ಸುಂದರ ಶಿವ ಸತ್ಯಸದಾಶಿವ
ಕಂದರ ನೀ ಕಾಪಾಡೋ ಅಭವ || ಪ ||

ವಿಶ್ವವೆ ನಿನ್ನಯ ಗುಡಿಯೇ ಆದರು
ಹೃದಯದ ಗುಡಿಯಲಿ ಕುಳಿತಿರುವೆ
ಆಗಸದನಂತ ಕಾಯನು ನೀನು
ಮಣ್ಣಿನ ಕಾಯದಿ ನೆಲೆಸಿರುವೆ || ೧ ||

ಸೃಷ್ಟಿಯ ಚೆಲುವೆಯ ಕೂಡಿಹ ಚೆಲುವ
ಸಾವಿನ ಹಾವನು ಸುತ್ತಿರುವೆ
ನಿತ್ಯ ನೂತನಕೆ ಸತ್ಯದ ಚೇತನ
ನಿಯತಿಯ ಸೂತ್ರವ ಹಿಡಿದಿರುವೆ || ೨ ||

ಕೋಟಿ ಭೇದಗಳ ಕಾಣುತ ಕಣ್ಣು
ಕೋಟಲೆಗೊಳುವುದು ಬೆರಗಾಗಿ
ಸಖ್ಯವು ಐಕ್ಯವು ಕನಸೋ ನನಸೋ
ಕಾಣಿಸೋ ಅಳಿಯುವ ಒಳಗಾಗಿ || ೩ ||
*****