Home / ಕವನ / ಕವಿತೆ / ಭಾಟಿಗೀ ಹಾಡು

ಭಾಟಿಗೀ ಹಾಡು

ಹೆಣ್ಣ ಬೇಡಲಿ ಹ್ವಾದ್ರಽ ಹೆಣ್ಣೇನು ಮಾಡತಿರಲೆ|
ಹೆಣ್ಹಾಲಾ ಬಾನಾಽ ಉಣತಿರಲೆ|
ಹೆಣ್ಹಾಲಾ ಬಾನಾ ಉಣತಿರಲೆ| ಹೆಣ್ಣಿನ ತಾಯಿ|
ಉಮ್ಮಾಽಯದ ನಗಿಯ ನಗತಿರಲೆ ||೧||

ಕೂಸ ಬೇಡಲಿ ಹ್ವಾದ್ರಽ ಕೂಸೇನು ಮಾಡತಿರಲೆ|
ಕೂಸ್ಹಾಲು ಬಾನಾಽ ಉಣತಿರಲೆ|
ಕೂಸ್ಹಾಲು ಬಾನಾ ಉಣತಿರಲೆ| ಕೂಸಿನ ತಾಯಿ|
ಕಸಮಾಯದ ನಗಿಯ ನಗತಿರಲೆ ||೨||
* * *

ಗ್ವಾಡಿಯ ನೀ ತೆಳೆಗಽ ಜೋಡ ಮಾವಿನ ಮರನ|
ತಟ್ಟಂದರ ತೆಳಗಽ ತುದಿಯೆಲಿಯ|
ತಟ್ಟಂದರ ತೆಳಗಽ ತುದಿಯೆಲಿ| ಪಕ್ಕುಸಿ ಕುಂತು|
ದೊಡ್ಡವರಿಗೊಚನಾ ಕೊಡತಾವ ||೩||
* * *

ಪಟ್ಟ ಪಡಸಲಿಗ್ಯಾಗಽ ದೊಡ್ಡಪ್ಪ ತಾ ಕುಂತು|
ಮಡದೀನ ಕರೆದು ಬೆಸಗೊಂಡಾ|
ಮಡದೀನ ಕರೆದು ಬೆಸಗೊಂಡು| ಕೇಳ್ಯಾರ|
ಕೊಡವೂನೆನವರಿಗೆ ಮಗಳನ್ನ ||೪||

ವರಸುದ್ದನಿದ್ದರ ಕುಲ ಚೊಕ್ಕನಿದ್ದರ|
ಫಣಿ ನಾಲಿಗಿ ಸುದ್ದಽ ಮಕ ಸುದ್ದ|
ಫಣಿ ನಾಲಿಗಿ ಸುದ್ದಽ ಮಕ ಸುದ್ದ| ನಿದ್ದರ|
ಕುಡಹೋಗರಿ ನಮ್ಮ ಮಗಳನ್ನ ||೫||
* * *

ಆ ಮನಿ ಅತ್ತಿಽಗಿ ಈ ಮನಿ ನಾದುಽನಿ|
ಆಕಳ ಕರ ಸಾಕ್ಷಿ ನೆಗಿಯಾಣಿ|
ಆಕಳ ಕರ ಸಾಕ್ಷಿ ನೆಗಿಯಾಣಿನ| ಕರಕೊಂಡು|
ಬಾಲನ ಭಾಟಿಗ್ಗೆ ಬರಬೇಕ ||೬||

ಶುಕ್ರವಾರ ದಿನ ಸೂರ್ಯ ಉದಯಾದಂಗ|
ಇಂದ ನಮ್ಮಳಿಯ ಉದಿಯಾದ|
ಇಂದ ನಮ್ಮಳಿಯ ಉದಿಯಾದ| ಹಡೆದವ್ವ|
ಶಾಂವಿಗಿ ಸಯಿದಾನಕ ಹದಮಾಡ ||೭||

ಮಂಗಳವಾರ ದಿನ ಚಂದರುದಯಾದಂಗ|
ಇಂದು ನಮ್ಮಳಿಯ ಉದಯಾದ|
ಇಂದು ನಮ್ಮಳಿಯ ಉದಯಾದ| ಹಡೆದವ್ವ
ಹಪ್ಪಳ ಸೆಂಡಿಽಗಿ ಹದಮಾಡ ||೮||

ಕಡಲಿಕಾಳಂಗ ಕಟದ ಮುತ್ತಿಟ್ಟಾನ|
ಹಡೆದವ್ವ ನೋಡ ಅಳಿಯರಿಗೆ|
ಹಡದವ್ವ ನೋಡಽ ಅಳಿಯಽರ| ಚೆಲುವಿಽಕಿ|
ದೊಡ್ಡವರ ತಕ್ಕ ಅಳಿಯಽನ ||೯||

ಉದ್ದಿಽನ ಬ್ಯಾಳ್ಯಂಗ ತಿದ್ದಿ ಮುತ್ತಿಟ್ಟಾನ|
ದೊಡ್ಡವ್ವ ನೋಡ ಅಳಿಯರನ|
ದೊಡ್ಡವ್ವ ನೋಡ ಅಳಿಯಽರ| ಚೆಲುವಿಽಕಿ|
ದೊಡ್ಡವರ ತಕ್ಕ ಅಳಿಯಽನ ||೧೦||
*****

