ಪಾಪಿ

ಜನ್ಮ


ಪಾಪಿಯಿದ್ದನು ಪಾಪ
ಕಡಲ ತೀರದಲಿ ಎಲ್ಲಿ
ಒಂದು ಸಾವಿರ ಮಂದಿ
ಬೆಸ್ತ ಜನ ಕುರಿಕೋಳಿ
ಹಂದಿಗಳ ಜೊತೆಗೂಡಿ
ವಸತಿ ಹೂಡಿದ್ದರೋ

ಅಲ್ಲದೇ ತೆಂಗುಗಳು, ಅಲ್ಲದೇ ಬಾಳೆಗಳು
ಸಿಹಿನೀರಬಾವಿಗಳೂ
ಮರಳ ದಂಡೆಯ ಮೇಲೆ
ಹರಡಿರುವ ಬಲೆಗಳೂ
ಕಡಲ ಕರ್ಕಶ ಕಾಗೆ
ಅಷ್ಟು ದೂರವು ಹೇಗೆ
ಹಾರಿ ಬರುವುದು ತೀರ
ಬಿಟ್ಟೊಂದು ತೀರಕ್ಕೆ

ಅಂಥ ಕಡೆಯಿದ್ದನು
ಭ್ರೂಣರೂಪದಲಿ ಮೊದಲು
ಆಮೇಲೆ ಕೈಕಾಲು
ತಲೆ ಬೆಳೆದು
ಕೆಳಗಿಳಿದು


ಅಂದು ಬಲೆಯೆಸೆದವರು
ಬರಿಗೈಲಿ ಬಂದರು
ಮಾರನೇ ದಿನ ಅವರು
ಮರಳದೇ ಇದ್ದರು
ಮಾರನೇ ದಿನ ಅವರು
ಸತ್ತಂತೆ ಕಂಡರು

ಒಂದು ದಿನ ಊರೊಳಗೆ
ಬೆಂಕಿಯೂ ಕಾಣಿಸಿತು
ಏಳೇಳು ಬಾರಿ
ಗ್ರಾಮವಿಡಿ ಉರಿಯಿತು
ಏಳೇಳು ಬಾರಿಯೂ
ತಲೆದಂಡ ತೆತ್ತಿತು


ಯಾವಾತ ಆತ-
ತನ್ನ ತೇರಿನ ಕೆಳಗೆ ಇತರರನೂ
ಎಳೆಯುವನೊ
ಪದೇ ಪದೇ
ಅವನ ಹೆಸರೇ ಲೋಕತಿಸ್ಸ
ಮುಂದೆ ಆತನೂ
ಮಹಾತೇರ.


ಹಕ್ಕಿಗಳು ಹಾರುವವು
ಬೆಂಕಿಯ ಪ್ರಕೋಪಕ್ಕೆ
ಅಥವ ಅರೆಗಾಲದಲಿ
ವಲಸೆ ಬಿಟ್ಟೇಳುವವು
ಮನುಷ್ಯರೇ ಬೇರೆ

ಅವರು
ಕಣಿಗಳನು ಕೇಳುವರು ಕಣಿಯಾನರಲ್ಲಿ
ಹಾಗೂ
ಕಣಿಯಾನರನ್ನುವರು ಕವಡೆಗಳ ಹರಡಿ-
ಯಾರೊಬ್ಬ ಪಾಪಿ ಈ
ಗ್ರಾಮದಲೀಗ ಹುಟ್ಟಿ
ಕಷ್ಪ ಕೋಟಲೆ ನಿಮ್ಮ
ಮನೆಮನೆಗು ಸೇರಿ
ಕಳಿಸಿದಲ್ಲದೆ ನಿಮಗೆ
ಅವನ ಹೊರಗಟ್ಟಿ
ಕ್ಷೇಮಸಿಗದೆನ್ನುವುದು
ನಮಗಂತು ಖಾತರಿ
ಹೀಗೆಂದು ಹೇಳುತ್ತ ಧಡಧಡನೆ ಹೋದರು
ದಟ್ಟ ಮರಳಿನ ಮೇಲೆ ಪಾದಗಳನಿಟ್ಟು


