ಅನುಕರುಣೆಯೆಂಬ
ಬಿಸಿಲಗುದುರೆಯನೇರಿ |
ಸಮಯದಿಂದೆ ಓಡುತಿರುವ
ಅಲ್ಪ ಬುದ್ದಿಮತಿಗಳೇ|
ಜೀವನದ ಮೌಲ್ಯಮರೆತಿರಿ
ಅದನೇ ನಿಮ್ಮ ಮಕ್ಕಳಿಗೂ ಕಲಿಸಿ
ಮುಂದೆಂದು ಕೊರಗದಿರಿ||

ಹೊಟ್ಟೆಹೊರೆವ ವಿದ್ಯೆ ಕಲಿತು
ಜೀವನದ ವಿದ್ಯೆ ಮರೆತು|
ಹಣದ ಹುಚ್ಚು ಹೆಚ್ಚಿ
ಹೆಚ್ಚೆಚ್ಚುಗಳಿಸ ಬಯಸಿ|
ಆನ್ನ ನಿದ್ರಾದಿಗಳ ತ್ಯಜಿಸಿ
ದುಡಿದು ಏನನು ಸಾಧಿಸುವಿರಿ? |
ಸಮಾಧಾನ ವಿರದ
ಜೀವನವನೇಕೆ ನಡೆಸುವಿರಿ|
ಮಾನವೀಯತೆ, ಬಂಧು ಬಳಗವಿಲ್ಲದ
ಸಮಾಜವನೇಕೆ ಸೃಷ್ಟಿಸುವಿರಿ||

ತಿನ್ನುವುದು ಹಿಡಿ ಅನ್ನ
ಉಡುವುದು ಗೇಣು ಬಟ್ಟೆ|
ಬದುಕುವುದು ಕೆಲವೇದಿನ
ಸಾವು ವಾರದಲ್ಲೊಂದು ದಿನ
ಆದರೂ ಅದೇತಕೆ ಅತೃಪ್ತಿ
ಎಲ್ಲಾ ನನಗೇ ಬೇಕೆಂಬ ದುರಾಸೆಬುದ್ಧಿ||

ಎಣ್ಣೆ ಹಚ್ಚಿ ಮಣ್ಣಲಿ ಉರುಳಿದರೆ
ಹೆಚ್ಚೇನು ಲಾಭವಿರದು|
ಬದುಕಿ, ಬದುಕಲು ಬಿಡಿ
ಎಂದಿದೆ ಸುಧರ್ಮ|
ಕಾಲನ ಗೆಲ್ಲುವೆನೆಂದರೆ
ಅದು ನಿನ್ನ ಕರ್ಮ |
ಜೀರ್ಣಿಸುವಷ್ಟು ಉಣಿಸಿ
ದಕ್ಕುವಷ್ಟು ಗಳಿಸಿ
ಮಕ್ಕಳಿಗೆ ಕಷ್ಟಪಟ್ಟು
ದುಡಿದು ಬದುಕುವುದ ಕಲಿಸಿ||
*****

ಜಾನಕಿತನಯಾನಂದ
Latest posts by ಜಾನಕಿತನಯಾನಂದ (see all)