ಪಾಳಯಗಾರರು – ಬಂಗಾಳ ಪ್ರಾಂತದಲ್ಲಿರುವ ಜಮೀನ್ದಾರರು

ಪಾಳಯಗಾರರು – ಬಂಗಾಳ ಪ್ರಾಂತದಲ್ಲಿರುವ ಜಮೀನ್ದಾರರು

(೧) ಬಂಗಾಳ ಪ್ರಾಂತದಲ್ಲಿರುವ ಜಮೀನ್ದಾರರು.

ತುರುಕರು ಈ ಸೀಮೆಗೆ ಬರುವುದಕ್ಕೆ ಮುಂಚಿನಿಂದಲೂ ಗ್ರಾಮಗಳಲ್ಲಿ ಸೇರಿಕೊಂಡು ಅಲ್ಲಿನ ಭೂಮಿಗೆಲ್ಲಾ ಸ್ವಾಮಿತ್ವವನ್ನು ಹೇಗೆಯೋ ಸಂಪಾದಿಸಿ ಮುಖಂಡರಾಗಿ ಆಯಾಕಾಲಗಳಲ್ಲಿದ್ದ ಸರ್‍ಕಾರದವರಿಗೆ ಆಯಾ ಗ್ರಾಮಗಳಿಗಾಗಿ ನಿಗದಿಯಾದ ಹಣವನ್ನು ಕೊಡುತಾ ಸ್ವಾಮ್ಯವನ್ನು ಸಂಪಾದಿಸಿಕೊಂಡವರು ಜಮೀನ್ದಾರರೆನ್ನಿಸಿಕೊಳ್ಳುತ್ತಾ ಬಂದರು. ಬಂಗಾಳ ಪ್ರಾಂತದಲ್ಲೆಲ್ಲಾ ವಿಶೇಷವಾಗಿ ಇವರೇ ಆಗಿದ್ದಾರೆ. ಆಯಾ ಕಾಲಗಳಲ್ಲಿದ್ದ ಸರ್‍ಕಾರದವರ ವಿಷಯದಲ್ಲಿ ವಿಧೇಯತೆಯಿಂದಲೂ, ವಿಶ್ವಾಸದಿಂದಲೂ ನಡೆದುಕೊಳ್ಳುತಾ, ನಿಗದಿಯಾದ ಮೊತ್ತವನ್ನು ಪಾವತಿ ಮಾಡುತಾ ಇರುವ ತನಕ ಇವರ ಹಕ್ಕಿಗೆ ಚ್ಯುತಿ ಇಲ್ಲ. ಇವರಲ್ಲಿ ವಿಶೇಶವಾಗಿ ಪ್ರಬಲರಾದವರು ರಾಜರು ಮಹಾರಾಜರು ಎಂಬ ಹೆಸರುಗಳನ್ನು ಸಹ ಹೊಂದಿದ್ದಾರೆ. ಇವರು ವಿಶೇಷವಾಗಿ ಪ್ರಬಲಿಸಲು ಮತ್ತು ಶಿಕ್ಷರಕ್ಷಣಾಧಿಕಾರವನ್ನು ಹೊಂದಿ ಸೇನೆಯನ್ನಿಟ್ಟು ಸ್ವತಂತ್ರವಾದಂಥಾ ರಾಜಪದವಿಯನ್ನು ಹೊಂದಲು ತುರುಕರ ಹಾವಳಿಯಲ್ಲಿ ಆಸ್ಪದ ದೊರೆಯಲಿಲ್ಲ.

(೨) ತಾಲ್ಲೂಕುದಾರರು.

ಇವರು ಅಯೋಧ್ಯಾ ಪ್ರಾಂತದಲ್ಲಿ ಹೇರಳವಾಗಿದ್ದಾರೆ. ಪುರಾತನ ಕಾಲದಿಂದಲೂ ಹೇಗೆಯೋ ಭೂಮಿಯನ್ನು ವಿಸ್ತಾರವಾಗಿ ಸಂಪಾದಿಸಿಕೊಂಡಿರತಕ್ಕವರು, ಆಯಾ ದೊರೆಗಳ ಆಳಿಕೆಗಳಲ್ಲಿ ಉಂಬಳಿಯಾಗಿಯೂ ಇನಾಮಾಗಿಯೂ ಹೆಚ್ಚಾದ ಭೂಪ್ರದೇಶವನ್ನು ಸಂಪಾದಿಸಿದವರು, ಕಾಲಾನುಕಾಲಗಳಲ್ಲಿ ದೊರೆತನ ಮಾಡುತಿದ್ದವರ ಕಿರೀ ಮಕ್ಕಳು ಮತ್ತು ಅವರ ಸಂತತಿಗೆ ಸೇರಿದವರು, ಇಂಥವರೆಲ್ಲಾ ಈ ವರ್ಗಕ್ಕೆ ಸೇರುತ್ತಾರೆ. ಇವರಲ್ಲಿ ಬಹು ಮಂದಿಯು ಜಮೀನ್ದಾರರು ತೆರುವಂತೆಯೇ ಆಯಾ ಕಾಲದ ದೊರೆಗಳಿಗೆ ಗೊತ್ತಾದ ಮೊತ್ತವನ್ನು ತೆರುತಾ ಇರುತಾರೆ. ಆದರೆ ಇವರು ಜಮೀನ್ದಾರರಷ್ಟು ಪ್ರಬಲರಲ್ಲ, ಅವರ ದರ್ಜೆಗೆ ಯಡ ಗೈಯ್ಯಾಗಿದಾರೆ.