ಆಮೇಲೆ ಊರವರು ಊರನೆರಡಾಗಿಸಿ
ಶಕುನಗಳಿಗಾಗಿ ಕಾದು ನೋಡಿ
ಪಾಪಸಂಭವ ಯಾವ ಭಾಗದಲಿ ಇರುವನೋ
ಆ ಭಾಗ ನೆಲಕಚ್ಚಿ ಬಾರಿ ಬಾರಿ-

ಭಾಗಹಾರಿಗಳು ಕೊನೆತನಕ ಬಿಡದೇ
ಪಾಪಮೂಲವ ಹೀಗೆ ಕಂಡು ಹಿಡಿದೇ


ಆಮೇಲೆ ಅದು ಹಿಡಿಯುವುದು ತಂದೆಯ
ಹಿಡಿಯುವುದು ತಾಯಿಯ
ಅವರಿಗೂ ಎರವಾಗಿ
ಕಡಲ ಬೂತಾಯಿ

ಆದರೂ ಕಡಲು ಅವನ ಮುಳುಗಿಸಲಿಲ್ಲ
ಒಳಗೆಳೆದು ಮರಳು
ನುಂಗಿದುದೂ ಇಲ್ಲ
ಹೆದ್ದಾರಿ ಗಾಡಿಗಳು ಅವನ
ಮುಟ್ಟದೇ ಸಾಗಿದುವು
ಎತ್ತುಗಳ ಕೊರಳ
ಮಣಿಗಳೂ ಗೊಣಗಿದುವು
ಬೆಂಕಿಗಳು ಅವನ
ತಟ್ಟದೇ ಉರಿದುವು
ಆಮೇಲೆ ಅವನ
ಕಣ್ಣಲ್ಲಿ ಆರಿದುವು


ಅಂಥವನ ಕೈಯೊಳಗೆ ಮಡಕೆ ಚೂರನ್ನಿಟ್ಟು
ಒಕ್ಕಲಿರದಂಥ ಮನೆಯೊಳಗೆ ಕಳಿಸಿಕೊಟ್ಟು
ಆಮೇಲೆ ತಂದೆ-
ಆಮೇಲೆ ತಾಯಿ-
ಈತನೋ ಕಡೆಯಿಂದ
ಇನ್ನೊಂದು ಕಡೆಗೆ
ಬೆಂಕಿಯಿರದಂಥ
ಒಲೆಯತ್ತ ಕೊನೆಗೆ

ಬೆಕ್ಕು ನೋಡಿತವನ ಬಹಳ ದುರುಗುಟ್ಟಿ
ರೋಮ ರೋಮದಲಿ ಭಯವು ಮಡುಗಟ್ಟಿ
ಓಡಿದರೆ ಹೊರಗೆ
ಅಲ್ಲಿರದ ತಂದೆ-
ಅಲ್ಲರದ ತಾಯಿ-
ಹಿಂದೆಯೂ ಇರಲಿಲ್ಲ, ಮುಂದೆಯೂ ಇರಲಿಲ್ಲ

ಬೆಕ್ಕು ಮಾತ್ರವೆ ಇತ್ತು
ಒಳಹೊರಗೆ ಸುಳಿಯುತ್ತ
ಬೆಕ್ಕು ಹೇಳಿತು: “ಮಿಯಾಂ
ಈ ಮನೆಯು ನನ್ನದೇ
ಆ ಮನೆಯು ನನ್ನದೇ”


ಇತ್ತಲಾ ಶ್ರಾವತ್ಥಿ ದೇಶದೊಳು ನಮ್ಮ ಗುರು
ಸಾರಿಪುತ್ಥನು ಭಿಕ್ಷೆಗೈದಿದ್ದ ಸಮಯ ಅದು
ಎಲ್ಲರೂ ಕೊನೆಗೆಲ್ಲಿ ಸೇರಬೇಕೋ ಅಂಥ-

ಅಲ್ಲಿ ನಡುಮಾರ್ಗದಲಿ ಒಡಕು ಮಡಕೆಯ ತುಂಡ
ಹಿಡಿದು ನಡೆಯುವ ಒಬ್ಬ ಬಾಲಕನ ಕಂಡ
ಯಾವೂರು ಹೆಸರೇನು ಇಲ್ಲೇನು ಎಂದ

