ಬರಿ ಗಂಗೆ ಗೌರೀಶಂಕರ
ರಾವಣಾಸುರ ಮಥನ ದಿವ್ಯನಡತೆಯ ಕಥನ
ಹಗಲಲ್ಲಿ
ಹತ್ತು ಜನರೆದುರಲ್ಲಿ
ಸತ್ತರೂ ನಿಲ್ಲುವ ಶಾಸನದಲ್ಲಿ;
ಕೊಳೆವ ಗದ್ದಲದ ವಠಾರ
ನಿಂತ ನೀರ ಗಬ್ಬುಗಟಾರ
ಬಾಗಿದವನ ಬೆನ್ನ ಕುತಾರ
ಹಿತ್ತಿಲಲ್ಲಿ
ಗುಪ್ತಚಾರರ ಜೊತೆ ಕತ್ತಲಲ್ಲಿ
ಗಾಳಿ ಹಾರಿಸಿಬಿಡುವ ಮಾತಿನಲ್ಲಿ
ಕೈಹಿಡಿದ ಬರೆಹಕ್ಕೆ ಕಣುತಪ್ಪಿಸಿ ಇವರ
ನಾಲಿಗೆಯ ಹೆರಿಗೆ.
ನ್ಯಾಯ ಒಪ್ಪಿಸಿ ಎಂದು ಕೇಳುವಂತಿಲ್ಲ,
ದಾಖಲೆ ಸುಟ್ಬು ಕೋರ್ಟಿನ ಕಣ್ಣು ತಪ್ಪಿಸುವ ಜೋಕೆ
ಬೇಕಾದಷ್ಟಿದೆ ಈ ಮಳ್ಳರಿಗೆ.

ಯಾವುದರ ದರಕಾರ ಹೊಣೆ ಹೊರೆ ಇರದ ಧಣಿಗೆ?
ಮಾತಿಗೆ ತೊಡಗಿದರೆ ಕೂತವರಿಗೆ ಕಾಣದೆ
ಹಿಗ್ಗತೊಡಗುತ್ತದೆ ಸುತ್ತಲ ಬೇಲಿ
ಬೆಚ್ಚಗಾಗುತ್ತದೆ ಕೈ ಬೆಚ್ಚಗಾಗುತ್ತದೆ ಎದೆ
ಸ್ವಿಚ್ಚು ಒತ್ತಿ ಬಿಡುತ್ತದೆ ನಾಲಿಗೆ, ಕೂಡಲೆ
ಮುಳ್ಳು ಸುರಿಸತೊಡಗುತ್ತದೆ ನಿಂತ ನೆಲಕ್ಕೆ ಜಾಲಿ.
ಆಡುತ್ತ ಆಡುತ್ತ ಮೂಡಿನಲ್ಲಿ ಮಾತು ಕೊಂಕುತ್ತದೆ
ಕೊಂಕುತ್ತ ಕೊಂಕುತ್ತ ಯಾವುದೊ ತಿರುವಿನಲ್ಲಿ ಬೊಂಕುತ್ತದೆ.

ಆಡಿದ್ದೆಲ್ಲ ಹಾಡಾಗಿ
ಹಾಡಿಗೆ ಹಾವು ಹೆಡೆತೂಗಿ
ಗೆದ್ದಿಲ ಸದ್ದಿಲ್ಲದೆ ಕಲೆ ಯಮದೂತನ ಬೀಡಾಗುತ್ತದೆ.
ಅರವತ್ತರ ಎಚ್ಚರಕ್ಕೆ
ಇಪ್ಪತ್ತರ ಪರವಶತೆ
ಸರಿಬೆಸ ಕೇಳುತ್ತದೆ
ರೂಪ ರುಚಿ ರಸದಲ್ಲಿ ಸತ್ಯ ಸಾಯುತ್ತದೆ.