(೩) ಜಹಗೀರ್‌ದಾರರು

ಆಯಾ ಸರ್ಕಾರಗಳಿಗೆ ಸೇರಿ ದೂರವಾಗಿರತಕ್ಕ ಪ್ರದೇಶಗಳಲ್ಲಿ ಅಧಿಕಾರ ಮಾಡುತಾ ದುಷ್ಟರಾದವರನ್ನು ಅಡಗುಮೆಟ್ಟುತಾ ರಾಜ್ಯದ ಆಡಳತವನ್ನು ಬಿಗಿಯಾಗಿ ನೋಡಿಕೊಳ್ಳುತಾ ಅಗತ್ಯಬಿದ್ದಾಗ ಸರ್‍ಕಾರಕ್ಕೆ ಸೇನೆಯ ಸಹಾಯ ಕೊಡುವುದಕೋಸ್ಕರ ನೇಮಕವಾದವರು ಜಹಗೀರ್‌ದಾರರೆನಿಸಿ ಕೊಂಡರು. ಇವರು ಸರ್‍ಕಾರಕ್ಕೆ ಯಾವ ವಿಧವಾದ ತೆರಿಗೆಯನ್ನೂ ತೆರಬೇಕಾಗಿರಲಿಲ್ಲ. ಕೆಲವು ಪ್ರದೇಶಗಳಲ್ಲಿ ಮೊಗಲ್ ಚಕ್ರವರ್ತಿಗಳು ಇಂಥಾ ಜಹಗೀರುಗಳನ್ನು ಒಂದೊಂದು ತಲೆಯ ಅನುಭವದ ಮಟ್ಟಿಗೆ ಕೊಡುತಿದ್ದರು. ಈ ಜಹಗೀರ್‌ದಾರರು ಗುಜರಾತು ಮಧ್ಯ ದೇಶ ಮೊದಲಾದ ಪ್ರದೇಶಗಳಲ್ಲಿ ಹೆಚ್ಚಾಗಿದ್ದರು.

ದೇಶಾಯಿ ಮೊದಲಾದ ಚಿಲ್ಲರೆ ಇನಾಂದಾರರು

(೪) ದೇಶಾಯಿ ಅಥವಾ ದೇಶಮುಖ.

ಹತ್ತು ಅಥವಾ ಅದಕ್ಕೆ ಮೇಲ್ಪಟ್ಟ ಸಂಖ್ಯೆ ಗ್ರಾಮಗಳಿಗೆ ಒಂದು ಪ್ರಾಂತವೆಂದು ಹೆಸರಾಗಿತ್ತು. ಇಂಥಾ ಪ್ರಾಂತಗಳು ಹಲವು ಸೇರಿಕೊಂಡಿದ್ದರೆ ಆ ಪ್ರದೇಶಕ್ಕೆ ದೇಶವೆಂದು ರೂಢಿ. ಅಂಥಾ ದೇಶಕ್ಕೆ ಮುಖಂಡನಾದವನು ದೇಶಾಯಿ ಅಥವಾ ದೇಶಮುಖ. ಅದಕ್ಕೆ ಮುಖ್ಯ ಗಣಿಕನಾದವ ದೇಶಪಾಂಡೆ, ದೇಶಕುಲಕರಣಿ. ಇವನು ಗ್ರಾಮದ ಲೆಕ್ಕಪತ್ರಗಳನ್ನು ಇಟ್ಟು ಬರವಣಿಗೆ ಕೆಲಸ ಮಾಡತಕ್ಕವನು. ಇವನಿಗೆ ದೇಶ ಕುಲಕರಣಿ ಎಂತಲೂ ಹೆಸರು.

ಸರ್ ದೇಶಮುಖ ಅಥವಾ ದೇಶಪಾಂಡೆ

ದೇಶಕ್ಕಿಂತಲೂ ದೊಡ್ಡದಾದ ಪ್ರದೇಶಕ್ಕೆ ಮುಖಂಡನಾದವನಿಗೆ ಸರ್ ದೇಶಮುಖ ಎಂತಲೂ ಆ ಸ್ಥಳಕ್ಕೆ ಕರಣೀಕನಾದವನಿಗೆ ಸರ್ ದೇಶಪಾಂಡೆ ಎಂತಲೂ ಹೆಸರು. ದೇಶಮುಖನು ಮೈಸೂರು ಸೀಮಯಲ್ಲಿ ಪಟೇಲನೆಂತಲೂ ದೇಶ ಪಾಂಡೆಯು ಶಾನುಭೋಗನೆಂತಲೂ ಹೆಸರು ಹೊಂದಿದಾರೆ.

ಅಂಥಾ ಒಂದು ದೊಡ್ಡ ಪ್ರದೇಶಕ್ಕೆ ಸರ್‌ಸುಭ ಎಂದು ಹೆಸರು. ಅಂಥಾ ಕಡೆ ಸರ್‍ವಾಧಿಕಾರ ಮಾಡತಕ್ಕ ಅಧಿಕಾರಿಯೇ ಸುಭದಾರ್; ಇದು ಕೆಟ್ಟು ಸುಬೇದಾರ್ ಎಂದಾಯಿತು. ಇದಕ್ಕಿಂತಲೂ ಸ್ವಲ್ಪ ಚಿಕ್ಕ ಪ್ರದೇಶವಾಗಿದ್ದರೆ ಅದನ್ನು ಸರ್‍ಕಾರವೆನ್ನುತಿದ್ದರು. ಇದಕ್ಕೆ ೧೦ ರಿಂದ ೪೦ ಡಿಸ್ಟ್ರ್‍ಇಕ್ಟಿನವರೆಗೂ ಸೇರಿತ್ತು. ಇಂಥಾ ಒಂದು ಪ್ರದೇಶಕ್ಕೆ ಮಹಲ್ ಅಥವಾ ಪರ್‌ಗನ ಎಂದು ಹೆಸರು. ಒಂದು ಡಿಸ್ಟ್ರ್‍ಇಕ್ಟಿನಲ್ಲಿ ೫೦ ರಿಂದ ೧೦೦ ಗ್ರಾಮದವರೆಗೂ ಸೇರಿತ್ತು. ಒಂದು ಡಿಸ್ಟ್ರ್‍ಇಕ್ಟಿನಲ್ಲಿ ಕಾಯಿಸ್‌ದಾರ್ ಎಂಬ ಅಧಿಕಾರಿ ಇರುತಿದ್ದನು. ಇವನು ಅಲ್ಲಿನ ಸುವರ್ಣಾದಾಯವನ್ನು ವಸೂಲ್ಮಾಡುತಿದ್ದನು. ದೇಶಾಯಿಗೂ ದೇಶಮುಖನಿಗೂ ಹಣ ವಸೂಲ್ಮಾಡುವುದಕ್ಕಾಗಿ ನಾನ್‌ಕಾರ್ ಎಂದು ಭತ್ಯವೂ ಮತ್ತು ವಸೂಲಾದ ಹಣದ ಮೇಲೆ ಪ್ರತಿ ಗ್ರಾಮಕ್ಕೂ ಒಂದೆರಡು ರೂಪಾಯಿಯೂ ಸಲ್ಲುತಿತ್ತು. ಇದಕ್ಕೆ ಲಾಣಿ (ಲಾವಣಿ) ಎಂದು ಹೆಸರು.

