ಸಂಭ್ರಮದಿ ಹೊತ್ತ ಹೊಟ್ಟೆ
ಬರವಿಲ್ಲ ಕನಸಿಗೆ,
ಹೊಂಬಿಸಿಲ ನೆನಪಲ್ಲೆ ಮುದ್ರೆ
ಇಲ್ಲ, ಅಲ್ಲಿ ಮೇಲುಗೈ ಕನಸ ಸಾಕಾರಕ್ಕಲ್ಲ.
ವಿದ್ವಂಷಕ್ಕೆ-ವಿಧಿಯ ಎಡಗೈಗೆ ಇಲ್ಲ
ಮರುಕ-ಲಲಾಟ ಲಿಖಿತ ಯಾರು
ಬರೆದದ್ದು? ಬ್ರಹ್ಮನೋ ಅಥವಾ ಎಂಡೋ ಸಲ್ಫಾನೋ?
ಎತ್ತಲಾಗದು ಕೈ ಮೇಲಕ್ಕೆ, ವಿರೋಧಕ್ಕೂ ಕೂಡ.
ಉಲಿಯಲಾಗದ ಕಂಠ ಜಿಹ್ವೆ.
ನಿಂತು ಹೋಗಿದೆ ದನಿ
ಅನ್ಯಾಯವಿಂದು ನ್ಯಾಯವಾದಾಗ
ಕಣ್ಣಕೋಟೆಯ ಒಳಗೆ ನೆತ್ತರಿನ ಮಡು
ತಿರುಚಿದ ಮುಂಡ, ಸೊಟ್ಟ ಕೈಕಾಲು
ಮರು ಮಸೆಯುವ ಮರುಕ
ತೆವಳುತ್ತಿವೆ ದೇಹ ಉರಗ ಚಲನೆ
ದಾತನಾರು? ಯಾರೀ ವೈರಿ?
ವೈಕಲ್ಯಕ್ಕೆ ನಾಂದಿ ಯಾರ ಹಾಡು?
ಸಾವಲ್ಲ ಮತ್ತು ಬದುಕು ಅಲ್ಲ
ಮರಣಶಯ್ಯೆ- ಆದರಿವರು ಭೀಷ್ಮರಲ್ಲ
ಬಾಳು ಬತ್ತಿದ ಅಂಗ ಭಂಗಿತರು
ಹೆತ್ತೊಡಲ ಹುರಿದು ಮುಕ್ಕುತಿದೆ
ಹತಾಶೆ ಅನಲು
*****

ನಾಗರೇಖಾ ಗಾಂವಕರ