ಕಡೆಕಂಜಿ

ತುಳುವ ನಾಡೊಳು ಹೊಳಲು ಮೆರೆವುದು | ಹಳೆಯ ಕಾರ್ಕಳ ಎಂಬುದು;||
ಕೊಳವು ಕುಂಟೆಯು ಪೈರುಪಚ್ಚೆಯು | ತಳೆದ ಮನೆ ಅಲ್ಲಿದ್ದವು. ||೧||

ಅರಸು ಒಂದಿನ ತಿರುಗುತಿರೆ, ಅ | ಚ್ಚರಿಯ ಒಂದನು ಕಂಡನು- ||
ಮರುಕ ತೋರುವ, ಕರೆದು ಚೀರುವ ! ಬಿರುಮ ಸೆಟ್ಟಿಯ ಕಂಡನು- ||೨||

ಕಂದು ಮೋರೆಯ, ನಾಂದ ಕಣ್ಣಿನ, | ಮಿಂದ ಕೆನ್ನೆಯ ಮಸುಕಿನಾ, ||
ಬೆಂದು ಹೊರಡುವ ಮೂಗುಸುಯ್ಲಿನ | ನೊಂದು ನೋಯುವ ಸೆಟ್ಟಿಯಾ. ||೩||

ದಿಟ್ಟ ಕೈಯಲಿ ಪುಟ್ಟ ಕರುವನು | ಕಟ್ಟಿಕೊಂಡಿಹ ಸೆಟ್ಟಿಯು ||
“ಕೆಟ್ಟೆನಯ್ಯೋ! ಕೆಟ್ಟೆನಯ್ಯೋ! | ಕೆಟ್ಟೆ!” ಎಂದಳುತಿದ್ದನು. ||೪||

ದೊರೆಯ ಕಂಡನು, ನಾಚಿಕೊಂಡನು; | ಬಿರುಮ ಅರಿಯನು ದೊರೆಯನು; ||
ಇರದೆ ನಡೆದನು, ಮೆಲ್ಲ ನುಡಿದನು; | ಒರಸಿಕೊಂಡನು ಕಣ್ಣನು. ||೫||

“ಏನು ಸೆಟ್ಟಿಯೆ? ಹೇಗೆ ಕೆಟ್ಟೆಯೆ? | ಏನು ನೀರಿದು ಕಣ್ಣಲಿ? ||
ಏನು ಬೇಸರು? ಏತಕೀ ಕರು? ಏನು? ಹೇಳ್‌! ಹೇಳ್‌!” ಎಂದನು. ||೬||

“ನನ್ನ ಬಾಳುವೆ ಏನು ಹೇಳುವೆ | ನನ್ನ ಹಣೆಯಲಿ ಬರೆದುದಾ? ||
ಚೆನ್ನ ಕರುವಿಗೆ ಬನ್ನಬಡುವೆನು | ಕಣ್ಣನೀರನು ಮಿಡಿವೆನು.” ||೭||

“ಹಿಂಡಿ ಹುಲ್ಲನು ತಿಂಡಿ ಕಾಳನು | ಉಂಡು ಬೆಳೆದೀ ಕರುವಿದು ||
ಗಂಡು ಅಲ್ಲವು ಕೊಂಡು ಬಂದೆನು. ಹಿಂಡಿನಲಿ ಕಡೆಕಂಜಿಯು.” ||೮||

“ಮಕ್ಕಳಿಲ್ಲದ ಮಡದಿ ಇಲ್ಲದ | ಚಿಕ್ಕತನದಲಿ, ಹಿಂದಕೆ ||
ರೊಕ್ಕ ಎರಡು ವರಹ ಕೊಟ್ಟು, | ಅಕ್ಕರೆಯ ಕರು ಸಾಕಿದೆ.” ||೯||

“ಗಬ್ಬವಾಯಿತು, ಅಬ್ಬೆಯಾಯಿತು, ಹಬ್ಬವಾಯಿತು ಹಾಲಿನಾ. ||
ಒಬ್ಬಳನು ನಾ ಮದುವೆಯಾದೆನು, | ಇಬ್ಬರಿದ್ದೆವು ಸುಖದಲಿ.” ||೧೦||