ದರಬಾರಿನ ಬಿಗಿ ಕಡಮೆಯಾದಾಗ ಈ ಅಧಿಕಾರಿಗಳು ವಿಶೇಷವಾಗಿ ಬಲಕಾಯಿಸಿಕೊಂಡು ಭೂಮಿಯನ್ನು ಹೆಚ್ಚಾಗಿ ಆಕ್ರಮಿಸಿ ಸರ್ಕಾರದ ಹಣವನ್ನೂ ಭಕ್ಷಿಸುತ್ತಾ ಇದ್ದರು.

ಇಂಥಾ ಅಧಿಕಾರಿಗಳು ಪ್ರಬಲರಾಗಿ ಭಾರಿಯಾದ ಭೂಪ್ರದೇಶಕ್ಕೆ ಅಧಿಪತಿಗಳಾಗುತ್ತಾ ಬಂದರು,

ಬಹಮನಿಯವರು ನೇಮಿಸಿದ ಪ್ರಮುಖರು

ಮತ್ತು ಬಹಮನಿ ರಾಜ್ಯದ ತುರುಕ ದೊರೆಗಳೂ ಮತ್ತು ೫ ಷಾಹಿ ವಂಶದ ದೊರೆಗಳೂ ತಮ್ಮ ರಾಜ್ಯಗಳಲ್ಲಿ ಒಂದೊಂದು ಸುದೇಶಕ್ಕೆ ಒಬ್ಬೊಬ್ಬ ದೊಡ್ಡ ಅಧಿಕಾರಿಯನ್ನು ನೇಮಿಸಿ ಅವನಿಗೆ ಆ ಮಂಡಲಿಯಲ್ಲಿ ಸರ್‍ವಾಧಿಕಾರವನ್ನೂ ಕೊಡುತಿದ್ದರು. ಇಂಥಾ ಅಧಿಕಾರಿಗಳು ಅಲ್ಲಿನ ಸುವರ್ಣಾದಾಯವನ್ನು ವಸೂಲ್ಮಾಡಿಕೊಂಡು ಭಾರಿಯಾಗಿ ಸೇನೆಯನ್ನೂ ರಾಜ್ಯವನ್ನೂ ಸಮಾಧಾನವಾಗಿಟ್ಟುಕೊಂಡು ಯುದ್ಧಪ್ರಸಕ್ತಿ ಬಂದಾಗ ದೊರೆಗೆ ಸಹಾಯವನ್ನು ಮಾಡಬೇಕೆಂದು ಗೊತ್ತಾಗಿತ್ತು. ಇಂಥಾ ಅಧಿಕಾರಿಗಳು ಒಂದೊಂದು ಸಮಯಬಂದಾಗ ವಿಶೇಷವಾಗಿ ಪ್ರಬಲಸಿ ದೊರೆಯನ್ನು ಪ್ರತಿಭಟಿಸಿ ರಾಜ್ಯವನ್ನು ಆಕ್ರಮಿಸಿಕೊಳ್ಳುತ್ತಲೂ ಇದ್ದರು. ಸನ್ ೧೪೮೯ ರಲ್ಲಿ ಬಹಮನಿ ರಾಜ್ಯವು ಒಡೆದು ಬಿಜಾಪುರದಲ್ಲಿ ಅಡಿಲ್ ಷಾಹಿ ಸಂತತಿಯವರೂ, ಅಹಮದ್ ನಗರದಲ್ಲಿ ನಿಸಾಂಷಾಹಿ ಸಂತತಿಯವರೂ, ಬೀದರ್ ಆಥವಾ ಬಿದರೆಯಲ್ಲಿ ಭಾರೀದ್ ಷಾಹಿ ಸಂತತಿಯವರೂ, ಗೋಲ್ಕೊಂಡದಲ್ಲಿ ಹುಸೇನ್ ಷಾಹಿ ಸಂತತಿಯವರೂ, ಎಲಿಚ್‌ಪುರದಲ್ಲಿ ಇಮಾದ್ ಷಾಹಿ ಸಂತತಿಯವರೂ ಸ್ವತಂತ್ರವಾಗಿ ದೌಲತ್ತು ಮಾಡುತ್ತಾ ಬೇರೇ ಬೇರೇ ಸಂಸ್ಥಾನಗಳನ್ನು ಸ್ಥಾಪಿಸಿಕೊಂಡರಷ್ಟೆ. ಇವರುಗಳೂ ಕೂಡ ಕೆಲವು ಅಧೀನ ರಾಜರನ್ನು ಮಾಡಿಕೊಂಡು ಅವರಿಂದ ಕಪ್ಪ ಮೊದಲಾದ್ದನ್ನು ತೆಗೆದುಕೊಳ್ಳುತ್ತಾ ಇದ್ದರು. ಆಗಲೂ ಅದಕ್ಕೆ ಮುಂಚಿನಿಂದಲೂ ಸ್ವತಂತ್ರವಾಗಿ ಇದ್ದ ಗದ್ದವಾಲ, ವನಪರ್ತಿ, ಆತ್ಮಕೂರು, ಮೊದಲಾದ ಅನೇಕ ಚಿಕ್ಕ ಸಂಸ್ಥಾನಗಳು ಈ ಷಾಹಿ ದೊರೆಗಳಿಗೆ ಅಧೀನವಾದವು. ಮೊದಲು ಇದ್ದ ಸಂಸ್ಥಾನಗಳ ಜೊತೆಗೆ ಈ ಪ್ರಕಾರ ಹಲವು ಹೊಸ ಸಂಸ್ಥಾನಗಳು ಹುಟ್ಟಿದವು.