ಬೆತ್ತಲೆ ಬುದ್ಧಿಗೆ ಮಾರಕ ಹಿತ್ತಾಳೆ ಕಿವಿ
ಆಗ ತತ್ವಕ್ಕೆ ಮುತ್ತಿಡುತ್ತದೆ ತುಟಿ, ಮನಸ್ಸು ಶುದ್ಧ ಭವಿ,
ಮುತ್ತೈದೆ ನಾಲಿಗೆಮುಡಿಗೆ
ಸೂಳೆ ಮನಸ್ಸಿನ ತೊಡೆಗೆ
ನಿತ್ಯ ನಿತ್ಯ ನಡೆಯುತ್ತದೆ ಭಾರಿ ಹಣಾಹಣಿ
ಎಲ್ಲ ಒಳಗೊಳಗೆ.
ಬೆರಳು ಚೀಪುವ ‘ಘ’ಗಳೆದುರಿಗೆ
ನೀರಿಗೆ ಬಿದ್ದ ಎಣ್ಣೆಹನಿ,
ಎಲ್ಲ ಅಪ್ಪಿಯೂ ಎಲ್ಲೂ ತಪ್ಪದ
‘ಪದ್ಮಪತ್ರಮಿವಾಂಭಸ’ರ ದನಿ

ಇವರ ಕೋರೆಮಾತಿನ ಹಾರೆಯೇಟಿಗೆ
ಮುರಿದು ಬೀಳದೆ ಮನೆ
ಮುರಿದು ಬೀಳದೆ ಕೊನೆ
ಸುರಿದು ಹೋಗದೆ ತೊಟ್ಟುಮುರಿದು
ಕಾಯ ಬಾಯಿಂದ ಹಾಲು ಸೊನೆ?
ಬಿದ್ದ ಕೊನೆಯಲ್ಲಿ ಬಾಡುಮೈಯಾಗಿ
ಹಾಡದೆ ಸಂಧ್ಯಾರಾಗವ ಇನ್ನೂ
ಮಧ್ಯಾಹ್ನದ ಅರೆಬಿರಿದ ಮೊಗ್ಗುನನೆ?

ಚಟಕ್ಕೆ ಮಾತು ಹುಟ್ಟಿಸಿ ಹಟಕ್ಕೆ ಸಾಕುವುದ?
ರಂಗಿನ ಅಂಗಿ ತೊಡಿಸಿ ಸಿಂಗರಿಸಿ ಮರೆಸುವುದ?
ಹಣ್ಣಿನ ಬಳ್ಳಿಯ ಮೇಲೆ ಮಿಣ್ಣಗೆ ಮುಳ್ಳು ಹಬ್ಬಿಸಿ
ಸುಳ್ಳೇ ಅದರ ಬಾಳಿಗೆ ಎಳ್ಳು ನೀರು ಬಿಡುವುದ?

ಸದಾ ಇದೊಂದೆ ಬೆರಗು ನನಗೆ
ಬೆರಗಿನೊಡನೆ ಕೊರಗು ಮರೆಗೆ
ಹೇಗೆ ತಿಳಿದೇನು ಇವರ ಮಾತಿನ
ತಳಾತಳದ ಸುಳಿಯ?
ಹೇಗೆ ಹೊಡೆದೇನು ಇವರ ನಾಲಿಗೆ ಹಾವು ನುಗ್ಗಿದ
ಮನೆ ಬಿಲಕ್ಕೆ ಬೆಣೆಯ?
ಹಿಡಿದೇನು ಹೇಗೆ ಪೊದೆ ಮರೆಯಲ್ಲಿ ಅಡಗಿದ
ಪಳಗಿದ ನರಿಯ
ಈ ನಾಟಕಕಾರರ ಕೃಷ್ಣವೇಷದ ನಿಜವ
ತಿಳಿವೆನೆಂದರೆ ಅವನ
ಕುಚೇಲರಷ್ಟೆ ಬಲ್ಲರು ಗೆಳೆಯ.
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)