“ಒಡಕು ಕೊಟ್ಟಿಗೆ ಹಿಡಿಯಲಾರದು, | ನಡೆಗಳಿಪ್ಪತ್ತಾದವು. ||
ಮಡದಿಮಕ್ಕಳ ಹಡೆದು, ಸೌಖ್ಯವು | ಬಿಡದೆ ಬೆಳೆಯಿತು ಮನೆಯಲಿ.” ||೧೧||

“ಮೂಡು ಬೈಲನು ಮಾಡಿಕೊಂಡೆನು;| ಜೋಡು ಎತ್ತನು ಕಟ್ಟಿದೆ; ||
ಓಡು ಹೊಚ್ಚಿದೆ ಮಾಡು ಹುಲ್ಲಿಗೆ; | ಜೋಡು ಹಾಕಿದೆ ಕಾಲಿಗೆ.” ||೧೨||

ಏನು ಹೇಳಲಿ? ಬಾನಿನ ಹಸು | ತಾನೆ ಬಂದಂತಾಯಿತು.||
ಸ್ಥಾನ ಸ್ಥಾನದಿ ನಮಗೆ ಮದಿಪು | ಮಾನ ಕೊಟ್ಟರು ಚೌಟರು.” ||೧೩||

“ಒಡಕು ಹಣೆಯಿದು; ಕೆಡುಕು ಗ್ರಹವಿದು; | ಕುಡುಕತನದಾ ಫಲವಿದು.”
ಒಡನೆ ಸುಯ್ಯುತ ಹಣೆಯ ಬಡೆಯುತ | ನುಡಿದ ಮುಂದಕೆ ಸೆಟ್ಟಿಯು- ||೧೪||

“ಸಾಲವಾಯಿತು, ಸೋಲವಾಯಿತು. | ಶಾಲು ಸೀರೆಯ ಮಾರಿದೆ, ||
ಬೈಲು ಬಿಟ್ಟೆನು, ತೋಟ ಕೊಟ್ಟೆನು. | ಮೂಲೆಕಸದಂತಾದೆನು.” ||೧೫||

“ಮನೆಯು ಮಾನ್ಯವು, ಧನವು ಧಾನ್ಯವು | ಕನಸು ಕಂಡಂತಾಯಿತು. ||
ಇನಿಸು ಭಾಗ್ಯವು ಮಳೆಯ ನೀರಿನ | ಹೊನಲ ನರೆಯಂತಾಯಿತು. ||೧೬||

“ಹಾಳು ಕಾಲವು! ಕೂಳು ದೊರೆಯದು. | ಏಳು ಮಕ್ಕಳು ಸೆರಗಿಗೆ! ||
ಕಾಳುಕಡ್ಡಿಯ ತಿಂದ ದನಗಳ | ಕೂಳಿಗೋಸುಗ ಮಾರಲೇನ್?” ||೧೭||

“ನಾಡು ಸೇರಿದೆ ಬೇಡಲೋಸುಗ. | ನೋಡಿ ನನ್ನನು ಹಳಿದರು- ||
“ಮೂಡು ಬೈಲಿನ ಬಿರುಮ ಸೆಟ್ಟಿಯು | ಬೇಡುವನು ಬಲು ನಾಚಿಕೆ.” ||೧೮||

“ಕೆಲಸ ಮಾಡಲು ಮಾರಿ ಇವನಿಗೆ!! ಬಲುಹು ಮೈಯಲ್ಲಿ ತುಂಬಿದೆ! ||
ಹಲವು ಕಾಲ್ನಡೆ ಇವನಿಗೆ | ಸುಲಿದು ತಿನ್ನಲು ಬಂದಿಹ.” ||೧೯||

“ಎಂದು ಮೊನೆನಗೆಯಿಂದ ಆಡಿದ | ಮಂದಿ ಮಾತನು ಮನ್ನಿಸಿ, ||
ಕಂದರಂತಿಹ ಚೆಂದ ದನಗಳ | ಲೊಂದುಮಾರಲು ಬಗೆದನು.” ||೨೦||

“ಅಕ್ಕಿ ತಂದೆನು ರೊಕ್ಕದಿ೦ದಲಿ, | ಮಕ್ಕಳನು ಅರೆ ಸಾಕಿದೆ. ||
ಒಕ್ಕಲೊಂದು ಮನೆಯೊಳಿಲ್ಲವು, | ದುಕ್ಕ ಗಂಜಿಯ ಉಂಡೆನು.” ||೨೧||

