಭಾರತ ವಿಭಜನೆಗೆ ಕಾರಣನಾದ ಜಿನ್ನಾನನ್ನು ಜಾತ್ಯಾತೀತ ನಾಯಕ, ಇತಿಹಾಸ ಸೃಷ್ಟಿಸಿದ ನಾಯಕ ಎಂದೆಲ್ಲಾ ಭಟ್ಟಂಗಿತನ ಮಾಡಿದ್ದನ್ನು ಒಪ್ಪಲು ಹೇಗೆ ಸಾಧ್ಯ ಯುವರ್‍ ಆನರ್‍?

ವೆಂ. ನಾ. : ಒಪ್ಪಬೇಕಂಡಿ. ಬಿಜೆಪಿ ನೆಲ ಕಚ್ತಾ ಇದೆ. ಮುಸ್ಲಿಮರ ಓಟು ಪಡೆಯಲು ಇಂತಹ ಗಿಮಿಕ್‌ಗಳನ್ನು ಚೇಸ್ತೆ ತಪ್ಪು ಕಾದು ಯುವರ್‍ ಆನರ್‍ ಮೀರೆ ಚಪ್ಪಂಡಿ.

ಪ್ರ. ತೊ. : ಹಿಂಗಾದ್ರೆ ನಿಮ್ಮನ್ನು ಹಿಂದೂಗಳು ನಂಬಲ್ಲ. ಸಾಬರು ಕ್ಯಾರೆ ಅನ್ನಲ್ಲ ಕಣ್ರಿ ನಾಯ್ಡು. ಅನಾದಿ ಕಾಲದಿಂದ ಚೆಡ್ಡಿವಾಲನಾಗಿದ್ದ ಅಡ್ವಾಣೀಜಿ ಮೂಲತಃ ಪಾಕಿಸ್ತಾನದವರಾದ್ದರಿಂದ ಅಸಲಿ ಬುದ್ಧಿ ಹೊರಬಿದ್ದಿದೆ ಕಣ್ರಿ. ಪ್ಲೀಸ್ ನೋಟ್ ದಿಸ್ ಪಾಯಿಂಟ್ ಯುವರ್‍ ಆನರ್‍.

ಇದ್ದಕ್ಕಿದ್ದಂತೆ ಘನಘರತಿ ಸುಷ್ಮಾ ಚೀರಿದಳು `ಹಂಗಂದ್ರೆ ಹೆಂಗ್ರಿ? ಡೆಲ್ಲಿಯಲ್ಲಿ ಮುಷರಫ್ ಹುಟ್ಟಿದ್ದರಿಂದ ಆತನ ಹಿಂದೂ ಅನ್ನಲಿಕ್ಕೆ ಆಗುತ್ತೇನ್ರಿ? ಧಡಕ್ಕನೆ ಮುರಳಿ ಮನೋಹರ್‍ ಜೋಷಿಯೂ ಅಬ್ಬರಿಸಿದ. `ಇಬ್ಬರನ್ನು ಅದಲುಬದಲು ಮಾಡಿಕೊಳ್ಳೋಣ. ಅಡ್ವಾಣಿನಾ ಕರಾಚಿಗೆ ಓಡಿಸಿ ಮುಷರಫ್‌ನ್ನ ಇಲ್ಲಿಗೆ ಕರೆಸಿಕೊಳ್ಳೋಣ. ಕ್ಯಾ ಬೋಲ್ತೆ ಹೋ ಯುವರ್‍ ಆನರ್‍? ವಾಜಪೇಯಿ ಅಂಗಾರಾಗಿ `ಸೈಲೆನ್ಸ್ ಸೈಲೆನ್ಸ್’ ಎಂದು ಮೇಜು ಕುಟ್ಟಿದರು.

ಪ್ರ. ತೊ. : ಯುವರ್‍ ಆನರ್‍, ಅಡ್ವಾಣಿಜಿ ಪಾಕ್‌ಗೆ ಹೋಗಿದ್ದು ಮೊದಲ ತಪ್ಪು. ವಾರಗಟ್ಟಲೆ ಅಲ್ಲಿದ್ದು ಲಾಲ್‌ಟೋಪಿ ಹಾಕಿ ಸಿಕ್ಕ ಸಿಕ್ಕ ದರ್ಗಾ ನುಗ್ಗಿ ನಮಾಜ್ ಮಾಡಿದ್ದು ಎರಡನೇ ತಪ್ಪು, ಬಾಬರಿ ಮಸೀದಿ ಬಗ್ಗೆ ಉಲ್ಟಾ ಹೊಡೆದದ್ದು ಮೂರನೇ ತಪ್ಪು, ಜಿನ್ನಾ ಬಗ್ಗೆ ಜೇನು ಸುರಿಸಿದ್ದು ನಾಲ್ಕನೇ ತಪ್ಪು. ಇಷ್ಟೆಲ್ಲಾ ಡ್ರಾಮಾ ಮಾಡಿ ಈಗ ರಾಜೀನಾಮೆ ನಾಟ್ಕ ಆಡ್ತಾ ಇರೋದು ವೆರಿಬಿಗ್ ತಪ್ಪು.

