ಈ ನನ್ನ ದೇಹದ
ಎಲ್ಲ ಅವಯವಗಳು
ಒಂದೇ ಆದರೂ
ನಾ ದುಡಿಯುವುದು
ಹೊಟ್ಟೆ-ನಿನ್ನ ತುಂಬಿಸಲು
ಈ ನನ್ನ ಕಾರ್ಯದಲ್ಲಿ
ಮರೆತೆ ಬುದ್ಧಿ ಬೆಳೆಸಲು.
ಬೆನ್ನಿಗಂಟಿದ ಹೊಟ್ಟೆ
ನಿನ್ನ ಮುಂದೆ ತರಲು
ನಾ ಪಟ್ಟ ಪಾಡೇನು?
ಅದಕ್ಕಾಗಿ ನಾನೇನು
ಬೇಕಾದರೂ ಮಾಡೇನು.
ನಿನ್ನ ತುಂಬಿಸಲು
ದುಡಿದ ಫಲದಿಂದ
ತುಂಬಿತು ಮನೆ
ಸಿರಿ ಸಂಪದದಿಂದ!
ಸಿಕ್ಕಿದ್ದನೆಲ್ಲಾ ತಿಂದು
ಹೊಟ್ಟೆ ನಿನ್ನ ತುಂಬಿಸಿದೆ
ಗುಡಾಣದಂತೆ ಬೆಳೆಸಿದೆ
ಈಗದನ್ನು ಕರಗಿಸುವುದೇ
ನನಗೆ ದೊಡ್ಡ ಸಮಸ್ಯೆಯಾಗಿದೆ!
ಆಹಾರ, ಪಾನೀಯ ಮಾತ್ರವಲ್ಲ,
ಇತರರು ಮಾಡಿದ ತಪ್ಪನ್ನೆಲ್ಲಾ
ಹೊಟ್ಟೆಗೆ ಹಾಕಿಕೊಂಡೆ
ಕ್ಷಮಾಗುಣ ಸಂಪನ್ನ
ಎಂಬ ಗೌರವ ಪಡೆದುಕೊಂಡೆ.
ಹೊಟ್ಟೆ, ನನ್ನ-ನಿನ್ನ ಸಂಬಂಧ
ಜನುಮ ಜನುಮಗಳ ಅನುಬಂಧ
ಹುಟ್ಟುವುದಕ್ಕೆ ಮುಂಚೆ
ನಾನಿದ್ದುದೇ ಹೊಟ್ಟೆಯಲ್ಲಿ
ಮರಣಾನಂತರ ಮತ್ತೆ
ನಾ ಹೋಗಿ ಸೇರುವುದು
ಭೂ ತಾಯ ಹೊಟ್ಟೆಯಲ್ಲಿ.
*****
೧೬-೦೬-೧೯೯೨