ಎಚ್ಚರಿಸುತ್ತಿರು ನೀನು ಎನ್ನಂತರಾತ್ಮವೇ
ನಾ ಎಡವುವಲ್ಲಿ, ನಡೆಯುವಾಗ ಹೆಜ್ಜೆ ತಪ್ಪಿದಲ್ಲಿ|
ಅನ್ಯರ ಅಂತರಂಗ ಅರಿಯದೆ ಅವರ ಪ್ರಶ್ನಿಸುವಲ್ಲಿ
ಅವರ ಆಳವ ತಿಳಿಯದೆ
ಮೂರ್ಖತನದಿ ಅಳೆಯುವಲ್ಲಿ||

ಧೈರ್ಯ ತುಂಬುತ್ತಿರು
ನೀನು ನಾ ಅಧೈರ್ಯನಾಗಿ ನಿಂತಲ್ಲಿ|
ದಾರಿ ತೋರುತಿರು ನೀನು
ನಾ ದಾರಿ ತಪ್ಪಿದಲ್ಲಿ|
ತುಂಬುವಿಶ್ವಾಸ ನೀ ತುಂಬುತಿರು
ನಾ ಸೋತು ಕೂತಲ್ಲಿ||

ಕಷ್ಟಗಳ ಗೆಲ್ಲುವ ಶಕ್ತಿಯ ಕೊಡು
ವಿಧಿಕಷ್ಟಗಳ ಸರಣಿ ಬಂದಲ್ಲಿ|
ಬುದ್ಧಿ ವಿಚಾರವ ಕೊಡು ನನ್ನ
ಬುದ್ಧಿ ಮತಿ ಶೂನ್ಯವಾದಲ್ಲಿ|
ಶಿಕ್ಷಿಸು ನಾ ನಿನ್ನ ಮಾತನ್ನೇ
ಕೇಳದಾದ ಪಕ್ಷದಲ್ಲಿ||

ದಯೆತೋರು ನೀ
ಬದುಕು ಬೇಡವೆನಿಸಿದಲ್ಲಿ|
ಅನ್ಯ ಜೀವಿಗಳಿಗೆ ಹೋಲಿಸಿ
ಮಾನವ ಜನ್ಮದ ಮಹಿಮೆಯ ತಿಳಿಸು,
ಮಾನವ ಧರ್ಮವ ಕಲಿಸು|
ಆತ್ಮಹತ್ಯೆಯ ಪಾಪ ಕೃತ್ಯದ
ಕರ್ಮವನು ತಿಳಿಸೇಳು||
*****

ಜಾನಕಿತನಯಾನಂದ
Latest posts by ಜಾನಕಿತನಯಾನಂದ (see all)