(ಅಂಥವನ ಕರುಣೆ ನಮ್ಮ ಮೇಲರಲಿ
ಪಾಪಿಗೂ ಪುಣ್ಯದಲಿ ಸಮಪಾಲು ಇರಲಿ)


ಕಂಡವರು ಯಾರು ಪಾಪದ ಸ್ವ-
ರೂಪ ? ಹಣ್ಣಾಗಿ, ಹಾವಾಗಿ
ಮೈಯೆಲ್ಲ ಹುಣ್ಣಾಗಿ
ಬಗ್ಗಿದರೆ ಸಿಗದ ಮೊಣಕಾಲ ನೀರಾಗಿ
ಕೊಡವಿದರೆ ಬೀಳದ ಹೆಗಲ ಹೊರೆಯಾಗಿ
ಅರ್ಧಸುಳ್ಳಿಗೆ ಒಂದು ನರಕ ದರ್ಶನವಾಗಿ
ತನ್ನ ತಲೆಯನೆ ತನ್ನ ಕೈಯಲ್ಲಿ ತೂಗಿ
ನಾನಲ ! ನಾನಲ್ಲ!

ಶ್ರಾವಸ್ಥಿಯಲಿ ಕೂಡ-

೧೦
ತನ್ನ ಪಾಪದ ಗೂಡ
ಹೊತ್ತುಕೊಂಡೇ ನಡೆದ
ನಡೆಯುತಿದ್ದರೆ ಜನರು
(ನಿಜವಾಗಿ ದಾರಕರು)

ಇವನ ಭಿಕ್ಷಾ ಪಾತ್ರೆ
ತುಂಬಿದ ಹಾಗೆ ಭ್ರಮಿಸುವರು
ಸದ್ದಿರದೆ ತೆರಳಿ
ಬಾಕಿಲನು ಹಾಕುವರು

ಜನ್ಮ ಜನ್ಮಾಂತರು
ಅವರ ಕಣ್ಣಿಗೆ ಹೀಗೆ
ಮುಸುಕುವುದು-ಭಿಕ್ಷುವಿನ
ಹೊಟ್ಟೆಯನು ಹಿಸುಕುವುದು

ರಾತ್ರಿ ರಾತ್ರಿಯೂ ಕಡಲು
ತಣ್ಣನೆಯ ಒಲೆಯು

೧೧
ಎಲ್ಲವನು ಮನಸಿನಲಿ
ಗ್ರಹಿಸಿದವನೊಬ್ಬನೇ
ಅವನೆ ಸಾರಿಪುತ್ತ-

ನಿರ್ವಾಣದಂಚಿನಲಿ ಲೋಕತಿಸ್ಸನು ಈಗ
ಒಂದು ದಿನವೂ ಹೊಟ್ಟೆ ತುಂಬಿರದ ಈತನಿಗೆ
ಇಂದಾದರೂ ಭಿಕ್ಷೆ ಕೊಡಿಸುವೆನು ಕೈ ತುಂಬ
ಹೀಗೆಂದು ತನ್ನ ಜತೆ ಲೋಕತಿಸ್ಸನ ಕರೆದು
ಆಮೇಲೆ ಇಬ್ಬರೂ ಬೀದಿಯಲಿ ನಡೆದು

ಕದಗಳೊಂದೊಂದಾಗಿ
ಮುಚ್ಚಿದವು ತಾವೇ
ಮುಚ್ಚಿದವು ಕಣ್ಣುಗಳೂ
ಗುರುತಿರದ ಹಾಗೆ
ಜನವ ನಿಬಿಡ ಬೀದಿಗಳು
ಈಗ ನಿರ್ಜನವಾಗಿ

ಸಾರಿಪುತ್ರನು ನುಡಿದ
ನೀನೀಗ ಮರಳಿ
ಕಾದಿರು ವಿಹಾರದಲಿ
ನಾ ಬರುವವರೆಗೆ

೧೨
ಪಾಪಿ ಮರಳಿದರೆ
ಲೋಕ ಮರಳದೇ ?
ಕದ ಮುಚ್ಚಿರಲು ಇಲ್ಲ
ಪರಿಚಿತರು ಯಾರೂ
ಕಣ್ಣ ತಿರುಗಿಸಿ
ನಡೆದಿರಲು ಇಲ್ಲ