`ನಾನೂ ಹೋಗಿ ಬಂದಿನಲ್ರಿ?’ ನುಣ್ಣನೆ ವಾಜಪೇಯಿ ಸಣ್ಣಗೆ ವಾಯ್ಸ್ ಎತ್ತಿದರು.

ಪ್ರ. ತೊ. : ಆಫ್‌ಕೋರ್ಸ್. ಆದರೆ ಕಾಗೆ ಕಾಕಾ ಅನ್ನದೆ ಕೋಗಿಲೆ ತರ ಗಾನ ಹಾಡಿದರೆ ಕಾಗೆಗಳಿಗೆ ಗುಮಾನಿ ಕಾಡುವುದಿಲ್ಲವೇ? ಕುಕ್ಕದೆ ಸುಮ್ಮನಿರಲಾದೀತೆ? ಹಲವಾರು ತರಹೆ ಡವಟುಗಳುಂಟಾಗಲ್ವೆ ಯುವರ್‍ ಆನರ್‍.

ವೆಂ. ನಾ. : ಅಡ್ವಾಣಿ ಏನೇ ಮಾಡಿರಲಿ; ಏನೇ ಆಡಿರಲಿ ಅದು ರಾಜಕೀಯ ತಂತ್ರಗಾರಿಕೆ ತಳ ಹಿಡಿದಿರುವ ನಮ್ಮ ಪಕ್ಷಕ್ಕೆ ಪಕ್ಕ ವೆಯಿಟೇಜ್ ತಂದುಕೊಡಲು ಭಟ್ಟಂಗಿಯಾದರಷ್ಟೆ ಬಿಕಾಸ್ ಅವರ ಪಾಕ್ ಪ್ರವಾಸ ಫ್ರೂಟ್‌ಫುಲ್. ಜಿನ್ನಾ ಸಾಹೇಬರನ್ನು ಕೋಮುವಾದಿ ಅನ್ನಲು ಕೋಮುವಾದಿಗಳಾದ ನಮಗೆ ಹಕ್ಕಿಲ್ಲ. ಅವರ ಪ್ರವಾಸ ಶ್ಲಾಘನೀಯ. ಕಾರಣ ನ್ಯಾಯಾಧೀಶರು ಅಡ್ವಾಣೀಜಿಗೆ ಕೂಡಲೇ ರಾಜೀನಾಮೆ ವಾಪಸ್ ಪಡೆಯಲು ಹುಕುಂ ಮಾಡಲು ಸರ್ವರ ಪರವಾಗಿ ನೇನು ಮನವಿ ಚೇಸ್ತುನ್ನಾನು. ದಟ್ಸಾಲ್ ಯುವರ್‍ ಆನರ್‍.

