ಅಧ್ಯಾಯ ೧೪ ಮೊಮ್ಮಗನ ಆಗಮನದ ಸಂಭ್ರಮ

ಆಶ್ರಮಕ್ಕೆ ಹೊಂದಿಕೊಂಡಂತೆ ಇದ್ದ ವೆಂಕಟೇಶರವರ ಮನೆ ಸುಣ್ಣ-ಬಣ್ಣ ಹೊಡೆಸಿಕೊಂಡು ಹೊಸದಾಗಿ ಕಾಣುತ್ತಿತ್ತು. ಆ ಮನೆಗೆ ಬಣ್ಣ ಹೊಡೆಸಿ ಅದೆಷ್ಟು ಕಾಲವಾಗಿತ್ತು. ಈಗ ಗಳಿಗೆ ಕೂಡಿಬಂದಿತ್ತು. ವೆಂಕಟೇಶ್ ಅಂತೂ ನವತರುಣನಂತೆ ಸಂಭ್ರಮಿಸುತ್ತಾ ಮನೆಯ ಒಳಗೂ-ಹೊರಗೂ ಓಡಾಡುತ್ತಿದ್ದರು. ಮನೆಯಲ್ಲಿದ್ದ ಹಳೆ-ಕೊಳೆ ಅಂತ ಎಷ್ಟೋ ವಸ್ತುಗಳನ್ನು ಹೊರಗೆ ತೆಗೆಸಿ, ಅದಕ್ಕೆ ಬದಲಾಗಿ ಹೊಸ ಸೋಫಾ ಸೆಟ್, ಹೊಸ ದಿವಾನ್, ಅದಕ್ಕೆ ಹೊಂದುವ ಕವರ್ ಇವೆಲ್ಲವನ್ನೂ ತಾವೇ ಖುದ್ದು ನಿಂತು ಹಾಕಿಸಿ ಸಂತೋಷಿಸುತ್ತಿದ್ದರು. ರೂಮುಗಳಲ್ಲಿದ್ದ ಹಳೆಯ ಮಂಚವನ್ನು ತೆಗೆಸಿ, ಈಗಿನ ಕಾಲಕ್ಕೆ ತಕ್ಕಂತಿದ್ದ ಹೊಸ ಮಂಚವನ್ನು ಹಾಕಿಸಿದರು. ಕಿಟಕಿಗಳಿಗೆಲ್ಲ ಬೇರೆ ಬೇರೆ ಕರ್ಟನ್ ಹಾಕಿಸಿದರು. ಈ ಎಲ್ಲಾ ಬದಲಾವಣೆಗಳಿಗೂ ಕಾರಣವಿತ್ತು. ಹೆಚ್ಚು-ಕಡಿಮೆ ಒಂಟಿಯಾಗಿಯೇ ಇರುತ್ತಿದ್ದ ವೆಂಕಟೇಶರವರು ಈ ಮನೆಯಲ್ಲಿ ಇರುತ್ತಿದ್ದುದೇ ಕಡಿಮೆ. ವಸು ಬದುಕಿರುವ ತನಕ ಈ ಮನೆ ಉಪಯೋಗಕ್ಕೆ ಬರುತ್ತಿದ್ದು, ವಸು ಸತ್ತ ಮೇಲೆ ಒಂಟಿತನದ ತಾಪದಿಂದ ಮನೆಗೇ ಬರುತ್ತಿರಲಿಲ್ಲ. ಆಶ್ರಮದಲ್ಲಿಯೇ ಊಟ-ತಿಂಡಿ ನಡೆದುಬಿಡುತ್ತಿತ್ತು. ರಾತ್ರಿ ಮಲಗುವಾಗ ಮಾತ್ರ ಮನೆ ನೆನಪಾಗಿ ಬರುತ್ತಿರುತ್ತಿದ್ದ ಈ ಮನೆಗೆ ಹಗಲೆಲ್ಲ ಬಾಗಿಲು ಹಾಕಿಯೇ ಇರುತ್ತಿದ್ದರು. ಆಶ್ರಮದ ಕೆಲಸದವಳೇ ದಿನಾ ಬಂದು ಗುಡಿಸಿ, ಒರೆಸಿ ಹೋಗುತ್ತಿದ್ದಳು. ಮನೆಯ ವ್ಯಾಮೋಹವೇ ಕಡಿಮೆ ಆಗಿದ್ದ ದಿನಗಳಲ್ಲಿ, ಮೊಮ್ಮಗ ಸೂರಜ್ ಬರುತ್ತಿದ್ದಾನೆ ಎಂದು ತಿಳಿದೊಡನೆ ಮನೆಯ ಮೇಲಿನ ಆಸಕ್ತಿ ಹೆಚ್ಚಾಗಿತ್ತು.

ಇಡೀ ಮನೆಯನ್ನು ಹೊಸ ಮನೆಯಂತೆ ಸಿಂಗರಿಸಿ, ಮೊಮ್ಮಗನ ಬರುವಿಕೆಗಾಗಿ ಕಾದು ಕುಳಿತ ವೆಂಕಟೇಶರವರಿಗೆ ಸಡಗರವೋ ಸಡಗರ. ಮಗ ವಿಕ್ರಮನಿಗಂತೂ ಈ ಊರು, ಈ ಆಶ್ರಮ, ಈ ಮನೆ ಎಲ್ಲವೂ ಆಸಕ್ತಿ ಕಳೆದುಕೊಂಡಿದ್ದವು. ದೆಹಲಿಯಲ್ಲಿಯೇ ತನ್ನ ಸರ್ವಿಸಿನ ಕೊನೆಯ ದಿನಗಳನ್ನು ಕಳೆಯುತ್ತಿದ್ದ ವಿಕ್ರಮನಿಗೂ ಆತನ ಹೆಂಡತಿಗೂ ದೆಹಲಿ ಬಿಟ್ಟು ಬರುವ ಮನಸ್ಸೇ ಇರಲಿಲ್ಲ.

