ಸವಾಲೊಂದು ನಿನ್ನ ಮೇಲ್
ಶಾಹಿರ ಕೇಳ್                                            |ಪ|

ಬಯಲು ಅಲಾವಿಗೆ ನವಿಲು ಕುಣಿದು ನಿಂತು
ತೈಲವಿಲ್ಲದ ಜ್ಯೋತಿ ಬೆಳಕು ಮದೀನದಿ                   |೧|

ಆವಿ ಹೊಟ್ಟಿಯಲೊಂದು ಎಮ್ಮಿಕರವ ಹುಟ್ಟಿ
ಹಮ್ಮಿಲೆ ಹೈನ ಮಾಡಿತೋ ಮಕ್ಕಾಮದೀನದಿ              |೨|

ಮಲದ ತೆಲಿಯಮ್ಯಾಲ ಇಲಿ ಹೋಗಿ ಕುಳತಿತ್ತು
ಸಲಗಿ ಹಚ್ಚಿದ ನರಿ ಹುಲಿಯಕೊಂದಿತು ಹಾರಿ               |೩|

ಪಂಜರದೊಳಗಿನ ಹುಂಜ ಕಾಮಿಯ ನುಂಗಿ
ಪಿಂಜಾರಣ್ಣನ ಜ್ಯೋತಿ ಪಂಜಾಗಿ ಉರದಿತು                |೪|

ಬಂಡಿಗಾಲಿಯೊಳು ಬೆಂಕಿಯ ಒತ್ತಿಟ್ಟು
ಪುಂಡ ಯಜೀದನ ಕುಂಡಿಯು ಸುಟ್ಟಿತು                    |೫|

ತಾಬೂತಿನೊಳಗೊಂದು ತಗಡಿನ್ಹಸ್ತವ ಕಂಡು
ಮಾಬೂಬೆ ಶಿಶುನಾಳಧೀಶಗ ನಗಿ ಬಂತು                  |೬|
*****