ಫಿರ್ದೌಸಿ

ಘಜನಿಯ ಹಾದಿ

ಯಾರಲ್ಲಿ ನೋಡು ಹೋಗುತಿದ್ದಾರೆ-ಕುದುರೆ
ಗಾಡಿಯಲಿ ಈ ಅವೇಳೆ
ದಿನದ ಕೂನೆಬಿಸಿಲ
ಖುರಪುಟದ ಧೂಳಿ
ಶತಮಾನಗಳಾಚೆ ಹೊರಳಿ

ಝಾರತೂಷ್ಟ್ರ ನಡೆದ-ಡೇರಿಯಸ್‌ ನಡೆದ
ಖುಸ್ರು ಇಡಿ ಭೂಖಂಡವನ್ನೆ ಸದೆ
ಬಡಿದ
ಯಾಜ್ದೆಗರ್ದ್‌ ಆಹ ! ಅನ್ನ ನೀರಿರದೆ
ಗಡಿಯಿಂದ ಗಡಿಗೆ
ಓಡೋಡಿ ಮಡಿದ

ಆ ವರ್ಷ ನೆರೆ ಬಂತು
ಟೈಗ್ರಿಸ್‌ ನದಿಯಲ್ಲಿ
ಆ ವರ್ಷ ನೆರೆ ಬಂತು
ಮರು ವರ್ಷವೂ ಬಂತು
ನೆರೆಯಿಳಿದು ಕೊಚ್ಚೆ
ದಡದಲ್ಲಿ ನಿಂತು
ಮಣ್ಣಿನ ಮೂರ್ತಿಗಳ ಮಾಡಿದವರೇ
ಮನುಷ್ಯರೇ

ಆಜರ್‌ ಬೈಜಾನ್‌ನಲೊಂದು
ಅಗ್ನಿದೇವಳವಿತ್ತು
ಅಗ್ನಿದೈವವೆ ಅದನ್ನ
ನುಂಗಿಹಾಕಿತ್ತು

ಅಂಥ ಹೊತ್ತಿನಲಿ
ಇರಾಜರು ಯಾರು
ತುರುಕರು ಯಾರು
ಸಕಲರ ಮೇಲೆಯೂ
ನಾಲಿಗೆ ಚಾಚಿತ್ತು

ಕಾಲುಗಳ, ಕಣ್ಣುಗಳ, ಬೇರ್ಪಟ್ಟ
ರುಂಡಗಳ
ಎಲ್ಲರೂ ನೋಡಿದರು
ಫಿರ್ದೌಸಿ ಒಬ್ಬನೇ ಕಂಡ
ಪರ್ಶಿಯದ ಇತಿಹಾಸವ
ಅಖಂಡ!

ಒಂದು ಕಾವ್ಯದ ಬೆಲೆ

ವಜೀರನ ಕಡೆ ನೋಡಿ
ಕೇಳಿದನು ಮಹಮ್ಮದ
ವಜೀರ ಅಹಮ್ಮದ್‌ ಬಿನ್‌ ಹಸನ್‌
ಮೈಮಂದಿ ಎಂಬವ

ಅವನೆಂದ : ಅರವತ್ತು
ಸಹಸ್ರ ಪದ್ಯಗಳಲ್ಲಿ, ಜಹಂಪನ
ಮೂಡಿ ಬಂದಿದೆ ಇಲ್ಲಿ
ಪುರಾತನದ ಇರಾಣ

ರಾಜ ಮಹಾರಾಜರ
ಇತಿಹಾಸ ಶಾನಾಮ
ಕಳೆದ ಕಾಲಕ್ಕೆ
ಇಂದಿನ ಸಲಾಮ

ಒಂದು ಪದ್ಯಕ್ಕೆ
ಒಂದು ದಿರ್‍ಹಮಿನ ಹಾಗೆ
ಅರುವತ್ತು ಸಾವಿರ ; ಇಷ್ಟಾಗಿಯೂ ಕಾವ್ಯಕ್ಕೆ
ಬೆಲೆಕಟ್ಟುವುದು ಹೇಗೆ ?

