ಗಿಳಿ ಮತ್ತು ಸೀತೆ

ಹೇಳು ಗಿಳಿಯೆ ಹೇಳು ಇಂದೇಕೆ ನೀ ಮೌನ
ಕಣ್ಣೀರ ಸುರಿಸುತ್ತಾ ಕೊರಗುವೇಕೆ!
ಇಷ್ಟು ವರ್ಷಗಳಿಂದ ಜೊತೆ ಗೆಳತಿಯಾಗಿದ್ದ
ಸೀತೆ ಮಿಥಿಲೆ ತೊರೆದು ಹೋಗುವಳೆಂದೆ!

ಸೀತೆ ಮನ ತುಂಬಿದವ ಶ್ರೀರಾಮ
ಶ್ರೀರಾಮ ವರಿಸಿದ ಹೆಣ್ಣು ಸೀತೆ
ಇಬ್ಬರಾಸೆಗಳಿಂದು ಕೈಗೂಡಿ ಅವರಿಂದು
ಸತಿಪತಿಗಳಾಗಿಹುದು ದೈವಲೀಲೆ |

ಇಂದು ಮಿಥಿಲಾಪುರವೂ ವೈಭವದಿ ಮಿಂಚಿಹುದು
ಅರಮನೆಯ ತುಂಬೆಲ್ಲಾ ಜನಸಾಗರ
ಜನಕರಾಜನ ಕಣ್ಣು ತುಂಬಿ ನಿಂತಿದೆ ಇಂದು
ಸಂತೋಷದಲಿ ದುಃಖ ಕೂಡಿಕೊಂಡು |

ನೋಡು ಗಿಳಿಯೆ ನಿನ್ನ ಆ ಗೆಳತಿ ಸೀತೆಯನು
ಹಿರಿಯ ಸಂತಸದಲ್ಲು ದುಃಖಭಾವ
ಚಿಗುರು ಬೆರಳುಗಳಿಂದ ತಂದೆ ಕಣ್ಣೀರನ್ನು
ಒರೆಸಿ ನಗಿಸುತಲಿಹುದು ಕಾಣದೇನು!

ಸಲಹಿದಪ್ಪನ ಹೊರತು ಆತ್ಮೀಯರಾರಿಹರು!
ನೀನಲ್ಲವೇ ಅವಳ ಪ್ರೀತಿ ಗೆಳತಿ!
ನಿನ್ನ ಮರೆಯುವಳೇನೇ, ನಿನ್ನ ಬಿಟ್ಹೋಗುವಳೆ!
ತವರು ನೆನಪಿನ ಒಡವೆ ನೀನೆ ತಾನೆ!

ನೋಡು ಅರಮನೆ ಮುಂದೆ ಕನಕರಥ ನಿಂತಿಹುದು
ಶ್ರೀರಾಮ ಅದರಲ್ಲಿ ಕುಳಿತಿಹನು
ಕಣ್ಣ ಕುಡಿ ನೋಟದಲೆ ರಾಮ, ಸೀತೆಯ ಕರೆವ
ನಿನಗೆ ಆಯಿತೆ ಲಜ್ಜೆ! ಘಾಟಿ ನೀನು|
ನಿನ್ನ ಇನಿದನಿ ನಿನ್ನ ಇಂಪಾದ ಸವಿನುಡಿಯ
ಎಲ್ಲೂ ಕೇಳದೆ ಸೀತೆ ಹುಡುಕುತಿಹಳು
ಬಾ ನನ್ನ ತೊಡೆವೇರು ಎನುತ ಕರೆಯುತಿಹಳು
ಪಿಸುಮಾತು ಮೆಲು ದನಿಯ ದಾಟಿಯಲ್ಲಿ|

ನವ ದಂಪತಿಗಳ ನಡುವೆ ನನ್ನ ಇರುವಿಕೆ ಸರಿಯೇ
ಎಂದೇಕೆ ಬೇಸರ ಪಡುತಲಿರುವೆ ||
ಸೀತೆ ಪ್ರತಿರೂಪದಲಿ ಆ ರಥದ ಕೆಳೆಯು ನೀನು
ಪಯಣಿಸಮ್ಮ ಗಿಳಿಯೆ ಮುಂದೆ ನೀನು !
ಬಾ ಗಿಳಿಯೆ ರಥವೇರು ಸೀತೆ ಕರೆಯುತಲಿಹಳು
ಹೊತ್ತಾಯ್ತು ಇನ್ನೇಕೆ ಚಿಂತೆ ನಿನಗೆ!
ಮೌನ ಬಿಡು ಸುತ್ತೆಲ್ಲ ಚೈತ್ರ ಚೆಲುವಿದೆ ನೋಡು
ಹಾಡುತ್ತ ನೀ ಸಾಗು ಹೆಮ್ಮೆಯಿಂದ |
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

ಪಾಳೇಗಾರ Previous post ಪಾಳಯಗಾರರು – ಬಂಗಾಳ ಪ್ರಾಂತದಲ್ಲಿರುವ ಜಮೀನ್ದಾರರು
Next post ಕವಿತೆ…

ಸಣ್ಣ ಕತೆ

 • ಕನಸುಗಳಿಗೆ ದಡಗಳಿರುದಿಲ್ಲ

  ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

 • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

  ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

 • ಕನಸು ದಿಟವಾಯಿತು

  ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…

 • ದೊಡ್ಡ ಬೋರೇಗೌಡರು

  ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…