(ಮಕ್ಕಳ ಗೀತೆ)

ತಾಯಿ- ಇಡ್ಲೀಯ ಗುಂಡಣ್ಣಾ ಚಟ್ನೀಯ ಚಲುವಣ್ಣಾ
ಹೋಗಣ್ಣಾ ಸುಬ್ಬಣ್ಣಾ ಸಾಲೀಗೆ ||ಪಲ್ಲ||

ಮಗ- ಇಡ್ಲೀಯ ನಾನೊಲ್ಲೆ ಚಟ್ನೀಯ ಒಲ್ಲೊಲೆ
ಮಾಸ್ತರು ಬೈಬೈ ಬೈಯ್ತಾನಾ
ಆ ಸಾಲಿ ಯಾ ಸಾಲಿ ಹಳಸೀದ ಮಸಾಲಿ
ಮಾಸ್ತರು ಬಡಿಬಡಿ ಬಡಿತಾನಾ ||೧||

ತಾಯಿ- ದೋಸಿಯ ಗುಂಡಣ್ಣಾ ಚಕ್ಲೀಯ ಚಲುವಣ್ಣಾ
ಹೋಗಣ್ಣಾ ಸುಬ್ಬಣ್ಣಾ ಸಾಲೀಗೆ ||ಪಲ್ಲ||

ಮಗ- ದೋಸೀಯ ನಾನೊಲ್ಲೆ ಚಕ್ಲೀಯ ಒಲ್ಲೊಲ್ಲೆ
ಹುಡಗೋರು ಕಾಡ್ಕಾಡ ಕಾಡ್ತಾರಾ
ಕೂದಲ ಜಗತಾರ ಕುಂಡೀಯ ಚೂಟ್ತಾರ
ಹಿಡಿಮಣ್ಣು ಅಂಗ್ಯಾಗ ಹಾಕ್ತಾರಾ ||೨||

ತಾಯಿ- ಜೀಲೇಬಿ ಗುಂಡಣ್ಣಾ ಕಾರ್ದಾಣಿ ಚಲುವಣ್ಣಾ
ಹೋಗಣ್ಣಾ ಸುಬ್ಬಣ್ಣಾ ಸಾಲೀಗೆ ||ಪಲ್ಲ||

ಮುಗ- ಜಿಲೇಬಿ ನಾನೊಲ್ಲೆ ಕಾರ್ದಾಣಿ ಒಲ್ಲೋಲ್ಲೆ
ನನ್‌ಹೊಟ್ಟಿ ನೋಯ್‌ನೋಯ್ ನೋಯ್ತೈತೆ
ಎದಿಯಾಗ ಕಪ‌ಐತೆ ತಲಿಯಾಗ ಜ್ವರ‌ಐತೆ
ಕಾಲಾಗ ಮುಳ್‌ಮುಳ್ ನಟ್ಟೈತೆ ||೩||

ತಾಯಿ- ಉಂಡೀಯ ಗುಂಡಣ್ಣ ಪೇಡೇಯ ಚಲುವಣ್ಣ
ಬೇಡಣ್ಣ ಹೋಗ್ಬೇಡ ಸಾಲೀಗೆ ||ಪಲ್ಲ||

ತಾಯಿ- ಡಾಕ್ಟರ ಬರತಾನ ಚೂಜೀಯ ತರತಾನ
ಕುಂಡೀಗೆ ಕಾಲಿಗೆ ಚುಚತಾನ
ರಟ್ಟೀಗೆ ಹೊಟ್ಟೀಗೆ ಚಿಪ್ಪೀಗೆ ಚುರ್ರಂತ
ಕಾಸ್ಕಾಸಿ ಕಚ್ಚಂತ ಚುಚತಾನ ||೪||

ತಾಯಿ- ಬೋಂಡಾದ ಗುಂಡಣ್ಣ ಚೂಡಾದ ಚಲುವಣ್ಣ
ಹೋಗ್ಬ್ಯಾಡ ಹೋಗ್ಬ್ಯಾಡ ಸಾಲೀಗೆ ||ಪಲ್ಲ||

ಮಗ- ಅಯ್ಯಯ್ಯ ನಾನೊಲ್ಲೆ ಚೂಜೀಯ ಮರೆವೊಲ್ಲೆ
ಸಟ್ಟಂತ ಸಾಲೀಗೆ ಓಡ್ತೇನೆ
ಪುಸ್ತಕಾ ಹಿಡಿತೇನೆ ಪುರ್ರಂತ ಹಾರ್‍ತೇನೆ
ಮಾಸ್ತರ್‍ನ ಚಡಿಯೇಟು ತಿಂತೇನೆ ||೫||

ತಾಯಿ- ಇಡ್ಲಿಯ ಗುಂಡಣ್ಣ ಚೆಟ್ನಿಯ ಚಲುವಣ್ಣ
ಬಾಯ್‌ಬಾಯಿ ಗುಡ್‌ಬಾಯಿ ಸಾಲೀಗೆ ||ಪಲ್ಲ||

ಮಗ- ಬಾಯ್‌ಬಾಯಿ ಗುಡ್‌ಬಾಯಿ ಮಮ್ಮೀಗೆ||

ತಾಯಿ- ಬಾಯ್‌ಬಾಯಿ ಗುಡ್‌ಬಾಯಿ ಸಾಲೀಗೆ ||

ಮಗ- ಬಾಯ್‌ಬಾಯಿ ಗುಡ್‌ಬಾಯಿ ಮಮ್ಮಿಗೆ ||
*****