ವಾಜಪೇಯಿ ಗಂಟಲು ಸರಿಪಡಿಸಿಕೊಂಡು ತೀರ್ಪನ್ನು ಓದಲಾರಂಭಿಸಿದರು. ಒಂದೇ ಪಾರ್ಟಿಯ ಇಬ್ಬರ ಸುದೀರ್ಘವಾದ-ವಿವಾದಗಳನ್ನು ಆಲಿಸಿದ ನಂತರ ನ್ಯಾಯಪೀಠವು ಈ ಕೆಳಕಂಡ ತೀರ್ಮಾನಕ್ಕೆ ಬಂದಿದೆ. ಮೂಲತಹಃ ಜನಿವಾರಿಗಳಾದ ನಾವು ಶತ್ರು ದೇಶದಲ್ಲಿದ್ದಾಗ ಅವರಿಗೆ ಅಪ್ರಿಯವಾಗಿ ಆಡಿದರೆ ಅಲ್ಲಿಂದ ವಾಪಸ್ ಬರುವ ಆಸೆ ಬಿಡಬೇಕಾಗುತ್ತದಲ್ಲವೆ. ಕಾರಣ ಪ್ರಾಣಾಪಾಯದ ಸನ್ನಿವೇಶದಲ್ಲಿ ಅಪ್ರಿಯ ಸತ್ಯ ಸಲ್ಲುತ್ತದೆ. ಭಟ್ಟಂಗಿತನ ನಮ್ಮ ರಕ್ತದಲ್ಲೇ ಹರಿಯುತ್ತಿರುವುದರಿಂದ ಅದು ರಕ್ತದ ತಪ್ಪು. ಭಾಯಿ ಅಡ್ವಾಣಿಯದಲ್ಲ. `ಅಡ್ವಾಣಿ ಮುಪ್ಪಾಗಿ ಗರತಿಯಾದದ್ದು ನಾಚಿಕೆಗೇಡು’ ವಿ.ಹಿ.ಪ. ಗದ್ದಲ್ವೆಬ್ಬಿಸಿತು. `ಖಾಮೋಷ್’ ಗದರಿದ ವಾಜಪೇಯಿ ಟೆನ್ ಮಿನಿಟ್ಸ್ ರೆಸ್ಟ್ ತಗೊಂಡ ನಂತರ ತೀರ್ಪು ಮುಂದುವರಿಸಿದರು. ನೀವೆಲ್ಲಾ ಒಪ್ಪಲೇಬೇಕಾದ ಕಹಿಸತ್ಯ ಒಂದಿದೆ ಕೇಳ್ರಿ ಹೇಳ್ತಿನಿ. ನಾನು ಮತ್ತು ಅಡ್ವಾಣಿ ನೆಗ್ದು ಬಿದ್ದು ಹೋದ್ರೆ ಅಥವಾ ಪಕ್ಷ ಬಿಟ್ಟರೆ ಪಕ್ಷಕ್ಕೆಲ್ಲಿದೆಯೋ ದ್ರ್‍ಯಾಬೆಗಳಾ ನೆಲೆಬೆಲೆ? ಯಾವ ನಾಯಕನನ್ನು ನಂಬಿ ಓಟು ಡಾಲ್ತಾರ್‍ರೆ ಸುವ್ವರೋಂ? ಮುರಳಿ ಮನೋಹರ್‍ ಜೋಷಿ ಮುರಳಿಗಾನ ಯಾರಿಗೆ ಬೇಕ್ರಯ್ಯ? ಪ್ರಮೋದ್ ಮಹಾಜನ್ ಹಿಂದೆ ಯಾವ ಜನವೂ ಇಲ್ಲ. ಸುಮ್ಗಿರಿ… ಯಶವಂತ ಸಿನ್ಹನ ಹೆಸರಲ್ಲಷ್ಟೇ ಯಶಸ್ಸಿರೋದು. ತೆಲುಗಿಬಿಡ್ಡ ವೆಂಕಯ್ಯನಿಗೆ ಆಂಧ್ರದಲ್ಲೇ ನೋ ಪ್ಲೇಸ್. ಕರ್ನಾಟಕದವರೇ ಈವಯ್ಯನಿಗೆ ಆಕ್ಸಿಜನ್ನು. ನಾನು ಯಾವಾಗ ಶ್ರೀರಾಮನ ಪಾದಾರವಿಂದ ಸೇರ್‍ಕೋತೀನೋ ಡೆಫನೆಟಿಲ್ಲ. ಸೋ ನಿಮ್ಮ ನಾಯಕ ಅಡ್ವಾಣಿನೇ ಯಾವತ್ತಿದ್ದರೂ, ಅಂಬೋದು ಅಷ್ಟೆ ಢೆಪನೆಟ್ಟು. ದೇರ್‌ಫೋರ್‍ ಆಡ್ವಾಣಿಜೀ ರಾಜೀನಾಮೆ ಹಿಂದಕ್ಕೆ ಪಡೆಯತಕ್ಕದ್ದು.

ಅಡ್ವಾಣಿ ಮುಖ ದಿಡ್ಡಿ ಬಾಗಿಲಾಯಿತಾದರೂ ತೋರಗೊಡದೆ ಹುಬ್ಬುಗಂಟಿಕ್ಕಿ ಒಪ್ಪಿಗೆ ಸೂಚಿಸಿ ಆದ ಆನಂದವನ್ನು ಬಚ್ಚಿಟ್ಟರು. ವಿ.ಹಿ.ಪ.ನ ಪಟಾಲಮ್ಮಗಳು ತೀರ್ಪಿನ ವಿರುದ್ಧ ಧಿಕ್ಕಾರ ಕೂಗಲಾರಂಭಿಸಿದರು. ಕಳೆದದ್ದು ಪಡೆದುಕೊಂಡ ಮಗುವಿನ ಖುಷಿಯಲ್ಲಿ ಧಿಕ್ಕಾರದ ಗೂಗಿಗೇ ಧಿಕ್ಕಾರವೆಂದು ಬೋಳುತಲೆ ಸವರಿ ನಕ್ಕ ಅಡ್ವಾಣಿ, ತಡಮಾಡದೆ ಬಿಹಾರ ಸರ್ಕಾರದ ವಿಸರ್ಜನೆ ಅನ್ಯಾಯವೆಂದು ಹೋರಾಟ ನಡೆಸಲು ಕಚ್ಚೆಕಟ್ಟಿ ಹೊರಟೇ ಬಿಡಬೇಕೆ! ಅದರ ಹಿಂದೆ ಬಿಜೆಪಿಗಳೆಲ್ಲಾ ಒಮ್ಮೆಲೆ ಬಿಪಿ ಏರಿಸಿಕೊಂಡು ಫಾಲೋ ಮಾಡಹತ್ತಿದರು. ನ್ಯಾಯಪೀಠದಲ್ಲಿ ಕುಳಿತ ವಾಜಪೇಯಿ ಒಂಟಿಯಾದ ದುಃಖವನ್ನು ಭರಿಸಲಾಗದೆ ಕವಿತಾ ಗೀಚಲು ಲೇಖನಿ ಕೈಗೆತ್ತಿಕೊಂಡರು. ಕವಿತಾ ಬರೋಬದ್ಲು ನಿದ್ದೆ ಬಂತು.
*****

ದಿನಾಂಕ ೨೯-೦೬-೨೦೦೫