ಕೆಲವರಂದರು : ಅರುವತ್ತು
ಸಾವಿರ ದಿರ್‍ಹಮು
ಎಂಥದೇ ಕಾವ್ಯ
ಹೊರಲಾರದ ಇನಾಮು

ಐವತ್ತು ಸಾವಿರ
ಕೊಟ್ಟರೂ ಕೊಡಬಹುದು
ಹಾಗೆ ನೋಡಿದರೆ
ಹೆಚ್ಚಾಯ್ತು ಅದೂ

ಇನ್ನು ಕೆಲವರು : ನಮ್ಮ
ಪಂಗಡವೇನಲ್ಲ ಫಿರ್ದೌಸಿ
ಅವ ಬಣ್ಣಸಿದ ಅರಸರೂ
ಹೆಚ್ಚಾಗಿ ಫಾರಸಿ

ನಂಬುತಿದ್ದರು ಅವರು
ಅನೇಕ ದೈವಗಳ
ಕೊಡುವುದಾದರೆ ಕೊಡಿ
ಇಪ್ಪತ್ತು ಸಹಸ್ರಗಳ

ನಿರ್ಗಮನ

ನಿಬಿಡ ಘಜನಿಯಲಿ
ಒಬ್ಬನೇ ಫಿರ್ದೌಸಿ-
ಇಡೀ ಪಟ್ಟಣದ ವಿಸ್ತಾರ
ಅಳೆವಂಥ ಹೆಜ್ಜೆ

ಆಕಾಶಕ್ಕೆ ಮಿನಾರಗಳು ಚುಚ್ಚಿ
ಅವು ನದೀ ನೀರಲ್ಲು ಹೊಳೆದು
ಅತಿ ಶುಭ್ರಶಿಲೆಯ ಪ್ರಾರ್ಥನಾಗೃಹಗಳೂ
ಎಷ್ಟೊ ರಾಜ್ಯಗಳ ಕೊಳ್ಳೆ ಹೊಡೆದು

ಉಣ್ಣೆಯಂಗಡಿ ಮಾಲು
ರತ್ನಗಂಬಳಿ ಸಾಲು
ಅಕ್ಕಸಾಲಿಗರೂ ಅಕ್ಕಪಕ್ಕ
-ತನ್ನ ಕವಿತೆಗೆ ತಾನೇ ನಕ್ಕ!

ಮೈಗೆ ಬೇಕಾದ್ದು
ಬಿಸಿನೀರ ಸ್ನಾನ
ಅಪಾರದರ್ಶಕ ಹಬೆಯ
ಕವಿಗೆ ಬೇಕಾದ್ದು
ಅಶರೀರ ಗಾನ
ಫೂಕ ಕುಡಿದಾಗಲೇ
ಹಗುರಾದ್ದು ಮನ

ಅರ್ಧ ಸ್ನಾನಕ್ಕೆ
ಅರ್ಧ ಗಾನಕ್ಕೆ
ಒಟ್ಟು ಶರಾ ಬರೆದು
ಇರುಳಿಗಿರುಳೇ ರಾಜ-
ಧಾನಿಯ ತೊರೆದು
ಕಾವ್ಯದೊಂದಿಗೆ ಕವಿಯೂ

ಶಹರಿಯಾರ್

ಶಹರಿಯಾರಿಗೂ ಒದಗಿತ್ತು
ಇತಿಹಾಸದ ಕ್ಷಣ
ಸಾಸಾನರ ದೊರೆ-ತಾನೇ
ವಂಶಾವಳಿಗೆ ಕೊನೆಯೆಂದು
ಅವನಿಗಾದರೂ
ಏನು ಗೊತ್ತಿತ್ತು ?
ಶಾನಾಮಕೆ ಖುದ್ದಾಗಿ
ಕೈಯೊಡ್ಡಿ ನಿಂತ.

ಫಿರ್ದೌಸಿ ಹೇಳಿದ :
ಸಹಸ್ರ ವರ್ಷ ಬಾಳಿದೆ
ಯುದ್ಧಗಳಲ್ಲಿ ಕಾದಿದೆ
ಮರುಭೂಮಿಗಳಲ್ಲಿ ಅಲೆದಾಡಿದೆ
ಸತ್ರಗಳಲ್ಲಿ ಮಲಗಿದೆ
ಎಲ್ಲವನ್ನೂ ಕಂಡೆ-
ಎಂದುಕೊಂಡಿದ್ದೆ.

ಈಗ ನಾ ಬರೆಯದ ಸಾಲುಗಳ
ಯಾರು ಬರೆಯುವರು ?
ತೆರದಿರಲಿ ನನ್ನ ಪುಸ್ತಕ
ಇತಿಹಾಸದ ಹಾಗೆಯೇ
ಅಪೂರ್ಣವಾಗಿ-

ಆಮೇಲೆ ಮಹಮ್ಮದ

“ಬಯಸಿದುತ್ತರ ಬಂದರೆ ಸರಿ-
ಇಲ್ಲವಾದರೆ ಇದ್ದೇ ಇದೆ
ಕತ್ತಿಗುರಾಣಿ ರಣರಂಗ
ಸಿದ್ದವಾದ ಕುದುರೆ !”