“ದುಡಿತಹೋಯಿತು ಮಗೆಯ ಮಳೆವೋಲ್, | ಬಿಡದೆ ಸಲಹಿದ ಸಾಕಿದಾ ||
ನಡೆಗಳೊಂದೊಂದಾಗಿ ಹೋದವು | ಕಡೆಯ ಸಂಜೆಯ ಬಿಸಿಲವೋಲ್” ||೨೨||

“ಮುದ್ದು ದನ ಇನ್ನೊಂದು, ಎಳೆ ಕರು | ಇದ್ದ ಹಸು ಮತ್ತೊಂದು, ಹಾ!
ಮುದ್ದೆ ನೆತ್ತರ ನನ್ನ ಮೈಯನು | ಗುದ್ದಿ ತೆಗೆದಂತಾಯಿತು” ||೨೩||

“ಬೇರೆ ಒಂದೊಂದಾಗಿ ದನಗಳ | ಮಾರಿ ತಿಂಬುದಕಿಂತಲೂ, ||
ಮಾರಿ ತಿಂಬುದೆ ಹಿಂಡೆ ಅಳಿವುದೆ | ಭಾರಿ ಲೇಸೆನೆ ತೋರಿತು.” ||೨೪||

“ಹೆಂಡತಿಯು ಬಳಿಕನ್ನ ಕೊರಳಿಗೆ | ಗುಂಡು ಕಲ್ಲಂತಾದಳು. ||
ಚೆಂಡಿನಂತಹ ಮಕ್ಕಳನ್ನು | ಕಂಡು ಕಲ್ಲೆದೆ ಹಾರದು.” ||೨೫||

“ಹಾರುವೆನೊ ನೀರ್ಬಾವಿಯೊಳಗೆ? | ಹೀರುವೆನೊ ಕಹಿ ವಿಷವನು? ||
ಸೇರುವೆನೊ ಹುಲಿಗವಿಯ? ಚಟ್ಟವ | ಏರುವೆನೊ? ಎನೆ ಬಗೆದೆನು.” ||೨೬||

“ಕಾಸು ಕೈಯಿಂ ಲೇಸು ಮೈಯಿಂ | ಮಾಸಿ ಎಲ್ಲವು ಹೋಯಿತು ||
ಮೋಸ ಮಾಡಲು, ಘಾಸಿ ಮಾಡಲು | ಆಸೆಯಾಯಿತು ಮನದಲಿ.” ||೨೭||

“ಕದ್ದ ಕಳ್ಳನ ಹಾಗೆ ಕಾಂಬರೊ | ಇದ್ದವರು ಎಂದಿರುಳಲಿ ||
ನಿದ್ದೆ ಬಾರದು; ಬುದ್ಧಿ ತೋರದು | ಹೊದ್ದ ದುಗುಡದ ಹೊರೆಯಲಿ” ||೨೮||

“ಹುಚ್ಚನೆಂದರು, ಲುಚ್ಚನೆಂದರು, | ಮುಚ್ಚುಮರೆಯವನೆಂದರು, ||
ಕಚ್ಚಿ ನುದಿದರು, ಚುಚ್ಚಿ ನುಡಿದರು. | ಪಚ್ಚೆ ದೇವರೆ ಬಲ್ಲನು!” ||೨೯||

“ಬಡವನಾದರೂ ಬೇಡಲೊಲ್ಲೆನು. | ಹಡೆದ ಮಕ್ಕಳ ಮಾರೆನು, ||
ಕಡವ ಪರರಿಂ, ಒಡವೆ ಹೆರರಿಂ | ಪಡೆಯೆ ಪಡೆಯದೆಂದಿಗೂ.” ||೩೦||

“ಈವರಿಲ್ಲವು, ಕಾವರಿಲ್ಲವು. | ಗೋವು ಕಣ್ಮರೆಯಾದವು. ||
ನೋವು ತೀರದು; ಸಾವು ಬಾರದು. ! ದೈವ ಮುನಿಸಿದಂತಾಯಿತು.” ||೩೧||

“ನಿನ್ನೆಯೋ ಎಂಬಂತೆ ಕಾಣುವ | ನನ್ನದಾಗಿಹ ಹಿಂಡೊಳು ||
ಇನ್ನು ಎಳೆ ಕರು ಒಂದೆ ಬದುಕಿದೆ; | ನನ್ನ ಹೆಗಲಲಿ ಮಲಗಿದೆ.” ||೩೨||

