ಮತ್ತೇರಿಸುವ ಗಾನದ
ನಶೆ ಏರಿಸುವ ಪಾನದ
ಕನಸಿನ ಲೋಕದಲ್ಲಿ
ಉನ್ಮತ್ತರಾಗಿ
ನರ್ತಿಸುತ್ತಿದ್ದಾರೆ
ಗಾಜಿನ ಮನೆಯವರು.
ನರ್ತಿಸದೆ
ಇನ್ನೇನು ಮಾಡಿಯಾರು ?
ಕಪ್ಪ ಕೊಡದೆ
ಬಾಚಿ ಗಳಿಸಿದ್ದಾರೆ
ಕಪ್ಪು ಹಣದ ಒಡೆಯರು.
ತಿಂದು ಕುಡಿದು
ಚೆಲ್ಲುತ್ತಿದ್ದಾರೆ
ಉತ್ತು ಬಿತ್ತದ ಧನಿಕರು
ಸತ್ತ ತಿರುಕರ ಕಂಡು
ಗಹಗಹಿಸಿ ನಗುತ್ತಿದ್ದಾರೆ
ಕಷ್ಟ ಅರಿಯದ ಮೂಢರು.
ಕಾಲ ಕೆಳಗೆ
ಸಿಕ್ಕವರ ತುಳಿಯುತ್ತಾ
ಮತ್ತು ಹೆಚ್ಚಾಗಿ
ನಗುತ್ತಾ ಹುಚ್ಚುಚ್ಚಾಗಿ
ನೊಂದವರ ಮೇಲೆ ಕೈಗೆ ಸಿಕ್ಕಿದ್ದನೆಲ್ಲಾ
ಎಸೆಯುತ್ತಿದ್ದಾರೆ ಜಾಣರು!
ಕಲ್ಲು ಒಡೆದು
ರಾಶಿ ಪೇರಿಸಿ
ಕೂಲಿ ಕಾಣದೆ ಹಸಿದು
ನೊಂದು ಕ್ರುದ್ಧರಾಗಿ
ಕುಳಿತವರ ಕೈಲಿ
ಕಲ್ಲಿದೆ ಎಂಬುದ
ಮರೆತು ನರ್ತಿಸುತ್ತಿದ್ದಾರೆ
ಗಾಜಿನ ಮನೆಯವರು.
*****
೧೮-೦೯-೧೯೯೨