ಅಮ್ಮಾ, ನನ್ನ ಮಗುವನ್ನು ಕಂಡರೆ ನಿನಗೆ ಪ್ರೀತಿ ಇಲ್ಲವೇನಮ್ಮಾ?
ತೊದಲು ಮಾತಿನ ಮಗು, ಪುಟ್ಟ ಹೆಜ್ಜೆ ಇಡುವ ಮಗು, ಮುದ್ದು ಮಗು?

ಇದೇ ಈಗ ಸ್ನಾನ ಮಾಡಿಸಿಕೊಂಡು ಥಳ ಥಳ ತೊಳಗುತ್ತಿರುವ
ಮಗುಗಳ ಮಾಣಿಕ್ಯನಂಥ ಕಿಲಕಿಲನೆ ನಗುವ ಮಗು?

ಮಗಳೇ, ಮಗಳೇ, ನಿನ್ನ ಮಗುವನ್ನು ಮುದ್ದು ಮಾಡಲು ನನಗೂ ಆಸೆ, ಮಗಳೇ.
ಅಜ್ಜಿಯ ಪ್ರೀತಿ ತೋರಿ, ಬೊಚ್ಚು ಬಾಯಲ್ಲಿ ಮುದ್ದಿಟ್ಟು ನಗುವ ಆಸೆ, ಮಗಳೇ.

ಮಗುವಿನ ತಲೆಯ ಮೇಲೆರಡು ಪುಟ್ಟ ಕೋಡು ಮೊಳೆತಿವೆಯಲ್ಲ, ಯಾಕೋ?
ಅಮೆರಿಕದ ಶೂ ತೊಟ್ಟು ನಮ್ಮ ಮನೆಯಂಗಳ ದಾಟಿ ನ್ಯೂಯಾರ್ಕಿಗೆ ಹೆಜ್ಜೆ ಹಾಕುವಂತೆ ಕಾಣುವನಲ್ಲ?

ಟಿವಿಯ ಹಾಡು ನೋಡುತ್ತಾ ಕಂಪ್ಯೂಟರಿನ ಆಟ ಆಡುತ್ತಾ
ಮೈ ಜ್ವರ ಬಂದ ಹಾಗೆ ಬಿಸಿಯಾಗಿ ಮುಟ್ಟಿದರೆ ಸುಡುವುದಲ್ಲಾ?

ನಿನ್ನೆದೆಯ ಹಾಲಿನ ಪರಿಮಳದ ಬದಲು ಮಗವಿನೆದೆಗೆ ಪ್ಯಾರಿಸ್ಸಿನ ಸೆಂಟಿನ ವಾಸನೆ ಇಳಿದಿದೆಯಲ್ಲ?
ಎಳೆ ಚಿಗುರ ಕೈ ಬೆರಳು, ಚೆಕ್ಕು ಪುಸ್ತಕದ ಹಾಳೆಗೆ ಸೈನು ಹಾಕುವ ಪೆನ್ನಿನಂತಿವೆಯಲ್ಲಾ?

ಒಂದು ಕಣ್ಣಲ್ಲಿ ಗಾಳ, ಇನ್ನೊಂದರಲ್ಲಿ ಬಂದೂಕು ಕಾಣುತ್ತೆಯಲ್ಲಾ?
ಕಿವಿ ಮೊರದಗಲವಾಗಿ ಚೂಪಾಗಿ, ಪಾದ ಹಿಂದುಮುಂದಾಗಿವೆಯಲ್ಲಾ?

ಅಮ್ಮಾ ಅಮ್ಮಾ, ನನ್ನ ಮಗನ ಕಂಡರೆ ಪ್ರೀತಿಯಿಲ್ಲವೇನಮ್ಮಾ?
ಹೇಳಮ್ಮಾ, ನಿನ್ನ ಮೊಮ್ಮಗನ ಕಂಡರೆ ಅಕ್ಕರೆ ಇಲ್ಲವೇನಮ್ಮಾ?

ಮಣ್ಣಲ್ಲಿ‌ಆಡಿ, ಹಕ್ಕಿ ಗುಬ್ಬಿ ನೋಡಿ, ಕತೆ ಹೇಳಜ್ಜಿ ಅನ್ನುತ್ತಾ ಪಕ್ಕದಲ್ಲಿ ಮಲಗುವ ಮೊಮ್ಮಗ
ಒಂದು ತುತ್ತು‌ಅನ್ನತಿನ್ನಲು ಮನೆಯೆಲ್ಲ‌ಅಡ್ಡಾಡಿಸುವ ಮೊಮ್ಮಗ

ಆ ಆಟ, ಊ ಊಟ ಅನ್ನುತ್ತಾ ಇದು ನನ್ನ ಅಂಗಿ, ನನ್ನ ಮನೆ, ನನ್ನ ತಟ್ಟೆ ಅಂತ ಜಗಳಾಡುವ
ಮುದ್ದು ಮೊಮ್ಮಗ ಬರುತ್ತಾನೆಂದುಕೊಂಡಿದ್ದೆನಲ್ಲೇ ತಾಯಿ!
*****
ಮೂಲ: ಚಾರ್ಲ್ಸ್ ಕಾಸ್ಲೆ