ಮದುವೆಯ ಹಾಡುಗಳು

ಈ ವಿಭಾಗವು ಹೆಣ್ಣುಮಕ್ಕಳ ಸಂಹಿತೆಯಿದ್ದಂತೆ. ಲಗ್ನದ ಬೇರೆಬೇರೆ ವಿಧಾನಗಳ ಪ್ರಸಂಗಗಳಲ್ಲಿ ಇವುಗಳನ್ನು ಹಾಡುವರು. ಈ ಹಾಡುಗಳು ಅವರ ಮಟ್ಟಿಗೆ ಯಜ್ಞ, ಮಂತ್ರಗಳೇ ಸರಿ. ದಾಂಪತ್ಯವು ಜೀವನದ ಬಹುಮುಖ್ಯ ವಿಭಾಗವಾಗಿರುವುದರಿಂದ, ಅದು ಒಂದು ಮಹಾಪವಿತ್ರ ಯಜ್ಞದಂತೆ ಅವರಿಗೆ ತೋರಿದ್ದು ಆಶ್ಚರ್ಯವಲ್ಲ. ಇವು ಕೇವಲ ರಂಜನೆಯ ಹಾಡುಗಳಲ್ಲದ್ದರಿಂದ ಇವುಗಳನ್ನು ಬೇರೆ ದೃಷ್ಟಿಯಿಂದ ಓದಬೇಕು. ಆದರೆ ಇವುಗಳಲ್ಲಿ ರಸವಿಲ್ಲವೆಂತಲ್ಲ. ಒಂದೊಂದು ವಿಧಾನಕ್ಕೂ ಎಪ್ಟೆಷ್ಟೋ ಹಾಡುಗಳು ಸಿಕ್ಕಬಹುದಾದರೂ, ನಾವು ಒಂದೊಂದು ಹಾಡನ್ನು ಮಾತ್ರ ಇಲ್ಲಿ ಕೊಟ್ಟಿದ್ದೇನೆ.

ಭಾಟಿಗೀ ಹಾಡು

ಕನ್ಯಾಪಕ್ಷದವರೂ ವರಪಕ್ಷದವರೂ ಮೊದಲು ತಮ್ಮತಮ್ಮೊಳಗೆ ವಾಙ್ನಿಶ್ಚಯವನ್ನು ಮಾಡಿ ಕನ್ಯೆಗೆ ಕುಂಕುಮವನ್ನು ಹಚ್ಚುತ್ತಾರೆ. ಆ ಮೇಲೆ ಅವೇ ನಿಶ್ಚಯದ ಮಾತುಗಳನ್ನು ಸರ್ವಜನ ಸಾಕ್ಷಿಯಾಗಿ ಗಟ್ಟಿ ಮಾಡುತ್ತಾರೆ. ಆ ಕಾಲದ ನೈಮಿತ್ತಕ ಕಾರ್ಯಕ್ಕೆ ಭಾಟಿಗೆ ಅಥವಾ ಭಾಷ್ಟಿಗೆ ಹಾಕುವುದು ಎನ್ನುವರು. ಇದು ಆ ಪ್ರಸಂಗದ ಹಾಡು. ಇದರಲ್ಲಿ ಮೂರನೆಯ ನುಡಿಯ ಹೊರತು ಉಳಿದೆಲ್ಲ ಹಾಡು ಸಹಜವಾಗಿ ತಿಳೆಯುವಂತಿದೆ. ಮೂರನೆಯ ನುಡಿಯಲ್ಲಿ ಹೇಳುವುದೇನೆಂದರೆ, ಮೇಲುಪ್ಪರಿಗೆಯ ಮೇಲ್ಮನೆಯಲ್ಲಿ ಕುಳಿತು ಮದುವೆಯ ಮಾತನ್ನಾಡುತ್ತಿರುವಾಗ, ಆ ಮೇಲಟ್ಟಕ್ಕಿಂತ ತೀರ ಕೆಳಕ್ಕಿರುವ ಜೋಡು ಮಾವಿನ ಮರಗಳ ತುದಿಯ ಮೇಲೆ ಕುಳಿತ ಜೋಡೆರಡು ಹಕ್ಕಿಗಳು ಶುಭಶಕುನವನ್ನು ನುಡಿಯುತ್ತವೆ.

ಛಂದಸ್ಸು:— ತ್ರಿಪದಿ.
ಶಬ್ಧ ಪ್ರಯೋಗಗಳು:— ಹ್ವಾದ್ರ=ಹೋದರೆ. ಉಮ್ಮಾಯದ=ಹರುಷದ. ಕುಸುಮಾಯದ=ಹೂವಿನಂಥ. ಗ್ವಾಡೀಯನೀ ತೆಳಗ=ಗೋಡೆಯನೆ ಈ ತೆಳಗೆ (ಗೋಡೆಯ ಕೆಳ ಬದಿಗೆ). ತಟ್ಟಂದರ ತೆಳಗ=ತಟ್ಟತಳಕ್ಕೆ. ಆಕಳ ಕರಸಾಕ್ಷಿ=ಗಾಯತ್ರಿಯ ಸಾಕ್ಷಿಯಿಂದ. (ಪ್ರತಿಜ್ಞಾ ಪೂರ್ವಕವಾಗಿ). ಶುಕ್ರ ವಾರ, ಮಂಗಳವಾರ ಇವು ಹೆಣ್ಣುಮಕ್ಕಳ ದೃಷ್ಟಿಯಲ್ಲಿ ಮಹತ್ವದ ದಿವಸಗಳು.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...