ಪಶ್ಚಿಮ ಸಮುದ್ರ ತೀರದ ಹೆಗ್ಗಡಿಗಳು

ಇದೂ ಅಲ್ಲದೆ ಪಶ್ಚಿಮ ಸಮುದ್ರ ತೀರದ ಪ್ರಾಂತದಲ್ಲಿ ಅನೇಕ ಚಿಲ್ಲರೆ ರಾಜರುಗಳಿದ್ದರು. ಮೈಸೂರು ದಕ್ಷಿಣ ದೇಶ ಮೊದಲಾದ ಪ್ರದೇಶಗಳಲ್ಲಂತೂ ಲೆಕ್ಕವಿಲ್ಲದಷ್ಟು ಜನ ಅಧಿಪತಿಗಳಿದ್ದರು. ಇವರಲ್ಲಿ ಅನೇಕರು ಸ್ವತಂತ್ರವಾಗಿ ರಾಜರೆಂದು ಆಳುತಾ ಆಯಾ ಕಾಲದಲ್ಲಿ ರಾಜಾಧಿರಾಜರೆನಿಸಿಕೊಂಡವರಿಗೆ ಸಾಮಂತನರಪತಿಗಳಾಗಿದ್ದರು. ವಿಜಯನಗರದ ಸಂಸ್ಥಾನದ ರಾಯರುಗಳು ಇವರೆಲ್ಲರನ್ನೂ ಜೈಸಿ ಚಕ್ರವರ್ತಿಗಳೆನ್ನಿಸಿಕೊಂಡಿದ್ದದೂ ಅಲ್ಲದೆ ಕೆಲವು ಹೊಸ ಪ್ರ್‍ಆಂತಗಳನ್ನು ಕೊಟ್ಟು ಹೊಸದಾಗಿ ಕೆಲವು ಅಧೀನ ರಾಜ್ಯಗಳನ್ನು ಸ್ಥಾಪನೆ ಮಾಡಿದರು.

ಇದೇ ಪಾಳಯಗಾರರ ಸಂಸ್ಥೆ ಎನ್ನಿಸಿಕೊಂಡಿತು. ಇವರಲ್ಲಿ ಪ್ರಬಲರಾದವರು ಸ್ವತಂತ್ರರಾಗಿ ದೊರೆಗಳಂತೆ ಆಳುತಿದ್ದರು. ಇನ್ನು ಕೆಲವರು ಆಧೀನರಾಗಿದ್ದು ಕೊಂಡು ತಂತಮ್ಮ ಸೀಮೆಗಳ ಸುವರ್‍ಣಾದಾಯವನ್ನು ವಸೂಲ್ಮಾಡಿಕೊಂಡು ನಿಗದಿಯಾದ ಮೊಬಲಗನ್ನು ಖಾಯಂಗುತ್ತಿಗೆಯಂತ ಚಕ್ರವರ್ತಿಗಳ ಸರ್‍ಕಾರಕ್ಕೆ ತೆರುತಾ ಉಳಿದ ದಂಡನಾದಿ ಇತರ ಅಧಿಕಾರಗಳನ್ನು ಆ ಸರ್ಕಾರಕ್ಕೆ ಬಿಟ್ಟು ಬಿಟ್ಟಿದ್ದರು.