ಸಮಯವಲ್ಲದ ಸಮಯ
ಆದರೂ ನಡೆದು
ಸಾರಿಪುತ್ತನು ತನ್ನ
ಗಡಿಗೆ ಹಿಡಿದು

ಇದೋ ಅನ್ನ !
ಇದೋ ಹಣ್ಣು !
-ಎಂದನು ಕೋಸಲೇಶ

೧೩
ಲೋಕತಿಸ್ಸನಿಗೆ ನಗೆ-
ಸಾರಿಪುತ್ತನ ಕೈಯ
ಹಿಡಿದು ಕೇಳಿದನು :
ಈ ಭಾಗ್ಯಕಿಂತ
ಇನ್ನೇನು ನನಗೆ ?

ಅಂದು ಹುಣ್ಣಿಮೆ ರಾತ್ರಿ
ಕಡಲ ತೀರದ ಭ್ರೂಣ
ಕಳಚಿ ತನ್ನಯ ಪ್ರಾಣ
ಪಡೆಯೆ ಪರಿನಿರ್ವಾಣ

ರಹಣರೆಂದರು-
ಎಂಥ ವಿಚಿತ್ರ !
ಪಾಪಿ ಪಾಪಿಯೋ
ಪುಣ್ಯ ರೂಪಿಯೋ

ಜನ್ಮಾಂತರ


ಕಶ್ಯಪ ಪರಾತಕೆನ ಕಾಲದಲಿ ಈತ
ರಹಣನಾಗಿದ್ದವನೆ ಲೋಕತಿಸ್ಸ-
ಗ್ರಾಮವೊಂದರಲಿ ಧನಿಕನೊಬ್ಬ
ಶಿಷ್ಯನಿದ್ದನು ಇವನ
ದಾರಕನು ಅವನೇ

ಉತ್ತರದ ಕಡೆಯಿಂದ
ಊರಿಗೊಬ್ಬ ಬಂದ
ಸಂಜೆಗೆ ಮೊದಲೇ ಬಂದ
ಅವನೂ ರಹಣ

ಊಟ ಉಪಚಾರ ನೀಡಿ ಅವನಿಗೂ
ದಾರಕನು ಹೀಗೆ :
“ನನ್ನ ಗುರುಗಳ ಬಿಡದಿಯಿದೆ
ಇಲ್ಲಿ ನೀವಿರಬೇಕು-ನಮ್ಮ
ಊರಲ್ಲೆ ಇರಬೇಕು.”


“ಕ್ಷಮಿಸಿ ಈಗಾಗಲೆ
ಆಯಿತೆ”ಂದನು ಆತ.
“ಆಯಿತೆ?” ಅಂದನು ಲೋಕತಿಸ್ಸ
ಅಂದರೂ
ಅನ್ನದೇ ಇದ್ದದು ಏನೊ ಇತ್ತು
ಅದು
ಹೆಸರು ಗುರುತಿರದ
ಕಿತ್ತೆಸದರೂ ಉಳಿವ

ವಸ್ತು ಅಥವ ವಿಚಾರ ?
ಅವತ್ತು ಅಥವ ಯಾವತ್ತೂ
ಹೊತ್ತಿಗೆ ನಾಲ್ಕು ತುತ್ತು-ಮಿಕ್ಕಷ್ಟು ಇನ್ನೂ
ಇತ್ತು (ಇನ್ನೇನು ಬೇಕಿತ್ತು ?)
ಆದರೆ ಇತ್ತು ಇನ್ನೂ-ಒಳ ಹೊರಗೆ
ಇಣುಕುತಿತ್ತು
ನಿದ್ದೆಯಲಿ ಧ್ಯಾನದಲಿ
ನುಗ್ಗುತಿತ್ತು-
ಅದು ಕಪಿಲವಸ್ತುವಿನಿಂದ ಬಹಳ ದೂರ-
ವಿತ್ತು…


ಮಾತಿರುವ ಕಡೆ ಮೌನ
ಆ ದಿನವು ಮರುದಿನವು
ಆಮೇಲೆ ಪ್ರತಿದಿನವು
ಭಿಕ್ಷೆಗೈದುವ ಸಮಯ
ಅತಿಥಿಯನು ಕರೆಯದೆ
ದಾರಕನು ಕೇಳಿದರೆ
ಏನೊಂದು ಒರೆಯದೆ

ಹೀಗಿರಲು ಒಂದು ದಿನ
ಕೇಳಿ ರಹಣರೇ !
ಪ್ರತ್ಯೇಕ ಭಕ್ಷ್ಯಗಳ
ಲೋಕತಿಸ್ಸನ ಕೈಯ-
ಲಿರಿಸಿ ಆ ದಾರಕನು
ಹೇಳುವನು : “ಇಬ್ಬರೂ
ಹಂಚಿಕೊಳ್ಳುವುದು.”

