ರಸ್ತೆ ಬದಿಯಲ್ಲಿ ಕುಳಿತಿದ್ದ ಆತ್ಮವೊಂದನ್ನು
ಕೇಳಿದೆ-ಸತ್ತವರು ಉಳಿದವರಿಂದ
ಬಯಸುವುದಾದರೂ ಏನನ್ನು?

ಆತ್ಮ ನುಡಿಯಿತು-ತಿಳಿದವರ ಹಾಗೆ
ಮಾತಾಡದಿರುವುದು ತಿಳಿಯದ
ಸಂಗತಿಗಳ ಬಗ್ಗೆ

ಮುಖ್ಯವಾಗಿ ನಮ್ಮ ಕುರಿತು ನಿಜಕ್ಕೂ
ನಾವು ಉತ್ತರಿಸಲಾರದ ಸಂದೇಹಗಳನ್ನು
ಎತ್ತದಿದ್ದರೆ ಸಾಕು

ನಾನೆಂದೆ-ಇಷ್ಟು ಮಾತ್ರವೆ ?
ನಿಮ್ಮ ಕೈಗೂಡದ ಅನೇಕ ಆಸೆಗಳನ್ನು
ಕೈಗೂಡಿಸುವುದು ಬೇಡವೆ?

ನಿಮ್ಮ ಪ್ರಕ್ಷುಬ್ಧ ಮನಕ್ಕೆ ಶಾಂತಿ
ಪೂಜೆ ತರ್ಪಣ ಚಿರಸ್ಮರಣೆ ಹಾಗೂ
ಸಾಮಾಜಿಕ ಕ್ರಾಂತಿ ?

ಆತ್ಮ ನುಡಿಯಿತು-ದೇವರಾಣೆ
ಅದೆಲ್ಲಾ ಮತ್ತೆ; ಬೇಕಾದ್ದೀಗ
ಬಸ್ಸಿಗೆ ಎಂಟಾಣೆ
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)