೪ ಕೆಲವರು ಹೆಚ್ಚಾಗಿಯೂ ಕೆಲವರು ಕಡಮೆಯಾಗಿಯೂ ದೇಶವನ್ನು ಕಟ್ಟಿಕೊಂಡು ಆಯಾ ಕಾಲಗಳಲ್ಲಿ ಪ್ರಬಲರಾಗಿ ಬಂದ ದೇಶೀಯ ಮಹಾರಾಜರನ್ನೂ ಮುಸಲ್ಮಾನ್ ದೊರೆಗಳನ್ನೂ ಅನುಸರಿಸಿಕೊಂಡು ಇದ್ದರು. ಇಂಥಾ ಫೂಟು ದೊರೆಗಳು ಜರುಗಿಸುತಿದ್ದ ಅಧಿಕಾರವು ಅಲ್ಲಲ್ಲಿ ವಿಶೇಷವಾಗಿ ಭಿನ್ನಿ ಸಿದ್ದಾಗ್ಯೂ ನಮ್ಮ ಭರತಖಂಡದಲ್ಲಿ ಇಂಥವರು ಹೆಚ್ಚಾಗಿದ್ದಂತೆ ತಿಳಿಯಬಂದಿದೆ. ಹೆಸರೂ ಅಧಿಕಾರವೂ ಭೇದಿಸಿರಬಹುದು. ಸಂಸ್ಥೆಯೇನೋ ಇದ್ದದು ನಿಜ. ಉತ್ತರ ದೇಶದಲ್ಲಿ ಗುಲಾಮಿ ದೊರೆಗಳೂ ಮೊಗಲಾಯಿ ಚಕ್ರವತಿಗಳೂ ಇವರಕಡೆ ದಂಡಿನ ಸರದಾರರೂ ಸಹಾ ಈ ಅಧ್ಯಕ್ಷರ ಅಧಿಕಾರವನ್ನು ಕಡಮೆ ಮಾಡಿ ಅವರನ್ನು ಆಗಾಗ್ಗೆ ಬಾಧಿಸುತ್ತಾ ಅವರಿಂದ ವರ್ಷೆ ವರ್ಷೆ ನಿಗದಿ ಯಾದ ಹಣವನ್ನು ವಸೂಲ್ಮಾಡಿಕೊಳ್ಳುತಿದ್ದರು. ಈ ಮೊಬಲಗಿನ ಜೊತೆಗೆ ಸಮಯಬಿದ್ದಾಗ ನಜರಾಣಿ ಎಂಬ ಹೆಸರಿನಿಂದ ಬೇಕಾದ್ದನ್ನು ದೋಚಿಕೊಳ್ಳುತ್ತಾ ಇದ್ದರು. ಅವರಲ್ಲಿ ಪ್ರಬಲರಾದವರಿಂದ ಸಮಯದಲ್ಲಿ ಸೇನೆಯ ಸಹಾಯವನ್ನೂ ಹೊಂದುತ್ತಾ ಇದ್ದರು. ಇಷ್ಟು ಹೊರತು ದಕ್ಷಿಣ ದೇಶದಲ್ಲಿ ಇಂಥಾ ಸಂಸ್ಥಾನೀಕರಾದ ಪಾಳಯಗಾರರು ಪ್ರಬಲಿಸಿ ಮಾಡಿದ ಕೆಲಸಗಳನ್ನು ಅಂಥವರು ಉತ್ತರದಲ್ಲಿಯೂ ಮಾಡುವುದಕ್ಕೆ ಮೊಗಲಾಯರ ಮತ್ತು ಇತರ ಮುಸಲ್ಮಾನರ ಹಾವಳಿಯು ಆಸ್ಪದ ಕೊಡುತ್ತಿರಲಿಲ್ಲ. ದಕ್ಷಿಣ ದೇಶದ ಸ್ಥಿತಿ ವ್ಯತ್ಯಸ್ತವಾಗಿತ್ತು. ಇಲ್ಲಿ ದಖನಿ ತುರುಕರು ರಾಜ್ಯದ ಆಡಳತ ನಡೆಯುವುದಕ್ಕೆ ಅಲ್ಲಲ್ಲಿ ಇಂಥಾ ಸಂಸ್ಥಾನೀಕರನ್ನು ತಾವೇ ನೇಮಕ ಮಾಡಿದ್ದೂ ಅಲ್ಲದೆ ತಮಗೆ ವಿಧೇಯರಾದವರನ್ನು ಆಯಾ ಸ್ಥಳದಲ್ಲಿಯೇ ಅಧಿಕಾರ ಮಾಡಿಕೊಂಡಿರಲು ಬಿಟ್ಟಿದ್ದರು. ವಿಜಯನಗರದ ಚಕ್ರವರ್ತಿಗಳಂತೂ ಇಂಥಾ ಪಾಳಯಪಟ್ಟುಗಳಿಗೆ ಉತ್ತೇಜನಕೊಟ್ಟರು. ಇದರಿಂದ ದಕ್ಷಿಣದಲ್ಲಿ ಇವುಗಳು ಅತ್ಯಂತ ಪ್ರಾಬಲ್ಯಕ್ಕೆ ಬರಲು ಆಕರವಾಯಿತು.

ಮೊಗಲಾಯರಾಗಲಿ ದಕ್ಷಿಣದ ಬಹಮನಿ ತುರುಕರಾಗಲಿ ಈ ಭಿನ್ನ ಸಂಸ್ಥಾನೀಕರ ದೆಸೆಯಿಂದ ಯಾವ ಭೀತಿಯನ್ನೂ ಎದುರುನೋಡುವ ಸಂದರ್ಭವಿರಲಿಲ್ಲವಾದ ಕಾರಣ, ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಇವರನ್ನು ಉಪಯೋಗಿಸಿಕೊಳ್ಳಬೇಕೆಂದು ಬಿಟ್ಟಿದ್ದರೇ ಅಲ್ಲದೆ ಇವರನ್ನು ನಿರ್ಮೂಲ ಮಾಡಲಿಲ್ಲ. ಆದರೆ ರಾಜಕೀಯ ವ್ಯಾಪಾರದಲ್ಲಿ ಔರಂಗಜೇಬನು ನಮ್ಮ ದೇಶೀಯರ ಮೇಲೆಯೇ ಅಲ್ಲದೆ ಮುಸಲ್ಮಾನರ ಗುಂಪಿಗೆ ಸೇರಿದ ಷಾಹಿ ಮೊದಲಾದ ದೊರೆಗಳ ಮೇಲೆಯೂ ತೋರಿಸಿದ ಅಂಧಕ ವ್ಯಾಪಾರದ ರಾಜತಂತ್ರವು ಮೊಗಲರ ಆಳಿಕೆಗೆ ಇದ್ದ ಅಲ್ಪ ಸ್ವಲ್ಪ ಪ್ರಜಾನುರಾಗವನ್ನೂ ಕೆಡಿಸಿ ಸಾತ್ವಿಕರು ಸಂಕಟ ಪಡುವುದಕ್ಕೂ, ಧೈರ್‍ಯಶಾಲಿಗಳು ತಿರುಗಿಬಿದ್ದು ಕೈಮಾಡುವುದಕ್ಕೂ ಕಾರಣವಾಯಿತು. ಇಂಥಾ ದೇಶೀಯ ಶೂರರ ಪಟ್ಟಿಯಲ್ಲಿ ಶಿವಾಜಿಯೇ ಮೊದಲನೆಯವನಾಗಿದ್ದಾನೆ. ಈ ಶಿವಾಜಿಯು ಆದಿಭಾಗದಲ್ಲಿ ಗರಿ ಗಟ್ಟಿಕೊಳ್ಳುವುದಕ್ಕೆ ತಕ್ಕ ಪ್ರಯತ್ನ ಮಾಡಿ ಮಹಾರಾಷ್ಟ್ರ ದೇಶ ದಲ್ಲಿಯೂ, ಕೊಂಕಣ ದೇಶದಲ್ಲಿಯೂ ಹಲವು ಪುರಾತನ ಪ್ರಮುಖರನ್ನೂ ಜಹಗೀರ್‌ದಾರರನ್ನೂ ನಾಶಮಾಡಿ ಅವರ ರಾಜ್ಯವನ್ನು ಆಕ್ರಮಿಸಿದನು. ಪಾಳಯಪಟ್ಟಿಗೆ ಸಮಾನವಾದ ಕೆಲವು ಸಂಸ್ಥಾನಗಳು ಇದರಿಂದ ನಾಶವಾದವು.