“ಕರುವು ಚೊಚ್ಚಲು; ತೊರೆದ ಕೆಚ್ಚಲು | ಸುರಿದು ಕುಡಿಯುವ ಮುಂಚೆಯೇ ||
ತುರುವ ಮಾರಿದ ಬರಿದೆ ಚೀರಿದ | ಬಿರುಮ ಕಟುಕನು ನಾನಲೇ! ||೩೩||

“ಎರಡು ತಿಂಗಳ ಹರೆಯ-ಮಂಗಳ | ಬರಲು-ತುಂಬಿತು ವತ್ಸಗೇ. |
ಬರುಮನಂಗಳ ಸಿರಿಯು; ಕಂಗಳ | ಪುರಲಿದೇ ಕಡೆಕಂಜಿಯು!” ||೩೪||

ಎಂದು ಸೆಟ್ಟಿಯು ಮುಗಿಸಿ ಕಥೆಯನು, | ಮುಂದು ನಡೆದನು ದಾರಿಯಾ. ||
ಬಂದುದಾಗಲೆ ಚ೦ದ್ರನಾಥಗೆ | ಬಿಂದು ನೀರ್ಗಳು ಕಣ್ಣಲಿ. ||೩೫||

“ಅಲ್ಲೆ ಸೆಟ್ಟಿಯೆ! ನಿಲ್ಲು! ತಡೆ! ತಡೆ! | ಸೊಲ್ಲನೊಂದನು ಹೇಳುವೆ! ||
ಕಲ್ಲು ನಿನ್ನಯ ಕಥೆಗೆ ಕರಗದೆ | ಮೆಲ್ಲನಿರುವುದೆ? ಬಿರುಮನೆ!” ||೩೬||

“ಬಿದ್ದುದಿಲ್ಲವು ಗದ್ದಿಗೆಯ ಮೇ | ಲಿದ್ದ ನಮ್ಮೀ ಕಿವಿಯಲಿ ||
ಗದ್ದೆ ಉಳುವರ ಉದ್ದ ಗೋಳಿನ | ಸದ್ದು ಸುದ್ದೀತನಕವಾ.” ||೩೭||

“ಬೇಡು! ಬೇಗನೆ ಮೂಡು ಬೈಲನು | ಮಾಡಿಕೊಡುವೆನು, ಕೊಡುವೆನು ||
ನಾಡಿಗೊಡೆಯನು ಚಂದ್ರನಾಥನು | ಬೀಡುಮದಿಪನು ಇಡುವನು.” || ೩೮ ||

ಒಡನೆ ಸೆಟ್ಟಿಯು ಕೆಡವಿ ಮೈಯನು. | ಅಡಿಗೆ ಚಾಚಿದ ರಾಯನಾ. ||
“ಒಡೆಯ! ಕಾರ್ಕಳದೊಡೆಯ | ಚೌಟರೆ! | ನುಡಿದ ತಪ್ಪನು ಕಾವುದು.” ||೩೯||

ಹೊಗಳುತಿರುವನ ನೆಗಹಿ ಅರಸನು | ನೆಗೆವ ಕರುವನು ಹಿಡಿದನು, ||
“ತಗೆದುಕೊಳ್ಳೈ ಮಗುವ” ಎನ್ನುತ | ಸೊಗದಲಿತ್ತನು ಕೈಯಲಿ. ||೪೦||

“ಆರರೆ! ಬಿರುಮನೆ! ಮರೆಯದಿರು ಮನೆ | ಮರಿಯ ಮಕ್ಕಳ ಮಡದಿಯಾ.||
ಬರಿದೆ ಕೊಡುವೆನು ಬರೆದು ಕೊಡುವೆನು | ಸ್ಥಿರ ಚರಾಸ್ತಿಯ ಉಂಬಳಿ.” ||೪೧||

ಎಂದುಸುರಿ ಮನೆತಂದು ಬಿರುಮನ | ಕಂದನಹ ಕಡೆಕಂಜಿಯಾ ||
ಒಂದನುಳುಹಿದ ಹಿಂದೆ ಕಳುಹಿದ | ಇಂದುನಾಥದೀಶನೂ. ||೪೨||
*****
(ಪದ್ಯ ಪುಸ್ತಕ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾತಿನವರು
Next post ನಾವು ಬಹಳ ಜನ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

cheap jordans|wholesale air max|wholesale jordans|wholesale jewelry|wholesale jerseys