ವಿಕ್ರಮನಿಗೆ ಮೊದಲಿನಿಂದಲೂ ಈ ಊರು ಅಷ್ಟಕ್ಕಷ್ಟೆ. ಅದಕ್ಕೆ ತಕ್ಕಂತೆ ವಿದ್ಯಾಭ್ಯಾಸ ಮುಗಿಸಿದೊಡನೆ ದೂರದ ದೆಹಲಿಯಲ್ಲಿ ಕೆಲಸ ಸಿಕ್ಕಾಗ ಹಿಗ್ಗಿ ಹೋಗಿದ್ದ. ತನ್ನೊಂದಿಗೆ ತಂದೆ-ತಾಯಿಯನ್ನು ಕರೆದುಕೊಂಡು ಹೋಗುವ ಮನಸ್ಸಿದ್ದರೂ ವಸು ಒಪ್ಪಿರಲಿಲ್ಲ. ತನ್ನವರು, ತಾನು ಹುಟ್ಟಿ, ಬೆಳೆದ ಈ ಊರು ಇವೆಲ್ಲವನ್ನೂ ಬಿಟ್ಟು ಬರಲು ಸಾಧ್ಯವೇ ಇಲ್ಲವೆಂದು ಬಿಟ್ಟಿದ್ದಳು. ವೆಂಕಟೇಶ್‌ಗೇನು ಈ ಊರು, ಆ ಊರು ಎಂಬ ಯಾವುದೇ ನಿಲುವು ಇಲ್ಲದೆ ಹೆಂಡತಿಗಾಗಿ ಇದೇ ಊರಿನಲ್ಲಿ ಉಳಿದಿದ್ದರು. ಹೆಂಡತಿ ಮಾವನನ್ನು ಕರೆತಂದಾಗ ಕೋಪಿಸಿಕೊಂಡು ಮಗನೊಂದಿಗೆ ದೆಹಲಿಯಲ್ಲಿ ಸ್ವಲ್ಪ ಕಾಲವಿದ್ದಾಗಲೂ ಹೆಂಡತಿಯ ನೆನಪು ಕಾಡುತ್ತಿತ್ತೇ ವಿನಾ ಈ ಊರಿನ, ಈ ಮನೆಯ ವ್ಯಾಮೋಹವೇನೂ ಕಾಡಿರಲಿಲ್ಲ. ಮಾವ ಸತ್ತ ಮೇಲೆ ಇಲ್ಲಿಯದನ್ನೆಲ್ಲ ಮಾರಿ, ಮಗನೊಂದಿಗೆ ಇದ್ದುಬಿಡುವ ಯೋಚನೆ ಇತ್ತು ವೆಂಕಟೇಶರವರಿಗೆ, ತಮಗಾದರೂ ಇನ್ನು ಯಾರಿದ್ದಾರೆ? ಇರುವ ಒಬ್ಬ ಮಗ, ಕೊನೆಗಾಲದಲ್ಲಿ ಮಗ-ಮೊಮ್ಮಗ ಅನ್ನುವ ವ್ಯಾಮೋಹ ಅಪಾರ. ಮಗನೊಂದಿಗೆ ಇದ್ದು ಬಿಡೋಣವೆಂದುಕೊಂಡಿದ್ದ ವೆಂಕಟೇಶ್‌ರವರಿಗೆ ವಸುವಿನ ನಿರ್ಧಾರ ಎಲ್ಲವನ್ನೂ ತಲೆಕೆಳಗು ಮಾಡಿತ್ತು.

ಪತ್ನಿಯನ್ನು ಬಿಟ್ಟಿರಲಾರದೆ, ಅವಳ ಎಲ್ಲಾ ಆಸೆಗಳಿಗೂ ಸ್ಪಂದಿಸಿ, ಈ ಆಶ್ರಮಕ್ಕೆ ಹೆಗಲು ಕೊಟ್ಟಿದ್ದರು. ವಸು ಸತ್ತ ಅನಂತರ ಹೋಗೋಣವೆಂದರೆ, ಆಶ್ರಮ ಇವರನ್ನು ಬಿಡಲಾರದಾಗಿತ್ತು. ವಸುವಿನ ಕೊನೆಯಾಸೆಯಂತೆ ತಾವೇ ನಿಂತು ಆಶ್ರಮದ ಜವಾಬ್ದಾರಿ ತೆಗೆದುಕೊಂಡು, ತಮ್ಮ ಕೊನೆ ಉಸಿರು ಇರುವತನಕ ಇಡೀ ಬದುಕನ್ನೇ ಮೀಸಲಾಗಿಟ್ಟಿದ್ದರು. ಮಗ ರಿಟೈರ್ಡ್ ಆದ ಮೇಲಾದರೂ ಇಲ್ಲಿಗೆ ಬಂದಾನು. ಈ ಆಶ್ರಮದ ಜವಾಬ್ದಾರಿಯನ್ನು ಅವನ ಕೈಗಿರಿಸಿ, ತಾವು ಹಾಯಾಗಿ ಕಣ್ಣುಮುಚ್ಚಬಹುದೆಂದು ಭಾವಿಸಿದ್ದರು. ಆದರೆ ಅವರ ನಿರೀಕ್ಷೆ ಸುಳ್ಳಾಗಿತ್ತು. ಈ ವಯಸ್ಸಿನಲ್ಲಿ ತಾವು ಅಲ್ಲಿಗೆ ಬಂದು ಆಶ್ರಮದ ಜವಾಬ್ದಾರಿ ಹೊರಲು ಅಸಾಧ್ಯವೆಂದೂ ಯಾರಿಗಾದರೂ ಅದನ್ನು ವಹಿಸಿ ಇಲ್ಲಿಗೆ ಬರಬೇಕೆಂದೂ ಮಗ ತಾಕೀತು ಮಾಡಿದಾಗ ನಿರಾಶೆಯಾಗಿತ್ತು. ಅವರಿಗೆ, ಹೆಂಡತಿ ಸಾಯುವಾಗ ಕೊನೆ ಉಸಿರಿರುವ ತನಕವೂ ಈ ಆಶ್ರಮದ ಕೈಬಿಡಲಾರೆನೆಂದು ಮಾತು ಕೊಟ್ಟಿರುವಾಗ, ಆ ಮಾತನ್ನು ತಪ್ಪಿಸಿ ಮಗ ಕರೆದನೆಂದು ಹೋಗಿಬಿಡುವುದು ಸರಿ ಅಲ್ಲವೆಂದುಕೊಂಡು ತಮ್ಮ ನೋವನ್ನು ತಾವೇ ತಿನ್ನುತ್ತ ಹಣೆಯಲ್ಲಿ ಬರೆದಂತಾಗಲಿ ಎಂದು ಸುಮ್ಮನಾಗಿಬಿಟ್ಟಿದ್ದರು. ತನ್ನ ಅನಂತರ ಯಾರು ಈ ಆಶ್ರಮವನ್ನು ನಡೆಸಿಕೊಂಡು ಹೋಗುವವರು ಎಂಬ ಚಿಂತೆ ಕಾಡುತ್ತಲೇ ಇತ್ತು. ಮೊಮ್ಮಗನ ಮೇಲೆ ಅಪಾರ ನಂಬಿಕೆ ಇತ್ತು. ಆದರೆ ಅಪ್ಪ-ಅಮ್ಮನನ್ನು ಬಿಟ್ಟು ಬಂದಿರಲು ಮೊಮ್ಮಗ ಒಪ್ಪಿಯಾನೇ ಎಂಬ ಸಂಶಯದಿಂದ ಆ ಆಸೆಯನ್ನು ಬಿಟ್ಟುಬಿಟ್ಟಿದ್ದರು.

