ಸೆರೆನಿಶೆಯ ಗುಂಗಿನ ಗುಳ್ಳೆಗಳ ಹೂಟ್ಟೆಯುಬ್ಬರತನವಲ್ಲ ಇದು
ಈ ಕೈಯಿಂದಾ ಕೈಗೆ ಮಾಯವಾಗಿ ಬರುವ ಪೈಶಾಚೀ ಪೇಚಲ್ಲ
ಯಾರದೋ ಜೇಬು ಖಾಲಿಯಾಗಿ ಯಾರದೋ ಬೊಜ್ಜು ಭರ್ತಿಯಾಗಿ
ಒಮ್ಮೆಲೇ ಮೇಲೆದ್ದ ಅರ್ ಸಿ ಸಿ ಮಹಲಲ್ಲ

ಕೋಳಿ ಕೆದರಿ, ಊರಹಂದಿ ಗೂರಿ
ಮೈಗಳ್ಳೆಮೈ ಗಮ್ಮೆಂಬ ಕೊಳಚೆ ಹೊಂಡದಲ್ಲಿ ಬಿದ್ದಲ್ಲಿ
ಹರಿದಾಡಿಯಾವು ಬರೀ ಹುಳ
ಮರ್ಯಾದೆ ಪಾಚಿಗಟ್ಟಿ ಹಾಕೀತು ಹೊಸ ಸೋಗು
ಹೊಟ್ಟೆಯಲ್ಲೇ ಕೈಕಾಲಾಡಿಸಿ ಭಂಡಗೆಟ್ಟ ಬಸಿರ ಹೊಸೆದರೆ ಬರೀ ನರಳಾಟ
ಬೆಳಕಿಗೆದೆತೆರೆಯುವ ಮನ ತಿಪ್ಪೆಯಲ್ಲಿ ಹೂಳಿಹೋಗಬಹುದಷ್ಟೆ

ಹೊಗೆಯುಗುಳುಗುಳಿ ಇಲ್ಲಣಗಟ್ಟಿದ ಗೂಡಿನಲ್ಲುಲಿಯದು ಪಾಡುವಕ್ಕಿ.
ಕದಡೆಲ್ಲ ಇಳಿದು ತಳಕೆ ಹದವಾಗಿ ತಿಳಿಹೊಳೆ ಹರಿಯ ಹತ್ತಿದರೆ
ಮೇಲೆ ಕೆಳಗೀಜಾಡಿಯಾವು ಮೀನು
ಬೀಜ ಮೊಳಕೆ ಚಿಗುರಾಗಿ ಕಸದಿಂದ ರಸವೊಸರಿ
ಹಸಿರೆತ್ತೀತು ಛತ್ತರಿತಲೆ ನಳ ನಳಿಸಿ ಚಿಮ್ಮಿ ಚೈತನ್ಯಚಿಲುಮೆ
ಸತ್ಯದ ಬೇರಿಂದ ಸತ್ವ ಹೀರಿ ನಿತ್ಯನೂತನ ಸೊಬಗು
ಮುಗಿಲ ಮಾತಾಡಿಸುತ್ತದೆ

ಸೃಷ್ಟಿಯೆಂದರೆ ಬೆವರ ಹನಿಹನಿ ಪೋಣಿಸಿ ಹೆಣೆದ ಹೂಮಾಲೆ
ಬಿಂದು ಸಿಂಧುವಾಗುವ ಕಣವು ಕೂಸಾಗುವ ಸಾಧನ
ಒಂದೊಂದೇ ಕಡ್ಡಿಕೂಡಿಸಿ ಜೋಡಿಸಿ ಹೆಣೆದ ಗುಬ್ಬಚ್ಚಿಗೂಡು
ಎಲೆ ಎಲೆ ಕಟ್ಟಿದ ಪರ್ಣಶಾಲೆ ಮಳೆ ಗಾಳಿ ಚಳಿಬಿಸಿಲುಗಳಲ್ಲಿ
ಸೃಷ್ಟಿಯೊಡನೆ ಸಂದಿಲ್ಲಿದೆ ಹೊಂದಿಕೊಂಡ ಸಹಜ ಕೃತಿಯಯ್ಯ ಸೃಷ್ಟಿ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)