ನಿನಗೆಂದು ಕವಿತೆಯನು ಬರೆದೆ
ಸರಿದ ಮಧು ಚಣದ ರಸ ಸುರಿದೆ

ನೀನು ಓದಬೇಕೆಂದು
ಓದಿ ತಿಳಿಯಬೇಕೆಂದು
ತಿಳಿದು ಉಳಿಸಬೇಕೆಂದು
ಉಳಿಸಿ ನಲ್ನುಡಿಯ ಕಳಿಸಬೇಕೆಂದು

ಮನಸಿನಲೆ ಬಗೆದು ಕೊರಗಿನಲಿ
ಮರೆಯಲಾಗದೆ ಬರೆದೆ

ಅದರೊಳಗೆ –
ನಮ್ಮೊಲವಿನ ಕಥೆ
ಸುಖದ ಸಗ್ಗದ ನಗೆ
ಭಾವ ತುಂಬಿದ ವ್ಯಥೆ…..

ಅನುಕಂಪ, ಅನುರಾಗ
ನಿನಗುಂಟೆಂದು
ಭಾವದುಸಿರಿನ ವೇಗ
ನಿನಗೆ ನಂಟೆಂದು

ಬರಿದೆ ಕಲ್ಪಿಸಿ ಬರೆದೆ….
ನಿನಗೆಂದು ಕವಿತೆಯನು ಬರೆದೆ….

ಪ್ರೇಮದ ಒಂದೆ ಮಿಡಿತ,
ನಿನ್ನ ನಾಮದ ಒಂದು ತುಡಿತ
ಅರಿಯದೆ, ಹಿತ-ಮಿತ
ಅರುಹಿದೆ….ಓ! ಎದೆಯಕ್ಷತ

ಅದರೊಳಗೆ –
ಹೇಳಲರಿಯದ ಬಯಕೆಯನು
ಆಳವರಿಯದ ಕೊರತೆಯನು
ಮೇಳವಿಸಿ ಬರೆದೆ…..
*****