ಬರೆಯಬೇಕು ಚಿತ್ತಾರ
ಅಂಗಳಕ್ಕೊಂದು ಶೃಂಗಾರ
ಕಸಕಡ್ಡಿ ಕಲ್ಲು ಮಣ್ಣು
ಗುಡಿಸಿ ತೊಳೆದು ಬಳಿದು
ನೆಲವಾಗಬೇಕು ಬಂಗಾರ
ಬರೆಯಬೇಕು ಚಿತ್ತಾರ
ಚಿತ್ತಾರವಾಗಬೇಕು ಸುಂದರ
ಉದ್ದ ಗೆರೆಗಳಾದರೆ ಲೇಸು
ಅಡ್ಡ ಗೆರೆಗಳಾದರೆ ಸಲೀಸು
ಸಣ್ಣ ಚುಕ್ಕಿ ದೊಡ್ಡ ಚುಕ್ಕಿ
ಕೂಡಿ ಬರೆಯಬೇಕು
ವಕ್ರವಾದರೆ ವಕ್ರ
ನೇರವಾದರೆ ನೇರ
ರಂಗೋಲಿ ಬರೆವ ಕೈ
ಮಿಗಿಲಾಗಿ ಮನಸ್ಸು
ತಿಳಿಯಾಗಿ ಪರಿಶುದ್ಧವಾಗಿ
ಆಗಷ್ಟೇ ಚಿತ್ತಾರಕ್ಕೊಂದು ಜೀವ
ಅನನ್ಯತೆಯ ಭಾವ
ಚಿತ್ತಾರವೇನು ಶಾಶ್ವತವಲ್ಲ
ಕಾಲ್ತುಳಿತಕ್ಕೆ ಬಿರುಗಾಳಿ ಮಳೆಗೆ
ನೊಂದು ನಲುಗಬಹುದು
ಮಳೆಯ ಆರ್ಭಟಕೆ
ಕೊಚ್ಚಿ ಹೋಗಲು ಬಹುದು
ಅದೃಷ್ಟ ಆಯಸ್ಸಿದ್ದರೆ
ಸೂರ್ಯ ಅಸ್ತಮಿಸುವರೆಗೂ
ಚಂದ್ರ ತಾರೆಗಳ ಅಂದ
ಸವಿಯಲೂ ಬಹುದು
ಬರೆಯುವುದಷ್ಟೇ ನಮ್ಮ ಕರ್ಮ
ಚಿತ್ತಾರದ ಅಳಿವು ಉಳಿವು
ಮೇಲಿನವನ ಧರ್ಮ
*****



