ಆದರೀಗ ಸೂರಜ್ ತಾನು ಬರುತ್ತಿರುವುದಾಗಿ ತಿಳಿಸಿದ್ದ. ಅಪ್ಪ-ಅಮ್ಮ ಬಾರದಿದ್ದರೂ ತಾನು ಮಾತ್ರ ಇಲ್ಲಿಯೇ ತಾತನ ಜತೆ ಇರುವೆನೆಂದೂ ತಿಳಿಸಿದಾಗ ವೆಂಕಟೇಶನಿಗೆ ಹರೆಯ ಮರಳಿ ಬಂದಿತ್ತು. ಎಲ್ಲಾ ಅಜ್ಜಿಯ ಬುದ್ದಿಯೇ ಸೂರಜ್‌ಗೆ. ಎಲ್ಲವನ್ನೂ ಅವನಿಗೆ ಒಪ್ಪಿಸಿ ಇನ್ನು ತಾನು ನಿಶ್ಚಿಂತೆಯಿಂದ ಇದ್ದುಬಿಡಬೇಕು. ನೋಡೋಣ, ಅದೆಷ್ಟು ದಿನ ಇಲ್ಲಿ ಇರುವನು? ದೆಹಲಿಯಲ್ಲಿ ಹುಟ್ಟಿ, ಬೆಳೆದ ಸೂರಜ್‌ಗೆ ಈ ವಾತಾವರಣ ಒಗ್ಗಿ, ಇಲ್ಲಿಯೇ ಇರಲು ಸಾಧ್ಯವೇ? ಮಗ-ಸೊಸೆ ಇದಕ್ಕೆ ಒಪ್ಪಿಯಾರೇ? ಮಗ ದೂರ ಇರುವ ಸಂಕಟ ತಾವು ಸಹಿಸಿದ್ದು ಕಡಿಮೆಯೇ? ಆ ಸಂಕಟ ಮತ್ತೆ ಮಗನಿಗೆ ಬರುವುದು ಬೇಡ. ಉತ್ಸಾಹದಿಂದ ಬರುತ್ತಿದ್ದಾನೆ. ಆ ಉತ್ಸಾಹ ಬತ್ತದೇ ಇದ್ದರೆ ನೋಡೋಣ. ತಂದೆ-ಮಗನನ್ನು ತೊರೆಸುವ ಪಾಪ ತನಗೆ ಬೇಡವೇ ಬೇಡ. ಮೊಮ್ಮಗ ಬರುವ ಸಂತೋಷ ಒಂದು ಕಡೆ, ಆನಂತರದ ಯೋಚನೆ ಒಂದು ಕಡೆ. ಹೀಗೆ ಗೊಂದಲಮಯವಾದ ಮನಸ್ಸನ್ನು ತಹಬಂದಿಗೆ ತರುತ್ತ ಮೊಮ್ಮಗನ ಬರುವಿಕೆಗಾಗಿ ಇಡೀ ಮನೆಯನ್ನು ಸಿದ್ದಪಡಿಸಿದರು.

ತಮ್ಮ ಸಂಭ್ರಮವನ್ನು ಇಡೀ ಆಶ್ರಮದವರೊಂದಿಗೆ ಹಂಚಿಕೊಂಡ ವೆಂಕಟೇಶ್‌ರವರು ರಿತುವನ್ನು ಹುಡುಕಿಕೊಂಡು ಬಂದರು. “ರಿತು, ಒಂದು ಸಲ ಮನೆನಾ ನೋಡುವೆಯಂತೆ ಬಾರಮ್ಮ, ನಮ್ಮ ಸೂರಜ್ ಬರ್ತಾ ಇದ್ದಾನೆ ಗೊತ್ತಲ್ಪ ನಿಂಗೆ. ಅವನಿಗೆ ಒಂದು ಚೂರೂ ತೊಂದರೆ ಆಗಬಾರದು. ನನಗೆ ತಿಳಿದ ಹಾಗೆ ಮನೆನಾ ರೆಡಿ ಮಾಡಿಸಿದ್ದೇನೆ. ನೀನೊಂದು ಸಲ ನೋಡಿ ಬಿಡು” ಎನ್ನುತ್ತ ಬಲವಂತವಾಗಿ ಕರೆದೊಯ್ದರು.

ಇಡೀ ಮನೆ ನವವಧುವಿನಂತೆ ಸಿಂಗಾರಗೊಂಡಿತ್ತು. ಎಂದೋ ಒಂದೆರಡು ಬಾರಿ ಬಂದಿದ್ದ ರಿತು ಮನೆಯ ಅವ್ಯವಸ್ಥೆ ನೋಡಿ, ಸರಿಪಡಿಸಿ ಹೋಗಿದ್ದಳು. ಎಷ್ಟೇ ಸರಿಪಡಿಸಿದ್ದರೂ ಹೆಣ್ಣು ದಿಕ್ಕಿಲ್ಲದ ಮನೆ ಮತ್ತೆ ಅದೇ ಅವಸ್ತೆಗೆ ಮರಳುತ್ತಿತ್ತು. ಜತೆಗೆ ಈ ಮನೆಯ ಆವಶ್ಯಕತೆಯೇ ವೆಂಕಟೇಶ್‌ಗೆ ಹೆಚ್ಚಾಗಿರಲಿಲ್ಲ. ಮನೆ ಹೇಗಿದ್ದರೇನು ಎಂಬ ವೈರಾಗ್ಯ ಬೇರೆ, “ಅಯ್ಯೋ ಬಿಡಮ್ಮ, ಆ ಮನೆ ವ್ಯವಸ್ಥೆಯಾಗಿದ್ದುಕೊಂಡು ಯಾರಿಗೆ ಸುಖ ಕೊಡಬೇಕಾಗಿದೆ? ವಸು ಹೋದ ಮೇಲೆ ಎಲ್ಲವೂ ಅವಳ ಹಿಂದೆಯ ಹೋಗಿಬಿಟ್ಟಿತು. ಇರುವವನು ನಾನೊಬ್ಬ, ನನ್ನದೆಲ್ಲ ಇಲ್ಲಿಯೇ ಕಳೆದುಹೋಗುತ್ತದೆ. ಆ ಮನೆಯ ಕಡೆ ಗಮನಕೊಟ್ಟು ಏನಾಗಬೇಕು?” ಎಂದು ಉದಾಸೀನ ಮಾಡುತ್ತಿದ್ದ ವೆಂಕಟೇಶ್‌ರವರೇ ಇವರಾ ಎನ್ನುವಂತಾಗಿತ್ತು. ಇಡೀ ಮನೆಯ ಸ್ವರೂಪವೇ ಬದಲಾಗಿತ್ತು. ತಾನು ಬೇರೆ ಮನೆಗೇನಾದರೂ ಬಂದಿರುವೆನೇ ಎಂಬ ಭಾವನೆ ಕಾಡಿತು ರಿತುವಿಗೆ.

ಎಲ್ಲವೂ ವ್ಯವಸ್ಥಿತವಾಗಿ ಜೋಡಿಸಿಡಲಾಗಿತ್ತು. ಹಾಲ್‌ನಲ್ಲಿ ಸೋಫಾ ಸೆಟ್, ದಿವಾನ್ ಸೆಟ್, ಟೀಪಾಯಿ ಅಂದವಾಗಿ ಕುಳಿತಿತ್ತು. ಮೂಲೆಯಲ್ಲಿ ಹೊಸ ಟೀವಿ, ಪಕ್ಕದಲ್ಲಿಯೇ ಫೋನ್ ಸ್ಟಾಂಡ್, ಹಸುರಿನಿಂದ ನಳನಳಿಸುತ್ತಿರುವ ಗಿಡಗಳ ಕುಂಡಗಳು. ಮಧ್ಯದಲ್ಲಿ ಹಾಸಿರುವ ಕೆಂಪನೆಯ ಕಾರ್ಪೆಟ್, ಕಿಟಕಿ, ಬಾಗಿಲುಗಳನ್ನು ಅಲಂಕರಿಸಿರುವ ತಿಳಿ ಗುಲಾಬಿ ಬಣ್ಣದ ಪರದೆಗಳು, ವಾಹ್! ವೆಂಕಟೇಶ್‌ ಸರ್‌ರವರ ಟೇಸ್ಟ್ ಇಷ್ಟೊಂದು ಚೆನ್ನಾಗಿದೆಯೇ ಎನಿಸಿ ಮೆಚ್ಚುಗೆಯಿಂದ ಕಣ್ಣರಳಿಸಿದಳು.

“ಎಸ್ ಸಾರ್, ಇಂದು ಇಡೀ ಮನೇನೇ ಅರಮನೆಯಂತೆ ಕಂಗೊಳಿಸುತ್ತಾ ಇದೆ. ಜಾದೂ ಮಾಡಿಬಿಟ್ಟಿದ್ದೀರಾ! ಹೊಸ ಕಳೆ ಬಂದುಬಿಟ್ಟಿದೆ ಮನೆಗೆ, ನಿಮ್ಮ ಮೊಮ್ಮಗ ನಿಜವಾಗಿಯೂ ದಂಗುಬಡಿದು ಹೋಗುತ್ತಾರೆ ಮನೇನಾ ನೋಡಿ. ಅದ್ಸರಿ, ಹೀಗೆಲ್ಲ ಇನ್‌ಡೋರ್ ಡೆಕೋರೇಶನ್ ಮಾಡೋದನ್ನ ಎಲ್ಲಿಂದ ಕಲಿತುಕೊಂಡ್ರಿ?” ಆಶ್ಚರ್ಯ ವ್ಯಕ್ತಪಡಿಸುತ್ತ ಹೊಸ ಸೋಫಾದ ಮೇಲೆ ಕುಳಿತು ಅದರ ನಾವೀನ್ಯದ ಸವಿ, ಮೆತ್ತನೆಯ ಕುಶನ್ನಿನ ಮೃದು ಅನುಭವ ಕಚಗುಳಿ ಇಡಿಸಿದಂತಾಗಿ ಮೆಲ್ಲನೆ ನಕ್ಕಳು.

“ಎಲ್ಲಾ ನಿನ್ನ ಪ್ರಭಾವ ರಿತು. ನಿಂಗೆ ಸರ್‌ಪ್ರೈಸ್ ಕೊಡಬೇಕು ಅಂತಾನೇ ನಾನೇ ನಿಂತು ಎಲ್ಲಾ ಮಾಡಿಸಿದ್ದೇನೆ” ಎಂದರು.

“ನನ್ನ ಪ್ರಭಾವನಾ?” ಅಚ್ಚರಿಗೊಂಡಳು.

“ಈ ಸೋಫಾ ಸೆಟ್ ನೋಡು, ಯಾವ ಥರ ಇದೆ. ಆ ಡೋರ್ ಕರ್ಟನ್ಸ್ ನೋಡು ಯಾವ ಬಣ್ಣದ್ದು, ಈ ಕಾರ್ಪೆಟ್ ನೋಡು, ಎಲ್ಲಾ ಕಾಪಿ, ನಿಮ್ಮ ಮನೆಗೆ ಬಂದಿದ್ದೆನಲ್ಲ, ಆಗ ನಿಮ್ಮ ಮನೆಯಲ್ಲಿದ್ದ ಫರ್ನಿಚರ್ಸ್, ಕಾರ್ಪೆಟ್ ಮಧ್ಯೆ ಮಧ್ಯೆ ಇರಿಸಿದ ಹೂವಿನ ಕುಂಡಗಳು ಎಲ್ಲಾ ನಂಗೆ ಇಷ್ಟವಾಗಿತ್ತು. ಅದೆಲ್ಲವನ್ನೂ ನೀನೇ ಮಾಡಿದ್ದು ಅಂತ ನಿಮ್ಮ ಅಮ್ಮ ಹೇಳಿದ್ರು. ಅದೇ ಥರ ಇಲ್ಲೂ ಮಾಡಿದ್ರೆ ಚೆನ್ನಾಗಿರುತ್ತೆ ಅಂತ ಅದೇ ಥರ ತರಿಸಿ ಹಾಕಿದ್ದೇನೆ” ಎಂದಾಗ ಮತ್ತೊಮ್ಮೆ ಸುತ್ತಲೂ ಅವಲೋಕಿಸಿದಳು.

ಮನೆಯೊಳಗೆ ಬಂದಾಕ್ಷಣ ನಮ್ಮ ಮನೆಗೆ ಬಂದಿದ್ದೀನೇನೋ ಎಂದು ಆ ಗಳಿಗೆ ಅನ್ನಿಸಿದ್ದು ಇದಕ್ಕೇ ಇರಬೇಕು. ಅಂತೂ ವೆಂಕಟೇಶ್‌ ಸರ್‌ ಅವರು ಎಲ್ಲವನ್ನೂ ಗಮನಿಸುತ್ತಾರೆ ಎನಿಸಿ ಖುಷಿಯಾದಳು. ಪ್ರತಿಯೊಂದಕ್ಕೂ ತನ್ನ ಸಲಹೆ ಕೇಳುವ ಇವರು ಇದನ್ನು ಮಾತ್ರ ತಾವೇ ನಿಂತು ಮಾಡಿದ್ದಾರೆ ಅಂದರೆ, ತಮ್ಮ ಮೊಮ್ಮಗನ ಟೇಸ್ಟಿಗೆ ಮಾಡಿರಬಹುದೆಂದುಕೊಂಡದ್ದು ಸುಳ್ಳಾಗಿದೆ. ಇಲ್ಲೂ ತನ್ನದೇ ಅಭಿರುಚಿಗೆ ತಕ್ಕಂತೆ ನಡೆದಿದೆ. ಆದರೆ ಇದು ಅವರ ಮೊಮ್ಮಗನಿಗೆ ಇಷ್ಟವಾಗುತ್ತದೆಯೋ ಇಲ್ಲವೋ ಎಂದುಕೊಂಡರೂ ಬಾಯಿಬಿಟ್ಟು ಏನೂ ಹೇಳದೆ ಸುಮ್ಮನಾಗಿಬಿಟ್ಟಳು.

ಎಲ್ಲವನ್ನೂ ಒಮ್ಮೆ ಕಣ್ಣಾಡಿಸಿ, ‘ಸರಿಯಾಗಿದೆ, ಇನ್ನೇನಾದರೂ ಬದಲಾಯಿಸಬೇಕಾದರೆ ಅವರು ಬಂದು ಹೇಳಿದ ಮೇಲೆ ಚೇಂಜ್ ಮಾಡಿಕೊಂಡರಾಯಿತು ಬಿಡಿ’ ಎಂದು ಹೇಳಿದಳು. ಎಲ್ಲವೂ ಅಚ್ಚುಕಟ್ಟಾಗಿತ್ತು.

“ಸರ್, ಒಂದೇ ರೂಮನ್ನು ರೆಡಿಮಾಡಿದ್ದೀರಾ? ನಿಮ್ಮ ಮಗ ಮತ್ತು ಸೊಸೆಗೆ ಯಾವ ರೂಮ್ ರೆಡಿ ಮಾಡಿಸಿದ್ದೀರಾ?” ಎಂದಳು.

“ಮಗ-ಸೊಸೆ ಎಲ್ಲಮ್ಮ ಬರ್ತಾರೆ? ಈಗ ಬರ್ತಾ ಇರೋದು ಸೂರಜ್ ಒಬ್ಬನೇ. ಅವನೂ ಅದೆಷ್ಟು ದಿನ ಈ ಮುದುಕನ ಜತೆ ಇರ್ತಾನೋ ಏನೋ? ತಾತಂಗೆ ಬೇಸರವಾಗಬಾರದು ಅಂತ ಸೂರಜ್ ಬರ್ತಾ ಇದ್ದಾನೆ. ಅವನ ಅಪ್ಪಂಗಂತೂ ಈ ಮುದುಕ ಒಬ್ಬ ಈ ಭೂಮಿ ಮೇಲೆ ಇದ್ದಾನೆ ಅನ್ನೋದೆ ಮರೆತುಹೋಗಿದೆ. ಅವರಮ್ಮ ಸತ್ತಾಗ ಇಲ್ಲಿಗೆ ಬಂದದ್ದು, ಮತ್ತೆ ತಲೆ ಹಾಕಿಲ್ಲ. ನನ್ನ ಮೇಲೆ ಕೋಪ ಕಣಮ್ಮ ಅವನಿಗೆ” ಎಂದು ಮನದೊಳಗಿದ್ದ ನೋವನ್ನೆಲ್ಲ ಕಾರಿಕೊಂಡರು.

“ನಿಮ್ಮ ಮೇಲೆ ಕೋಪನಾ? ಯಾಕ್ ಸಾರ್ ? ನೀವೇನು ಅಂಥದ್ದು ಮಾಡಿದ್ದು?” ಅರ್ಥವಾಗದೇ ಪ್ರಶ್ನಿಸಿದಳು. ಇಂಥ ಮಹಾಮಹಿಮನ ಮೇಲೂ ಕೋಪವೇ? ಸ್ವಾರ್ಥ ಮರೆತು ನಿಸ್ವಾರ್ಥದಿಂದ ಈ ವಯಸ್ಸಿನಲ್ಲೂ ದುಡಿಯುತ್ತಿದ್ದಾರಲ್ಲ, ಅದೆಷ್ಟು ಹೆಮ್ಮೆ ಇರಬೇಕಿತ್ತು.

“ನಿನ್ನ ಆಲೋಚನೆ ನಂಗೆ ಅರ್ಥವಾಗುತ್ತೆ ರಿತು. ವಿಕ್ರಮ್ ಎಲ್ಲರಂಥಲ್ಲ. ಅವನಿಗೆ ತಾನು, ತನ್ನದು ಎಂಬ ಮೋಹ ಹೆಚ್ಚು. ಅವರಮ್ಮನ್ನ ತನ್ನ ಜತೆ ಕರ್ಕೊಂಡು ಸುಖವಾಗಿಟ್ಟುಕೊಳ್ಳಬೇಕು ಅನ್ನೋ ಆಸೆ ಇತ್ತು. ಅವರಜ್ಜನ ಕರ್ಕೊಂಡು ಬಂದ್ಲು ಅಂತ ವಸು ಮೇಲೆ ಸಿಕ್ಕಾಪಟ್ಟೆ ಕೋಪ ಮಾಡ್ಕೊಂಡಿದ್ದ. ನನ್ನ ತಲೆನೂ ಕೆಡಿಸಿ, ನನ್ನೂ ಅವನ ಜತೆ ಕರ್ಕೊಂಡು ಹೋಗಿದ್ದ. ಅಲ್ಲೇನೋ ಅವನು ನನ್ನ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ ಆ ಊರು, ಆ ಜನ ನನಗೇ ಹಿಡಿಸಲಿಲ್ಲ. ಆ ಚಳಿಯನ್ನ ನನ್ನಿಂದ ತಡೆಯೋಕೆ ಆಗುತ್ತಾ ಇರಲಿಲ್ಲ. ಅದೂ ಅಲ್ಲದೆ ಹೆಂಡತಿ ವ್ಯಾಮೋಹನೂ ಕಾಡ್ತಾ ಇತ್ತು. ವಸುನಾ ಬಿಟ್ಟಿರೋದು ನಂಗೆ ತುಂಬ ಕಷ್ಟವಾಗುತ್ತಾ ಇತ್ತು. ಅದೇ ಸಮಯಕ್ಕೆ ಮಾವ ತೀರಿಕೊಂಡರು. ಇಲ್ಲಿಯದ್ದನ್ನೆಲ್ಲ ಮಾರಿ ವಸು, ನಾನು ದೆಹಲಿಗೆ ಬಂದುಬಿಡಬೇಕು ಅಂತ ಒತ್ತಾಯ ಮಾಡ್ದ, ವಸು ಒಪ್ಪದೇ ಈ ಆಶ್ರಮ ಶುರು ಮಾಡಿದಳು. ವಸು ಸತ್ತಮೇಲಾದ್ರೂ ಒಬ್ರೆ ಯಾಕೆ ಒಂಟಿಯಾಗಿ, ಯಾರೂ ಇಲ್ಲದಂತೆ ಇರಬೇಕು? ವಯಸ್ಸಾದ ಮೇಲೆ ಮಗನ ಜತೆ ಇರೋದು ನಿಮ್ಮ ಧರ್ಮ ಅಂತ ಒತ್ತಡ ಹೇರ್‍ದ, ಆದರೆ ನಾನು ವಸುಗೆ ಮಾತು ಕೊಟ್ಟುಬಿಟ್ಟಿದೆ. ಹಾಗಾಗಿ ಅವನ ಜತೆ ಹೋಗೋಕೆ ನಾನು ಒಪ್ಪಲಿಲ್ಲ. ಈ ವಯಸ್ಸಿನಲ್ಲಿ ನಿಮಗ್ಯಾಕೆ ಈ ಸೇವೆ ಅಂತ ತುಂಬಾ ಕೋಪ ಅವನಿಗೆ. ನೀನೇ ಇಲ್ಲಿಗೆ ಬಂದುಬಿಡು. ನಾನು ಮಗನ ಜತೆ ಇದ್ದ ಹಾಗೂ ಆಗುತ್ತೆ. ನಿನಗೂ ಕೊನೆ ಆಸೆನೂ ಈಡೇರಿಸಿದಂತೆ ಆಗುತ್ತೆ ಅಂತ ಎಷ್ಟೋ ಹೇಳಿ ನೋಡಿದ. ಉಹೂಂ ಒಪ್ಪಲೇ ಇಲ್ಲ. ಅಪ್ಪನಿಗಾಗಿ ವಿಕ್ರಮನಿಗೆ ಇಲ್ಲಿ ಬಂದು ಇರೋಕೆ ಸಾಧ್ಯವಾಗಲಿಲ್ಲ. ಅಪ್ಪನ್ನ ನೋಡ್ಕೊತಿದೀನಿ ಅನ್ನೋ ನೆಮ್ಮದಿ ಸಿಗುತ್ತೆ. ನಿಮ್ಮ ಅಮ್ಮನ ಕೊನೆ ಆಸೆನೂ ಈಡೇರಿಸಿದಂತೆ ಆಗುತ್ತೆ’ ಅಂತ ಎಷ್ಟೋ ಹೇಳಿ ನೋದಿದೆ. ಊಹೂಂ, ಒಪ್ಪಲೇ ಇಲ್ಲ. ಅಪ್ಪನಿಗಾಗಿ ವಿಕ್ರಮನಿಗೆ ಇಲ್ಲಿ ಬ್ಂದು ಇರೋಕೆ ಸಾಧ್ಯವಾಗಲಿಲ್ಲ. ಯಾವುದೋ ಊರನ್ನ ತನ್ನ ಊರು ಅಂತಾನೇ ತಿಳ್ಕೊಂಡು ಬಿಟ್ಟಿದ್ದಾನೆ. ಅವನಿಗೆ ಗೊತ್ತಿಲ್ಲ ಅವನ ಬೇರು ಇಲ್ಲಿಯೇ ಇದೆ ಅಂತ. ಬೇರು ಇಲ್ಲದ ಮರ ಅವನು ಈಗ. ಇಲ್ಲಿಯೂ ಇರದೆ, ಅಲ್ಲಿಯೂ ಸಲ್ಲದೆ ಅತಂತ್ರನಾಗಿದ್ದಾನೆ. ಆ ನೋವು ಅವನಿಗೆ ಕಾಡ್ತಾ ಇದ್ರೂ ಸ್ವಾಭಿಮಾನ ಬಿಡೋಕೆ ಸಿದ್ಧ ಇಲ್ಲ. ಅಸತ್ಯನಾ ಸತ್ಯ ಅಂತ ಅಪ್ಪಿಕೊಂಡಿದ್ದಾನೆ. ಅವನ ಹಣೆಬರಹ. ಈಗ ಅವನ ಮಗನೇ ಬೇರುಗಳನ್ನ ಹುಡುಕಿಕೊಂಡು ಇಲ್ಲಿಗೆ ಬರ್ತಾ ಇದ್ದಾನೆ. ನಾನು ಇಲ್ಲಿ ಇದ್ದಿದ್ದರಿಂದ ತಾನೇ ಮಗ ತಮ್ಮನ್ನು ಬಿಟ್ಟು ಇಲ್ಲಿ ಬರ್ತಾ ಇರೋದು ಅನ್ನುವ ಕೋಪ ವಿಕ್ರಮನಿಗೆ, ಅಂದೇ ಅಲ್ಲಿಗೆ ಬಂದುಬಿಟ್ಟಿದ್ದರೆ ಸೂರಜ್‌ ಕೂಡ ಅಲ್ಲಿಯೇ ಇರುತ್ತಿದ್ದ. ಇಷ್ಟೊಂದು ಓದಿ, ಒಳ್ಳೆ ಕೆಲಸ ಸಿಕ್ತಾ ಇರುವಾಗ ಅದನ್ನೆಲ್ಲ ಬಿಟ್ಟು ತಾತನ ಹಾದಿ ಹಿಡೀತಾ ಇದ್ದಾನಲ್ಲ ಅನ್ನೋ ನೋವಿಗೆ ನನ್ನ ಮೇಲೆ ಸಿಟ್ಟು ಮಾಡ್ಕೊಂಡಿದ್ದಾನೆ.”

