ಕಡಲ ಕರುಳು ಬಳ್ಳಿಯಲ್ಲರಳಿದ ಹೂ-ಮಗನೆ
ಎಲೆ ಎಲೆ ಅಲೆಯೊಳಗಣ ನಿತ್ಯ ಹರಿದ್ವರ್‍ಣನೆ
ಅಂಬಿಗನೆ-
ಹೇಳು ಆ ದಂಡೆಯಲ್ಲೇನಿದೆ?

ಹುಟ್ಟಿನ ಹರಿಕಾರನೆ
ಮತ್ಸ್ಯಕನ್ನಿಕೆಯ ಪ್ರಿಯಕರನೆ
ಅಂಬಿಗನೆ-
ಹೇಳು ಆ ದಂಡೆಯಲ್ಲೇನಿದೆ?

ಸುಳಿಗಾಳಿಯ ಸನ್ಮಿತ್ರನೆ
ಮಳಲ ಮಾನಸ ಪುತ್ರನೆ
ಅಂಬಿಗನೆ ಆ ದಂಡೆಯಲ್ಲೇನಿದೆ?


ನಾನು ಅಂಬಿಗನು
ನಂಬುವೆಯಾ?
ಹಾಗಾದರೆ ಕೇಳು-

ಆ ದಂಡೆಯಲ್ಲೂ….
ಈ ದಂಡೆಯಲ್ಲೇನಿದೆ ಎಂದು
ಕೇಳುತಿಹನು, ನಿನ್ನಂತೆಯೆ ಅವನು
ಸಂಶಯತ್ಮನು- ಅದು ನೀನು!

ಆ ದಂಡೆಯಲ್ಲೂ….
ಹೀಗೆಯೆ ಆಲಿಸಿ ನಗುತಿಹನು
ನನ್ನಂತೆಯೆ ಅವನು ಅಂಬಿಗನು
ಅದು ನಾನು

ಈಗ ಹೇಳು-
ಎಲ್ಲಿದೆ ದಂಡೆ? ಯಾರನ್ನು ಕಂಡೆ?
*****

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)