ಇದ್ದ ಬಿದ್ದ ಶಕ್ತಿಯನ್ನೆಲ್ಲಾ ಇಡಿಯಾಗಿಸಿ
ಕೊಂಡು ಹೊರಟೆ, ಉನ್ಮಾದ ತಡೆಯಲಾರದೇ
ಬಾಯಿ ತೆರೆದುಕೊಂಡೆ.
ಈಗ ಮೆಲ್ಲಲೇಬೇಕು ಕವಳ.
ಚಟ ಎಷ್ಟೆಂದರೂ ಚಟವೇ:
ಹುಡುಕಿದರೂ ಸಿಗಲಿಲ್ಲ ಸಂಚಿಯಲ್ಲಿ ನಾಲ್ಕಾಣೆ
ಹಂಗೆಲ್ಲ ಸಿಕ್ಕುವ ಸರಕಲ್ಲ.
ಎದುರಿಗೆ ಅದೇ ಹಳೆಯ ಶತ್ರು
ಹಲ್ಲುಗಿಂಜುತ್ತ
ಧನದ ಥಾಲಿ ಹಿಡಿದ ಕೋರೆದಂತಗಳ ಧನಿಕ.

ಹಂಬಲಿಸಿ ಲೇಪಿಸಿದ ಲಿಪಸ್ಟಿಕ್ಕು,
ಕ್ರೀಮು, ಮುಖಬಣ್ಣಗಳು
ಸೋತು ಸುಣ್ಣವಾಗಿವೆ.
ಒತ್ತಿ ಕುಳಿತುಕೊಳ್ಳಲಾಗದೇ ಶತ್ರುವಿನಂತೆ.
ಕಾಲನ ಕೈಯಲ್ಲಿ ಸಿಕ್ಕು ತರಗೆಲೆಗಳಂತೆ
ಮುದುಡಿ,
ತುಪ್ಪೆಯಾಗಿರುವ ಚರ್ಮದ
ಸುಕ್ಕು ನೋಡಿ ಮುಸಿ ಮುಸಿ ನಗುತ್ತ,
ಲೇವಡಿ ಮಾಡುತ್ತಿವೆ ಶತ್ರುವಿನಂತೆ

ಈಗಷ್ಟೇ ಬಿಚ್ಚಿಟ್ಟ ಬಳೆ ಮಂಗಮಾಯವಾದಂತೆ.
ಹುಡುಕಿ ಹುಡುಕಿ ಸಾಕಾಗಿ
ಪ್ರಾಯ ದಕ್ಕಿಸಿಕೊಟ್ಟ ಶತ್ರುವಿಗೆ ಹಿಡಿಶಾಪ ಹಾಕುತ್ತ
ಕೈ ನೋಡಿಕೊಂಡೆ.
ಅರೇ ಯಾವಾಗ ಕೈ ಸೇರಿತು,
ಮಂದಿ ಮಗಂದು?
ಜಿಗುಪ್ಸೆಯಾದರೂ ಚಿನ್ನಚಿನ್ನವೇ?
ಶತ್ರುವಾದರೇನು?

ಮೇಲಿನ ಕೇರಿ ಮಾಯಣ್ಣನ ಮಗಳು
ಮೈನೆರೆದಾಳಂತೆ. ದೇವರಿಗೆ ಬಿಡ್ತಾರಂತೆ.
ಅದಕ್ಕೆ ಬಳೆ ನೆನಪಾಯ್ತು.
“ಹೀರೇಕಿ ನೀನು, ನಿತ್ಯ ಸುಮಂಗಲಿ.
ಹರಸಿ ಹೋಗು ಬಾ.” ಎಂದಿದ್ದ.
ಯಾವ ಕಾಲದಲ್ಲಿದ್ದಾನೆ ಮಾಯಣ್ಣ.
ಕಾಲ ಯಾವುದಾದ್ರೇನೂ ಈಗೆಲ್ಲ
ಹೈಟೆಕ್ಕು ಕಾಲವಂತೆ.
ಹೊಸ ನಮೂನೆ ದಂಧೆಗಳು.

ಗೊನೆ ಕಡಿದ ಬಾಳೆಹಂಗೆ ಬದುಕು.
ಹರಕು ಚಾಪೆ ಹಂಗೆ ದೇಹ
ಆಗುತ್ತೆ ಅಂತ ಗೊತ್ತಿಲ್ಲೇನು?
ಕಟಕಟ ಹಲ್ಲುಕಡಿಯೋದ ಬಿಟ್ಟು
ಬೇರೇನೂ ಮಾಡೋಕಾಗಲ್ಲ.
ಹರಕು ಕಚ್ಚೆ ಧಣಿಗೂ
ಮೆಳ್ಳೆಗಣ್ಣ ಪೂಜಾರಿಗೂ ಬೆಂಕಿ ಹಾಕ.
ಅರೇ ಶತ್ರು ಅಂದ್ರೆ ಯಾರು?
ಈ ಕವಳದ ತಲುಬಿಗಿಷ್ಟು
ಹೊಗೆ ಹಾಕ. ತೂ.. ತೂ…
*****

ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)