ಹೈದರನೆಂಬ ಬಿರುಗಾಳಿ

ಆ ಸುಮಾರು ಕಾಲದಲ್ಲಿ ತಲೆ ಎತ್ತಿ ಪ್ರಬಲಕ್ಕೆ ಬರುತ್ತಾ ಇದ್ದ ಮೈಸೂರು ದೊರೆಗಳು ಆದಿಭಾಗದಲ್ಲಿ ಇಂಥಾ ಪಾಳಯಗಾರರಂತೆಯೇ ಸಾಧಾರಣವಾಗಿದ್ದಾಗ್ಯೂ, ಇವರ ಸಂತತಿಯಲ್ಲಿ ವಿಶೇಷವಾಗಿ ಶೂರರಾದವರೂ ದಳವಾಯಿ ದೇವರಾಜ್ಯ ನಂಜರಾಜೈಯ್ಯ ಮುಂತಾದವರೂ ಕೆಲವು ಪಾಳಯ ಪಟ್ಟುಗಳನ್ನು ಜೈಸಿ ರಾಜ್ಯವನ್ನು ವಿಸ್ತರಿಸುತ್ತಾ ಬಂದರು. ಈ ಮೈಸೂರ ಸೀಮೆಯಲ್ಲಿಯೂ ದಕ್ಷಿಣ ದೇಶದಲ್ಲಿಯೂ ಅತಿ ಪ್ರಬಲವಾಗಿದ್ದ ಪಾಳೆಯಪಟ್ಟುಗಳೆಂಬ ಸಂಸ್ಥೆಗೆ ಇನ್ನೊಂದು ದೊಡ್ಡ ವಿಷದಗಾಳಿ ಬೀಸಿತು. ದಳವಾಯಿ ದೇವರಾಜೈಯ್ಯ ನಂಜರಾಜೈಯ್ಯ ಇವರ ಆಶ್ರಯದಿಂದ ಮುಂದಕ್ಕೆ ಬಂದು ಹೆಚ್ಚಿನ ಪ್ರಾಬಲ್ಯವನ್ನು ಹೊಂದಿದ ಹೈದರಲ್ಲಿ ಖಾನನು ಈ ಪಾಳಯಪಟ್ಟುಗಳ ಮೇಲೆ ಬಿದ್ದು ಹಾವಳಿ ಮಾಡುತಾ ಬಂದನು. ಲೂಟಿಯಲ್ಲಿ ಸಿಕ್ಕಿದ ಹಣವೂ ಚಿನ್ನ ಬೆಳ್ಳಿಯೂ ಸ್ವಂತಕ್ಕಾಯಿತು. ಜೈಸಿಕೊಂಡ ಸೀಮೆ ದೇಶ ವಿಸ್ತಾರಕ್ಕಾಯಿತು.

ಮೈಸೂರ ದೊರೆಗಳು ಜೈಸಿದ ಪಾಳೆಯ ಪಟ್ಟುಗಳು

ಮೈಸೂರ ದೊರೆಗಳೂ ಹೈದರಲ್ಲಿ ಸಹಾ ಆಗಾಗ್ಯೆ ಜೈಸಿ ಶ್ರೀರಂಗಪಟ್ಟಣಕ್ಕೆ ಸೇರಿಸಿಕೊಂಡ ಪಾಳಯಪಟ್ಟಿನ ಸೀಮೆಗಳಲ್ಲಿ ಕೆಲವು ಮುಖ್ಯವಾದವುಗಳನ್ನು ಈ ಕೆಳಗೆ ಸೂಚಿಸಿದೇನೆ :

ದೊರೆಯ ಹಸರು : ಪಾಳಯಪಟ್ಟಿನ ಹೆಸರು

ಬೆಟ್ಟದ ಚಾಮರಾಜ ಒಡೆಯರು : ಶ್ರೀರಂಗಪಟ್ಟಣ
ಚಾಮರಾಜ ಒಡೆಯರು : ಚನ್ನಪಟ್ಟಣ
ಕಂಠೀರವ ನರಸರಾಜ ಒಡೆಯರು : ಅರಕಲಗೂಡು, ಬೆಟ್ಟದಪುರ, ಹೊಸೂರು
ದೊಡ್ಡದೇವರಾಜ ಒಡೆಯರು : ಚಿಕ್ಕನಾಯಕನಹಳ್ಳಿ, ಹುಲಿಯೂರುದುರ್ಗ, ಕುಣಿಗಲು, ಸಕ್ಕರೇಪಟ್ಟಣ
ಚಿಕ್ಕದೇವರಾಜ ಒಡೆಯರು : ಮದ್ದಗಿರಿ, ಮಿಡಿಗೇಸಿ
ಚಿಕ್ಕ ಕೃಷ್ಣರಾಜ ಒಡೆಯರು : ಕೈಲಂಚ, ದೇವನಹಳ್ಳಿ, ಕಣಮೆ ಕೆಳಗಿನ ರಾಜ್ಯ

