ಕರ ಮುಗಿದು ಬೇಡುವೆನು ನಿನಗೆ
ಹರಸು ಬಾರಮ್ಮ ಭೂಮಿ ತಾಯೇ
ಮುನಿಸಿಕೊಳ್ಳದಿರು ಅನವರತ
ನೀ ನಮ್ಮ ಜೀವದಾತೆ.

ಲೆಕ್ಕವಿಲ್ಲದ ದೇವರುಗಳೆಲ್ಲ
ನಿನ್ನ ತೆಕ್ಕೆಯಲ್ಲಿ ಬೆಳೆದವರು
ಯಾವ ದೇವರು ಕೊಡದಿರುವ
ಕಾಣಿಕೆಗಳನ್ನು ನಿನ್ನಿಂದಲೇ ಪಡೆದಿಹೆವು.

ಮುಕ್ಕೋಟಿ ದೇವರುಗಳು ಮುನಿಸಿಕೊಂಡರೂ
ನಾವು ಬದುಕಿ ಬಾಳ ಬಲ್ಲೆವು
ನೀನು ಮುನಿದು ಕೋಪಿಸಿಕೊಂಡರೆ
ಬದುಕಿ ಉಳಿಯಬಲ್ಲೆವೇ ನಾವು.

ಜೀವ ಜೀವಿಗಳೆಲ್ಲ ನಿನ್ನನ್ನೆ ನಂಬಿಹರು
ಹಿಡಿ ಬಿತ್ತಿದರೆ ಕುಡುಕೆ ಫಲವ ಕೊಡುವ
ಜೀವನದ ಅಕ್ಷಯ ಪಾತ್ರೆಯು ನೀನು
ಬದುಕಿಸಿ ಸಲುಹುತ್ತಿರುವೆ ನೀ ಎಲ್ಲರನ್ನು.

ಕಂದನ ಹೊಲಸಿಗೆ ಹೇಸದ ತಾಯಿಯಂತೆ
ಎಲ್ಲರ ಹೊಲಸ ಸಹಿಸಿ ಕ್ಷಮಿಸಿ ಪಾಪವ ಕಳೆವೆ
ಪಡೆದ ತೃಣವೆಲ್ಲವೂ ನಿನ್ನ ಒಡಲ ಕಾಣಿಕೆಯದು
ಮತ್ತೆ ಸೇರುವೆವು ಕೊನೆಗೆ ನಿನ್ನ ಒಡಲೊಳಗೇನೆ.

ನಿತ್ಯ ಸುಂದರ ಸುಮಂಗಲಿ ನೀನಾಗಿಹೆ
ಜೀವಗಳ ಜೀವದುಸಿರು ನೀನಾಗಿಹೆ
ಹಸಿರು ಸಿರಿಯ ಹೊತ್ತು ಭೂ ಮಾತೆ
ಜೀವಿಗಳೆಲ್ಲವ ಸಲಹಮ್ಮ ಲೋಕಮಾತೆ.
*****