ಯಸ್ ಯಸ್ ಯಲ್ಲವ್ವಾ ಡಿಸ್ ಮಿಸ್ ಕಲ್ಲವ್ವಾ
ಕಾಳವ್ವಾ ಧೂಳಪ್ಪಾ ಕೇಳವ್ವಾ ||ಪಲ್ಲ||

ಮಜಕಟ ಕಟಕಟ ಕಿವಿತುಂಬ ವಟವಟ
ಉಸ್ಸ್ ಉಸ್ಸ್ ಉಸ್ಸಾರ್‍ಗೋ ಕಿಸ್ಸ್ ಮಿಸ್ಸ್ ಹುಸಾರ್‍ಗೊ
ಹಾಳಕೆರಿ ಹಳೆದವ್ವಾ ಬಡಿತೋ ಬಡಿತೋ
ದೆವ್ವನ್ ಹೇಂತಿ ಹಳೆದವ್ವಾ ಹಡಿತೋ ಹಡಿತೋ ||೧||

ಏನ್ಪುರಿ ಕರಿಕರಿ ವರಿವರಿ ಹೇನೂರಿ
ಸರವಾತ್ನ್ಯಾಗ ಅರವತ್ಹಾವು ಬಂದಾವೋ ಬಂದಾವೋ
ಸುರಿಸುರಿ ಸುಂಬ್ಳಾಸುರಿ ಎರಿ‌ಎರಿ ನಾಯಿಯೆರಿ
ಪಾವ್ರೊಟ್ಟಿ ನೂರ್‍ನಾಯಿ ತಿಂದಾವೋ ತಿಂದಾವೋ ||೨||

ಹರಕ್‍ತಟ್ಟಿ ಎಣ್ಣಿಬುಟ್ಟಿ ವಡಕ್ಮಗಿ ಹೊಗಿಹೊಗಿ
ಸಾವ್ಕಾರ್‍ಹೊಟ್ಟಿ ಸುಡಗಾಡ್ಗಟ್ಟಿ, ಚೀರ್‍ಯಾವೋ ಚೀರ್‍ಯಾವೋ
ಗೌಡ್ತಿಮಲಿ ಕತ್ನಿ ಮಲಿ ಕಂಗಾಲಾಗಿ ನಲಿ ನಲಿ
ಗೌಡ ಮೀಸಿ ಗೊಬ್ರಗುಂಡಿ ಸುಟ್ಟಾವೋ ಸುಟ್ಟಾವೋ ||೩||

ಚಿಪ್ಪಾಡ್ಯಾಗ ಚಿತ್ತಾರ್ ರಾಜಾ ಸತ್ತಾನೊ ಸತ್ತಾನೊ
ಅತ್ತರ್‍ಬಾಟ್ಲಿ ಪಂಪಂಪಾಟ್ಲಿ ಅತ್ತಾವೋ ಅತ್ತಾವೋ
ಹುತ್ಹುತ್ನ್ಯಾಗ ಬ್ಹುಸ್ ಬ್ಹುಸ್ ಹಾವು ಎದ್ದಾವೊ ಎದ್ದಾವೊ
ರಾಣಿಗಂಡಾ ಗುಂಡಾರ್‌ಗುಂಡಾ ಹಡದಾನೋ ಹಡದಾನೋ ||೪||
*****