ಹೈದರಲ್ಲಿ-ದೇವನಹಳ್ಳಿ, ಆನೆಕಲ್ಲು ಹರಪನಹಳ್ಳಿ, ಚಿತ್ರದುರ್ಗ, ಬಿದನೂರು, ಇಕ್ಕೇರಿ, ಧಾರಾಪುರ, ಬೆಳಗುತ್ತಿ, ಮಂಜರಾಬಾದು, ಕಡಪ, ಹಾಗಲವಾಡಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೊಚ್ಚಿ, ಪಾಲ ಘಾಟು, ಗುತ್ತಿ, ಸಿದ್ಧೌಟ, ಹಾವನೂರು, ಗುಡೇಕೋಟೆ, ಜರಿಮಲೆ, ತರೀಕೆರೆ, ರಾಯದುರ್ಗ, ನಿಡಗಲ್ಲು, ರತ್ನಗಿರಿ, ಸೀರ್‍ಯ, ಆನೆಗೊಂದಿ, ಸವಣೂರು ಮುಂತಾದವು.

ಟಿಪ್ಪುಸುಲ್ತಾನ – ಕೊಡಗು, ಗುಮ್ಮನಾಯಕನ ಪಾಳ್ಯ, ಅನಂತಪುರ, ಕೌಲೇದುರ್ಗ.

ಇವೇ ಮೊದಲಾದ ಪಾಳಯಪಟ್ಟುಗಳು ಜೈಸಲ್ಪಟ್ಟವು. ಅಲ್ಲಿನ ರಾಜರು ಅಥವಾ ಪಾಳಯಗಾರರನ್ನು ಕೈಸೆರೆ ಹಿಡಿದು ಶ್ರೀರಂಗ ಪಟ್ಟಣಕ್ಕೆ ತಂದು ಹಾಕಿಕೊಂಡರು.

ದಖನ್ನಿನ ಸ್ಥಿತಿ

ಹೈದರಾಬಾದ್ ಸರ್ಕಾರದವರು ಆ ಪ್ರಾಂತದಲ್ಲಿದ್ದ ಕೆಲವು ಮುಖಂಡರನ್ನು ಮುರಿದರು. ಬಹಮನಿ ರಾಜ್ಯವು ಪ್ರಬಲದಶೆಯಲ್ಲಿದ್ದಾಗ್ಯೆ, ಒಂದೊಂದು ಪ್ರದೇಶವನ್ನು ಒಬ್ಬೊಬ್ಬ ಸರದಾರನಿಗೆ ಕೊಟ್ಟು, ಅಂಥವರಿಂದ ಖಾಯಂ ಗುತ್ತಾ ಎಂಬದಾಗಿ ನಿಗದಿಯಾಗಿ ವಸೂಲ್ಮಾಡಿಕೊಳ್ಳುತಿದ್ದರು, ಮತ್ತು ಯುದ್ದ ಪ್ರಸಕ್ತಿ ಬಿದ್ದ ಕಾಲದಲ್ಲಿ ಅಂಥಾ ಮುಖಂಡರಿಂದ ದಂಡಿನ ಸಹಾಯವನ್ನು ಹೊಂದುತಿದ್ದರು. ಇಂಥಾ ಮುಖಂಡರಿಗೆ ಫೌಜುದಾರರು ಎಂತಲೂ ಹೆಸರಿತ್ತು. ಇವರಲ್ಲಿ ಕೆಲವರು ತಿರುಗಿಬಿದ್ದು ಸ್ವತಂತ್ರರಾಗುತಲೂ, ಇನ್ನು ಕೆಲವರು ಬಹಮನಿ ನವಾಬರ ವಿಚಾರದಲ್ಲಿ ವಿಧೇಯವಾಗಿ ನಡೆದುಕೊಳ್ಳುತ್ತಲೂ ಇದ್ದರು. ಆ ರಾಜ್ಯ, ಅದರಿಂದ ಹುಟ್ಟಿದ ಷಾಹಿ ಸಂಸ್ಥಾನಗಳೂ ನಾಶವಾದವು. ಮೊಗಲಾಯರ ಕಡೆ ಯಿಂದ ದಖನ್ ಸುಬೇದಾರಿಗೆ ನಿಜಾಮುಲ್ ಮುಲ್ಕನು ನೇಮಕವಾದನು. ಅವನ ಸಂತತಿಯವರು ಅಲ್ಲಿ ಆಳುತಾ ಇರುವಾಗ ತುಂಟರಾದ ಕೆಲವು ಫೌಜುದಾರರ ಸೀಮೆಯನ್ನೂ ಕಿತ್ತುಕೊಂಡು, ಸಭ್ಯರಾದವರನ್ನು ಅವರವರ ಸೀಮೆಯಲ್ಲಿ ಅಧಿಕಾರಮಾಡಿಕೊಂಡಿರಲೆಂದು ಬಿಟ್ಟಿದ್ದರು. ಈ ಪ್ರಕಾರ ಕೆಲವು ಹಂಗಾಮಿ ಪಾಳಯಪಟ್ಟಗಳಾಗಿದ್ದ ಫೌಜುದಾರಿ ಸೀಮೆಗಳು ಹೈದರಾಬಾದಿಗೆ ಸೇರಿಹೋದವು. ಅವುಗಳಲ್ಲಿ ಕೆಲವು ಚಿಕ್ಕ ಸಂಸ್ಥಾನಗಳು ಇನ್ನೂ ಉಳಿದುಕೊಂಡಿವೆ. ಅವುಗಳೇ ವನಪರ್ತಿ, ಗದ್ದ ವಾಲ, ಆತ್ಮಕೂರು ಮೊದಲಾದ ಕೆಲವು ಚಿಕ್ಕದೇಶೀಯ ರಾಜರ ಸಂಸ್ಥಾನಗಳು. ಇವುಗಳ ಜೊತೆಗೆ ಹೈದರಾಬಾದು ಸರ್ಕಾರದವರು ಕೆಲವು ಮುಸಲ್ಮಾನ್ ಉಂದಾಗಳಿಗೆ ಕೊಟ್ಟಿರುವ ಚಿಕ್ಕ ಸಂಸ್ಥಾನಗಳೂ ಜಹಗೀರುಗಳೂ ಸಹಾ ಇವೆ. ಈ ಚಿಕ್ಕ ಸಂಸ್ಥಾನೀಕರು ನಿಜಾಮನ ಸರ್ಕಾರಕ್ಕೆ ಅಧೀನರಾಗಿ ಆಳಿಕೊಂಡಿದ್ದಾರೆ. ಇವರಲ್ಲಿ ಕೆಲವರು ಸ್ವತಂತ್ರವಾಗಿ ನಾಣ್ಯವನ್ನು ಸಹಾ ಹಾಕಿಸಿ ಕೋರ್ಟು ಮೊದಲಾದ ನ್ಯಾಯಸ್ಥಾನಗಳನ್ನೂ ಏರ್ಪಡಿಸಿದ್ದಾರೆ. ಆದ್ದರಿಂದ ಪಾಳಯಗಾರರ ಸಂಸ್ಥೆಯು ಇನ್ನೂ ಹತಶೇಷವಾಗಿ ಅಲ್ಲಿ ಉಳಿದಿದ್ದಂತೆಯೇ ಆಯಿತು.