ದಾರಿಬದಿಯಲಿ ಕಾಡ
ಬೆಂಕಿಯೂ ಉರಿಯುವುದು
ಪೊದೆಯಿಂದ ಪೊದೆಗೆ ಅದು
ಆಹಾರ ಹುಡುಕುವುದು
ಆಹ ! ಎಂದನು ರಹಣ
ಎಂಥ ಅದ್ಭುತ ದೃಶ್ಯ !
ತಗೊ ಎಂದು ಚೆಲ್ಲಿದನು
ತನ್ನ ಕೈ ಪುಣ್ಯವನು


ಚೆಲ್ಲಿದುದ ಮತ್ತೆ ತೆಗೆಯಬಹುದಾಗಿದ್ದರೆ !
ಬೆಂಕಿಯಲ್ಲಿ ತನ್ನ ಕಣ್ಣುಗಳೂ ನಟ್ಟು-
ನಿಂತು ನೋಡುತ್ತಾನೆ
ಯಾಕೆ ಯಾಕೆಂದು ತಿಳಿಯದೆ

ಅವನೆಲ್ಲಿ ಉತ್ತರದ ಕಡೆಯಿಂದ ಬಂದವನು
ಉತ್ತರದ ಕಡೆಯಿಂದ
ದಕ್ಷಿಣದ ಕಡೆಗೂ
ಅವನಿಲ್ಲ ಇಳಿಸಂಜೆಯಾದರೂ ಒಳಹೊರಗೆ
ಲೋಕತಿಸ್ಸನು ಹೀಗೆ ಕತ್ತಲೆಯ ಕಡೆಗೆ
ಮುನ್ನುಗ್ಗಿ ಹೋಗುವನು
ಅಂದು ರಾತ್ರಿ


ಪಿಂಡಕ್ಕೆ ಮೃತ್ಕು-
ಮಿತ್ತಪಿಂಡಕನೆಂದು
ಕಥೆಯದುವೆ, ಕಥಾನಾಯಕನು ಅವನೇ
ದೇಶ ಕಾಲಗಳು ಮಾತ್ರ ಬೇರೆ

ಅವನೆದ್ದು ನಡೆವ ಸಮಯ-
ಮನೆಯಿಂದ ಹೊರ ಹಾಕಿ
ಕದವ ಮುಚ್ಚಿಡಲಾಯ್ತು
ಎಷ್ಟು ಬಡಿದರು ಕೂಡ
ತೆರೆಯದೇ ಇತ್ತು

ಒಳಹಾದಿ ಹೊರಹಾದಿ
ಹುಡುಕುತ್ತ ಬಿಡದೆ
ವಾರಣಾಸಿಗೆ ಬಂದು ಸೇರುವನು ಕೊನೆಗೆ

“ಏಳಿ ಶಿಷ್ಯರೆ ! ಏಳಿ !
ಸಮಯ ಪ್ರಾತಃಕಾಲ
ಹೊರಡೋಣ” ಎಂದರು
ವಿಶಾಪಮೋಕ್ಷರು

ದಾರಿಯಲಿ ಎದುರಾದ
ಅನಾಥ ಭಿಕ್ಷು
ಐನೂರ ಮೇಲೊಬ್ಬ
ಇವನೂ ಇರಲೆಂದರು


ಇರಲಿರಲು ಬೀದಿಗಳು
ಈಗಲೂ ನಿರ್ಜನವು
ಮಾತಾಡುವವರಿಲ್ಲ
ಮಾತ ಕೇಳುವರಿಲ್ಲ

ಹೊತ್ತಿಗೂ ಮೊದಲೆ
ಕತ್ತಲೂ ಆಗಿ
ಹೋಗು ಹೋಗೆನುವಂತೆ
ದೀಪಗಳೂ ಆರಿ

ಹೀಗೆ ನಡೆಯುತ್ತಾನೆ
ಬೀದಿಯಲಿ ಎಷ್ಟೊಂದು
ನಡೆದರೂ ಹಿಡಿದಿರುವ
ಗಡಿಗೆ ಮಾತ್ರವೆ ಬರಿದು
ಅಂಥವನಿಗೂ ಒಂದು
ಕನಸು ಬೀಳುವುದು..