ಕೆರಳಿತ್ತು ಮಹಮ್ಮದನ
ಆದಿಮಾನವ ಪ್ರಜ್ಞೆ
“ಯಾವ ಕವಿವಾಣಿ ?”
“ಫಿರ್ದೌಸಿ !”

ಇಸ್ಫೆಹಾನ್‌ನಿಂದ ಲಾಹೋರದ ತನಕ
ಅಬೂ-ದರಿಯಾದಿಂದ ಮಕ್ರಾನವರೆವಿಗೂ
ಹಿಂದೂಸ್ತಾನವೊಂದಕೇ
ಹದಿನೇಳು ಬಾರಿ
ಮೊದಲು ಘರ್ಜಿಸ್ತಾನ,
ಆಮೇಲೆ ಖ್ವಾರಿಜಮ್‌,
ಸೈಸ್ತಾನ, ಲಾಮಘನ್‌
ಆಮೇಲೆ ಥಾನೇಸರ,
ಕನೋಜ, ಕಲಿಂಜರ್‌
ಮುಲ್ತುನದ ಮರುಭೂಮಿಯನ್ನೂ ದಾಟಿ
ಮೂರ್ತಿಭಂಜಕ ಮಹಮ್ಮದ
ಬಾರಿ ಬಾರಿ

ಸೂರ್ಯ ಪಶ್ಚಿಮಕೆ ಬೀಳುವ ಹೊತ್ತು
ತಾಳೆಗರಿಗಳ ಸಡಗರ
ಇದು ನಮಾಜಿನ ಸಮಯ
“ಘಜನಿ ತಲುಪಿದ ಕ್ಷಣ ಇನ್ನೊಮ್ಮೆ
ಈ ಸಾಲುಗಳ ನನಗೆ
ನೆನಪು ಮಾಡುವುದು…”

ಇಂಡಿಗೋ

ಇಂಡಿಗೋ
ಮೂಟೆಗಳ ಹೊತ್ತ
ಒಂಟೆಗಳ ಕರವಾನು
ಹೊರಟಿರುವುದೀಗ
ಎಲ್ಲಿಗೆ ?

ಹಗಲಿರುಳು ದಾರಿ ಸಾಗಿ
ಕರವಾನು ಬಂದಿದೆ
ಊರ ಹೆಬ್ಬಾಗಿಲಿಗೆ
ತಲುಪಿ ಅದು ಅಲ್ಲಿಗೇ

ಅಷ್ಟರಲ್ಲಿ ಆಚೆಯಿಂದ
ಸಣ್ಣದೊಂದು ಮೆರವಣಿಗೆ
ನಾಲ್ಕು ಮಂದಿ ಹೆಗಲ ಮೇಲೆ
ಹೊತ್ತ ಶವಪೆಟ್ಟಿಗೆ

ಇಂಡಿಗೋ ಮೂಟೆಗಳ
ಹೇರಿಕೊಂಡು ಕರವಾನು
ಊರೊಳಗೆ ಹೋಗುವುದು
ಕವಿಯ ಮನೆ ಹುಡುಕುವುದು

ಕವಿಯಿಲ್ಲ ಕಾಲವಿಲ್ಲ
ಎಲ್ಲ ಮರೆಯಾಯಿತು
ಒಂಟೆಗಳ ಕರವಾನು
ಬಂದಲ್ಲಿಗೇ ಮರಳಿತು

ಮಹಮ್ಮದನ ಗೋರಿ

ಘಜನಿಯಿಂದ ತುಸು ದೂರದಲ್ಲಿ
ರೌಜ್ಹಾ ಎಂಬ ಜಾಗದಲ್ಲಿ

ಅಚ್ಚ ಬಿಳೀ ಸಂಗಮರವರೀ
ಕಲ್ಲಿನದೊಂದು ಗೋರಿ

ಬಿಸಿಲಲ್ಲಿ ಧೂಳು ಕವಿದು
ಮಳೆಯಲ್ಲಿ ನೀರು ತೊಯ್ದು

ಮರದಿಂದ ಎಲೆಗಳೂ
ಆಗಾಗ ಹೂಗಳೂ

ಅದರ ಮೇಲೆ ಉದುರುತ್ತವೆ
ಗಾಳಿಯಲ್ಲಿ ಚದರುತ್ತವೆ

ಸಬುಖ್ತಿಜೀನನ ಮಗ
ಈ ಗೋರಿಯೊಳಗೆ ಇರುವ

ಅದರ ಮೇಲನೊಕ್ಕಣೆ :
“ಎಲ್ಲರ ಮೇಲೆ ಸಮನಾಗಿ ಅಲ್ಲಾನ ಕರುಣೆ”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಚ್ಚಲಿರುವ ವಿಶ್ವದ ತಾಪಮಾನ !
Next post ದೇವಿ ಶಾರದೆ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…