ಒಡಕು ಮಸರಿನ ಸಿಡಿದ ಎಸರಿನ
ಶಬ್ಬ ಡಂಗುರ ನಿಲ್ಲಲಿ||

ಉಲಿಯ ನುಲಿಯಲಿ ಬಲಿಯ ನೂಲದೆ
ಶಬ್ದ ಗಂಟೆಯ ಮೀರುವೆ
ತಮಟೆ ಜಾಗಟೆ ಕಾಳಿಭೇರಿಯ
ಶಂಖವಾದ್ಯವ ದಾಟುವೆ

ಮಾತು ಸುಣ್ಣಾ ಮೌನ ಮಲ್ಲಿಗೆ
ಹೂವಿನೆದೆಯಲಿ ಮಲಗುವೆ
ಜಾತ್ರಿ ಬೇಡ ತೇರು ಬೇಡ
ಕಳಸ ಗೋಪುರ ತೊರುವೆ

ಜಡದ ಮಜ್ಜಿಗೆ ಕಡೆದು ತೆಗೆಯುವೆ
ಶಿವನ ಶಾಂತಿಯ ಬೆಣ್ಣೆಯ
ಕಡಲ ಕೋಲಾಹಲದ ಸಂತೆಗೆ
ತರುವೆ ಶಾಂತಿಯ ಮೆಂತೆಯ
*****