ಕನಸಿನಲಿ ಕಾಲುಗಳು
ಕನಸಿನಲಿ ಕಣ್ಣುಗಳು
ಕನಸಿನಲಿ ಮದುವೆ
ಮತ್ತೆ ಅದುವೇ

ಬೆಂಕಿ ಬೀಳುವುದು
ಏಳು ಬಾರಿಯೂ
ತಲೆದಂಡ ಗ್ರಾಮ
ಬಾರಿ ಬಾರಿಯೂ

ಕಥೆಯದುವೆ ಕಥಾ
ನಾಯಕನು ಅವನೇ


ಅಲ್ಲಿರುವುದು ನಮ್ಮನೆ
ಇಲ್ಲಿರುವುದು ಸುಮ್ಮನೆ

ಹೊರಡು ! ಹೊರಡೆಂದು ಹೇಳುವುದು
ಬೇರೆ ದೇಶದ ಕಡೆಗೆ
ಕಾಡುದಾರಿಯಲಿ ದಾರಿ ತಪ್ಪುವುದು
ಆಮೇಲೆ ಕೈಯ
ಹಿಡಿದಾಕೆಯೂ ತಪ್ಪಿ
ಒಬ್ಬಂಟಿ ಕೊನೆಗೂ
ರೇವಿನಲಿ ತಲುಪಿ

ಸಿದ್ಧವಾಗಿದೆಯೆ ? ಇದೆ !
ಅದು ನನಗಾಗಿ ಇದೆಯೆ ? ಇದೆ!
ಇದೆಯಂದು ಕಪ್ತಾನ
ಆಮೇಲೆ ಜಲಯಾನ
ತನಗೆಂದೆ ಎಲ್ಲರೂ
ಕಾದಿದ್ದ ಹಾಗೆ


ಮಾತ್ರ ಗಾಳಿ ಒಮ್ಮೆಗೆ ತಟಸ್ಥ-
ವಾದ್ದನ್ನು ಯಾರೂ
ಮೊದಲು ನೋಡಲೆ ಇಲ್ಲ!
ಆಮೇಲೆ ತೆರೆಗಳೂ
ಮಲಗಿದವು ಯಾವುದೂ
ಚಲಿಸಲೇ ಇಲ್ಲ

ಒಬ್ಬ ಮಾತ್ರವೇ ಚಲಿಸಿದನು
ಹಡಗಿನಟ್ಟದ ಮೇಲೆ
ಹಡಗು ಕುಳಿತುದನು ನೋಡಿದನು ಅವನು
ನಡುಗಡ್ಡೆಯ ಹಾಗೆ

ಐನೂರು ಮಂದಿ ಯಾತ್ರಿಕರ ಮೃತ್ಯು
ಆಮೇಲೆ ಜಲಧಿಯಲಿ ಧುಮುಕುವುದು ಇತ್ತು
ಗಾಳಿ ಬೀಸುವುದಿತ್ತು ಹಡಗ ಚಲಿಸುವುದಿತ್ತು
ಅದು ಸೇರಬೇಕಾದ ಕಡೆಗೆ

