ತುತ್ತು ಉಣ್ಣುವ ಬಾಯೆ
ತುತ್ತು ಉಣಿಸುವ ತಾಯೆ
ಏನೀ ಜಗದ ಮಾಯೆ?

ಒಲೆಯ ಉರಿಸುವ ತಾಯೆ
ಎಲ್ಲವ್ವ ಹಾಲಕ್ಕಿ ಬೇಯಿಸಿದ ಮಡಕೆ?
ಯಾಕವ್ವ ಇಷ್ಟೊಂದು ಹಸಿವು ಬಾಯಾರಿಕೆ?
ಯಾಕವ್ವ ಬೆಂದ ಕಾಳಿಗೂ ಮೊಳಕೆ?

ತುತ್ತೂರಿ ಊದುವ ಬಾಯೆ
ತುತ್ತೂರಿ ಕೈಗಿತ್ತ ತಾಯೆ
ಏನೀ ಜಗದ ಮಾಯೆ?

ಒಲವ ಹರಿಸುವ ತಾಯೆ
ಯಾಕವ್ವಾ ಅಂಕೆಯನೂ ಮೀರಿ
ಬಿರಿಯುವದು ಮಲ್ಲಿಗೆ?
ಯಾಕವ್ವ ಕನಲುವುದು ಕತ್ತರಿಸಿದರೆ ರೆಕ್ಕೆ?
ಯಾಕವ್ವ ಅಂಜುವುದು ಮೂಜಗವು ಅಂಕುಶಕೆ?

ತುತ್ತೆನ್ನ ತೊತ್ತಾಗಿಸುವ ಮುನ್ನ
ತುತ್ತಿಗೆ ತುತ್ತಾಗುವ ಮುನ್ನ
ನೆತ್ತಿಯನು ಹೊತ್ತಿಸಿ
ಬತ್ತಿಯಾಗಿಸು ತಾಯೆ

ತುತ್ತೂರಿ ಕೈಗಿತ್ತು ಮೈಮರೆಸದಿರು ನನ್ನ
ಮದ್ದಲೆಯ ಕೈಗಿತ್ತು ಮದ್ದಾನೆಯಾಗಿಸದಿರು ನನ್ನ
ತುತ್ತಿನ ಮುಂದೆ ತಲೆಬಾಗಲು ಕಲಿಸು
ತಂಬೂರಿಯ ಕೈಗಿತ್ತು ತಲ್ಲಣವ ನಿಲಿಸು
ತುತ್ತು-ತುತ್ತೂರಿಯ ನಡುವೆ
ಸೇತುವೆಯಂತೆ ನಿಲಿಸು.
*****

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)