“ನೀವೇನೂ ಬಲವಂತವಾಗಿ ಕರೆಸಿಕೊಳ್ಳುತ್ತ ಇಲ್ಲ ಅಲ್ವಾ ಸರ್. ಅವರೇ ಇಷ್ಟಪಟ್ಟು ಬರ್ತಾ ಇರುವಾಗ ನಿಮ್ಮ ಮೇಲೇಕೆ ಅವರಿಗೆ ಕೋಪ? ನ್ಯಾಯವಾಗಿ ಅವರೇ ಇಲ್ಲಿಗೆ ಸ್ವಂತ ಬುದ್ದಿಯಿಂದ ಬರಬೇಕಾಗಿತ್ತು. ಇದುವರೆಗೂ ಕೆಲ್ಸ ಇತ್ತು. ರಿಟೈರ್ಡ್ ಆದ ಮೇಲೆ ಅಲ್ಲೇನು ಅವರಿಗೆ ವ್ಯಾಮೋಹ? ಸ್ವಂತ ಊರು, ಸ್ವಂತ ಜನ ಅನ್ನೊ ಮಮತೆ ಅವರಿಗೇ ಇರಬೇಕಿತ್ತು. ಅಮ್ಮನ ಕೊನೆಯಾಸೆಯಂತೆ ನಿಮ್ಮ ಮಗ ಇಲ್ಲಿಗೆ ಬಂದು ನೆಲೆಸಬೇಕಿತ್ತು. ಅವರು ಇಲ್ಲಿಗೆ ಬಂದು ಸೆಟ್ಲ್ ಆಗಿದ್ದರೆ ಅವರ ಅಮ್ಮನ ಆತ್ಮಕ್ಕೆ ಶಾಂತಿ ಸಿಗುತ್ತಿತ್ತು. ತಂದೆಯನ್ನು ಕೊನೆಗಾಲದಲ್ಲಿ ನೋಡಿಕೊಂಡ ಹಾಗೂ ಆಗುತ್ತಿತ್ತು. ಇಲ್ಲಿನ ವೃದ್ದರ ಸೇವೆ ಮಾಡುವ ಪುಣ್ಯವೂ ಲಭಿಸುತ್ತಿತ್ತು. ಹೋಗಲಿ ಬಿಡಿ ಸಾರ್, ಅವರಿಗೆ ಆ ಪುಣ್ಯ ಇಲ್ಲ. ನೀವೇನೂ ಆ ಬಗ್ಗೆ ಚಿಂತೆ ಮಾಡಬೇಡಿ. ದೇವರಿದ್ದಾನೆ ಅನ್ನೋ ಸಾಕ್ಷಿಗೆ, ನಿಮ್ಮ ಮೊಮ್ಮಗನಿಗಾದರೂ ಇಲ್ಲಿಗೆ ಬರುವ ಮನಸ್ಸು ಕೊಟ್ಟಿದ್ದಾನೆ. ಅದಕ್ಕಾದರೂ ನಾವು ಆ ದೈವಕ್ಕೆ ಋಣಿಯಾಗಿರಬೇಕು. ಇವತ್ತಲ್ಲ ನಾಳೆ ನಿಮ್ಮ ಮಗನಿಗೂ ಮಗನ ಸೆಳೆತ ಇಲ್ಲಿವರೆಗೂ ಕರೆತರಬಹುದು, ಆ ಭರವಸೆಯೇ ನಿಮಗೆ ಸಂಜೀವಿನಿಯಾಗಲಿ ಅಂತ ಆಶಿಸುತ್ತೇನೆ.”

ರಿತುವಿನ ಒಂದೊಂದು ಮಾತುಗಳು ಹೃದಯದಾಳಕ್ಕೆ ನೇರವಾಗಿ ಇಳಿದು ಅಲ್ಪ-ಸ್ವಲ್ಪ ಇದ್ದ ನೋವು, ನಿರಾಶೆ ಕೂಡ ಮಾಯವಾಗಿ ಬಿಟ್ಟಿತು. ಏನಿದೆ ಈ ಪುಟ್ಟ ಹುಡುಗಿಯಲ್ಲಿ ಅಂಥ ಶಕ್ತಿ? ತನ್ನ ಮಾತುಗಳಿಂದಲೇ ಇದಿರಿನವರ ನೋವನ್ನು ದೂರ ಮಾಡಿಬಿಡುತ್ತಾಳಲ್ಲ. ಇವಳ ಮಾತುಗಳನ್ನು ಕೇಳುವ ತನಕವೂ ಈ ಹೃದಯ ಕೊರಗಿ ಕೊರಗಿ ನರಳುತ್ತಾ ಇತ್ತಲ್ಲ. ಮಗ ಹೀಗೆ ಮಾಡಿಬಿಟ್ಟನಲ್ಲ. ಬರುತ್ತೇನೆ ಬರುತ್ತೇನೆ ಎಂದು ಆಸೆ ಹುಟ್ಟಿಸಿ, ಕೊನೆ ಗಳಿಗೆಯಲ್ಲಿ ಕೈಕೊಟ್ಟುಬಿಟ್ಟನಲ್ಲ ಅನ್ನೋ ನೋವು ‘ಗಾಯದ ಮೇಲೆ ಬರೆ’ ಎಳೆದಂತೆ ಕಾಡುತ್ತಿತ್ತು. ಸೂರಜ್ ಬರುತ್ತಿದ್ದಾನೆ ಎನ್ನುವ ಸಂತೋಷಕ್ಕಿಂತ, ಮಗ ಬಾರದೆ ಇರುವನಲ್ಲ ಎಂಬ ನೋವೇ ಹೆಚ್ಚಾಗಿತ್ತು. ಆ ನೋವನ್ನು ಒಂದೇ ಮಾತಿನಲ್ಲಿ ಕರಗಿಸಿಬಿಟ್ಟಳಲ್ಲ. ಹೌದು, ತಾನೆಂಥ ಪೆದ್ದ. ಮೊಮ್ಮಗನೇ ಬರುತ್ತಿರುವಾಗ ಮಗನಿಗಾಗಿ ಕಂಬನಿ ಸುರಿಸುವುದು ಸರಿಯೇ? ಸೂರಜ್‌ಗಿಂತ ತನಗಿನ್ನೇನು ಬೇಕು? ಹೇಗಾದರೂ ಮಾಡಿ ಅವನನ್ನು ಇಲ್ಲಿಯೇ ಉಳಿಸಿಕೊಳ್ಳುವ ಯತ್ನ ಮಾಡುವುದು ಬಿಟ್ಟು, ಸಿಗಲಾರದ ವಸ್ತುವಿಗಾಗಿ ಪರಿತಪಿಸುತ್ತ ಕೂರುವ ಹುಚ್ಚು ಯಾಕೆ? ಅಭಿಮಾನದಿಂದ ರಿತುವಿನೆಡೆ ನೋಡಿ, “ನೀನು ಹೇಳುತ್ತಾ ಇರುವುದು ಸರಿ ರಿತು. ಇನ್ನು ವಿಕ್ರಮ್ ಬಗ್ಗೆ ಯೋಚಿಸುವುದನ್ನು ಬಿಟ್ಟುಬಿಡುತ್ತೇನೆ. ಸೂರಜ್ ನನ್ನ ಹತ್ತಿರ ಇರುತ್ತಾನಲ್ಲ, ಅದೇ ಸಾಕು ನನಗೆ’ ನೆಮ್ಮದಿಯಿಂದ ಹೇಳಿದರು.
*****