ಹೊತ್ತು ಮುಳುಗುತಲಿತ್ತು
ಮುಳುಗಿ ತೇಲುತಲಿತ್ತು
ಮಿತ್ತ ಪಿಂಡಕನ ಮಾತ್ರ
ಮುಳುಗದೆ ಬಿಟ್ಟು

ನೆಲದಿಂದ ಬಂದವನ ನೆಲಕ್ಕೆ ಸೇರಿಸುವ
ಹಾಗೆ ಒಗೆಯಿತು ಹೊತ್ತು ಒಂದು ತೀರ

೧೦
ಉಸುಕು ! ಬಾಯಿಯಲಿ ಉಸುಕು
ಮೂಗಿನಲಿ ಉಸುಕು
ಕಣ್ಣಿನಲಿ ಕಣ್ಣುಕತ್ತಲೆಯ ಮುಸುಕು

ಮೇಯುತ್ತ ಬಂದ ಒಂದಾನೊಂದು ಮೇಕೆ
ತಟ್ಟೆಯಲಿ ತಂದಿತ್ತ ಆಹಾರದ ಹಾಗೆ
ಅನಿಸಿದ್ದರಲ್ಲಿ ಆಶ್ಚರ್ಯವೇವಿಲ್ಲ
ಎಳೆದು ಜಗ್ಗಿದನು ಅದರ ಕಾಲ

ಕುರಿಕಾಯುವವರು ಬೀಸಿದ ದೊಣ್ಣೆ
ಒಡೆದು ಸೋರಿತು ಹಣೆ
ಕಳ್ಳ ! ಕಳ್ಳ!

ಆಮೇಲೆ ಅವರು ಅವನ ಕೈಕಾಲ ಎತ್ತಿ
ಬೀಸಿ ಒಗೆಯುತ್ತಾರೆ
ಒಂದೆರಡು ಬಾರಿ ಸುತ್ತಿ

ನೆಗೆದು ಆಕಾಶಕ್ಕೆ
ಎಷ್ಟೊಂದು ಸಮಯ
ನೆಲ ಕಾಣುವುದಕ್ಕೆ
ರೆಪ್ಪೆ ಮುಚ್ಚುತ್ತಾನೆ
ಮಿತ್ತ ಪಿಂಡಕ

೧೧
ಬಿದ್ದವನ ಮುಖವ ಕೈಯಿಂದ ಒರೆಸಿ
ನೋಡಿದರೆ ಎಲ್ಲೊ ನೋಡಿದ ಹಾಗೆ ಅನಿಸಿ
ಓಹೋ ! ಆಶ್ರಮಕೆ ಮರಳದ ಐನೂರ ಒಂದನೆ
ಶಿಷ್ಯನೆ ಸರಿಯುಂದು ನೀರ ಕುಡಿಸಿ

ಕರೆದರೂ ಕೇಳಿಸದೆ
ಕಳಚಿಕೊಳ್ಳುವ ಜೀವ
ಹಿಂತಿರುಗಿ ನೋಡದೇ
ವಲಸೆಹೋಗುವ ಹಕ್ಕಿ
ಖಂಡಾಂತರಕ್ಕೆ
ರೆಕ್ಕೆ ಬಿಚ್ಚಿತ್ತು
ಕಣ್ಣ ಎದುರೇ

೧೨
ನಿಜ-ವಾರಣಾಸಿಯಲಂದು
ಐನೂರ ಒಂದು
ಶಿಷ್ಯರನು ಹೊಂದಿದ್ದ ಗುರುವು ನಾನೇ

ಹಾಗೂ ಅಂದು ಪ್ರಾತಃಕಾಲ
ಸ್ನಾನಘಟ್ಟದಲಿ
ನನ್ನ ಜತೆಯಿದ್ದವರೂ ನೀವೇ

ಹಾಗೂ ಕಡಲಿಗೆ ಹೋಗಿ ಬಂದವರೂ
ಕದವ ತೆರೆದವರೂ, ಕದವ
ಮುಚ್ಚಿದವರೂ…

ಹೀಗೆಂದು ಪರಾತಕೆನ್‌
ನಕ್ಕು ನುಡಿದ.
ಬುದ್ದಘೋಷನು ಅದನ್ನು
ಕತೆಯಾಗಿ ಬರೆದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲ ಮಾಹಿತಿಗಳನ್ನೂಳಗೊಂಡ ಬಣ್ಣದ ವಿಡಿಯೋ ಮೊಬೈಲ್
Next post ಸುಂದರ ಶಿವ

ಸಣ್ಣ ಕತೆ

 • ಶಾಕಿಂಗ್ ಪ್ರೇಮ ಪ್ರಕರಣ

  ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

 • ಮೋಟರ ಮಹಮ್ಮದ

  ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

 • ನಂಬಿಕೆ

  ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

 • ಒಂದು ಹಿಡಿ ಪ್ರೀತಿ

  ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

 • ಮರೀಚಿಕೆ

  ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys