ದಯಮಾಡೋ ರಂಗಾ||
ನಿನ್ನಡಿಗಳಿಗೆನ್ನ
ಹೃದಯ ಕಮಲವನಿಟ್ಟು
ಬರಮಾಡಿಕೊಳ್ಳುವೆ||
ತನುವೆಂಬಾ ಈ ಮನೆಯ ಶುದ್ಧಿಯಮಾಡಿ
ಮನವೆಂಬ ಮರ್ಕಟವ ಒಂದೆಡೆ ಕೂಡಿ|
ಧ್ಯಾನಿಪೆ ನಿನ್ನನು ಎನ್ನಂತರಂಗದಿ ಪೂಜಿಸಿ||
ಕರಕಮಲದಿಂದಲಿ ಹರಿಭಜನೆಯ ಮಾಡಿ
ಕಣ್ಣ ಕಂಬನಿಯಿಂದ ಮಾಲೆಯ ಮಾಡಿ|
ಅರ್ಪಿಸುವೆ ನಾ ನಿನಗೆ ಮಂತ್ರಮುಗ್ಧನಾಗಿ||
ಕರಿರಾಜಗೊಲಿದೆ, ಕನಕನಿಗೊಲಿದೆ
ಮಗು ಪ್ರಹ್ಲಾದಗೆ ನೀ ಕಂಬದಿಂದಿಳಿದೆ|
ನಿನ್ನಯ ವಿಸ್ಮಯವ ನಾನರಿಯಲಾರೆ||
*****
ಕವಿ, ಸಾಹಿತ್ಯ ಕೃಷಿಕ, ವೃತ್ತಿಯಲ್ಲಿ ಸಾಪ್ಟ್ವೇರ್ ಇಂಜಿನೀಯರ್ ಆಗಿ
ಅಮೋಘ ಸಾಧನೆ ಮಾಡಿರುವ ಆನಂದ ಹೆಬ್ಬಾಳು ಎಂದು ಗುರುತಿಸಿಕೊಂಡಿರುವ ಇವರ ಹೆಸರು ಆನಂದಾಚಾರ್.ಟಿ. ಇವರ ಕಾವ್ಯನಾಮ "ಜಾನಕಿತನಯಾನಂದ". ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅನೇಕ ಕವನಗಳನ್ನು ರಚಿಸಿ, ಸುಗಮಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಶ್ರೀಯುತ ಮೈಸೂರು ಅನಂತಸ್ವಾಮಿಯವರ ಸಲಹೆಯಂತೆ ಹೆಚ್ಚಿನ ವಿದ್ಯಾಭ್ಯಾಸಮಾಡಿ, ಜೀವನ ತರಂಗಗಳು, ಮಂಥನ, ಚಕ್ಷು ಹಾಗು ಅಕ್ಷಯ ಎಂಬ ಕವನ ಸಂಕಲನ ರಚಿಸಿದ್ದಾರೆ.