ಬ್ರಿಟಿಷರ ಸೀಮೆಯಲ್ಲಿ ಪಾಳ ಯಪಟ್ಟುಗಳು ಉಳಿದದ್ದು

ಬ್ರಿಟಿಷರ ಸೀಮೆಯಲ್ಲಿ ತುಂಟತನಮಾಡಿ ಸರ್ಕಾರಕ್ಕೆ ವಿರೋಧ ಕಕ್ಷಿಯವರಾಗಿ ನಿಂತವರ ರಾಜ್ಯವನ್ನು ಮಾತ್ರ ಇಂಡಿಯಾ ರಾಜ್ಯಕ್ಕೆ ಸೇರಿಸಿಕೊಂಡು ಬಿಟ್ಟರು. ಆದರೆ ಆ ಸರ್ಕಾರಕ್ಕೆ ವಿಧೇಯರಾಗಿದ್ದವರು ಅನೇಕರನ್ನು ಉಳಿಸಿದಾರೆ. ಬಂಗಾಳಾ ಮೊದಲಾದ ಉತ್ತರ ದೇಶದಲ್ಲಿ ಜಾಮೀನ್ದಾರರು ತಾಲ್ಲೋಕುದಾರರು ಜಹಗೀರ್‌ದಾರರು ಇತರ ಚಿಕ್ಕ ರಾಜವಾಡೆಯವರೂ ಇಂಗ್ಲೀಷರಿಗೆ ವಶವರ್ತಿಗಳಾಗಿ ಇನ್ನೂ ಇದಾರೆ. ಬೊಂಬಾಯಿ ಕೋರಿನ ಮರಾಟಾ ಜಹಗೀರ್‌ದಾರರು ಕಠಿಯಾವಾಡ ಜಹಗೀರ್‌ದಾರರು ಮೊದಲಾದವರೆಲ್ಲಾ ಇದೇ ವರ್ಗಕ್ಕೆ ಸೇರತಕ್ಕವರು. ಮದರಾಸಿನಲ್ಲಿ ತೆಲಗು ದೇಶದ ದೊರೆಗಳು ಚಿನ್ನ ಕಿಮಿಡಿ, ಪೆದ್ದ ಕಿಮಿಡಿ, ವಿಜಯನಗರ, ಇವೇ ಮೊದಲಾದವು, ಮದರಾಸಿಗೆ ದಕ್ಷಿಣ ಪ್ರಾಂತದಲ್ಲಿ ಶಿವಗಂಗೆ, ರಾಮನಾಡು, ಪುದಿಕೋಟೆ, ವೆಂಕಟಗಿರಿ ಇನ್ನೂ ಕೆಲವು ಮಿಟ್ಠಾ ದಾರಿಗಳು ಇವುಗಳೆಲ್ಲಾ ಉಳಿದೇ ಇವೆ.

ಮೈಸೂರು ಸೀಮೆಯಲ್ಲಿ ನಿರ್‍ಮೂಲವಾದ್ದು

ಇದೆಲ್ಲವನ್ನೂ ನೋಡಿದರೆ ಮೈಸೂರು ಸೀಮೆಯಲ್ಲಿ ಮಾತ್ರ ಹೈದರಲ್ಲಿ ಮೊದಲಾದವರ ಹಾವಳಿಯಿಂದ ಪಾಳಯಗಾರ ಸಂಸ್ಥೆಯು ಪೂರ್ತಿಯಾಗಿ ನಾಶವನ್ನು ಹೊಂದಿತೇ ಅಲ್ಲದೆ, ಹಿಂದುಸ್ಥಾನದ ಉಳಿದ ಎಲ್ಲಾ ಕಡೆಯಲ್ಲಿಯೂ ಇಂಥಾ ಚಿಕ್ಕ ಸಂಸ್ಥಾನಗಳು ಒಂದು ರೂಪದಲ್ಲಿ ಅಲ್ಲದಿದ್ದರೆ ಇನ್ನೊಂದು ರೂಪದಲ್ಲಿ ಕಾಲೋಚಿತವಾಗಿ ಉಳಿದೇ ಉಳದುಕೊಂಡವು ಎಂದು ಹೇಳಬೇಕು.
*****

ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನದ ಹುನ್ನಾರ
Next post ಗಿಳಿ ಮತ್ತು ಸೀತೆ

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…