ಎಲೆ ಹಸಿರು ಹೂವು ಮುಡಿದು
ಆಳ ನಿರಾಳಕ್ಕಿಳಿದ ಬೇರುಗಳ
ಹರವಿ ಹರಡಿ ಹಾಸಿ ಬೀಸಿದ
ತಂಗಾಳಿ ಬಯಲ ಬಾನ ತುಂಬ
ತೇಲಿ ತೇಲಿಸಿದೆ ಹಾಸು ನಿಂತಮರ.

ಹನಿಸುತ್ತದೆ ವರ್ಷವೈಭವದ ಸೊಗಸು
ನಲಿದು ಒಲಿದು ಬಂದ ದುಂಬಿ ಝೇಂಕಾರ
ಗಂಧ ಸುಗಂಧ ಮೀರಿ ಮಂದಸ್ಮಿತ
ಬೀರಿಗಿಳಿದ ಪ್ರೀತಿ ಒಲವು ರೋಮಾಂಚನ
ಚಿಗುರು ಕುಸುಮಿತ ಪುಳಕಿತ ನನ್ನೊಳಗಿನ ಹಾಡು.

ಮೇಲೇರುತ್ತವೆ ಕಿರಣಗಳು ಹಿತ ಕನಸು
ಮೂಟೆಗಳು ಹೊತ್ತ ಮೋಡ ರಾಶಿ ಪ್ರಾಣ
ಶಕ್ತಿ ಜೀವರಸ ಹೀರಿ ಕಡಲು ತೇಲಿದ
ಶುಭ ಸಂದೇಶ ಅಲೆಗಳು ಬೀಸುಲಯ
ಘಮ್ಮೆಂದು ಚಿಗುರಿ ಸೂಸಿನಲಿದ ಭುವನದ ಭಾಗ್ಯ ನನ್ನ ಧಾಟಿ.

ಬೇರುಗಳಿಗಿಳಿದ ಜೀವ ರಸಗಾಳಿಜಲ
ಧಮನಿ ಧಮನಿಗಳಲಿ ಅರಳಿ ಸೌರಭಿ
ಗೂಡು ತುಂಬಾ ಚಿಲಿಪಿಲಿ ಗಾನ ಭಾಗ್ಯ
ಪ್ರಾಣ ಪರಿ ಒಡನಾಟ ಪರಿ ಬಿಚ್ಚಿ ಲಹರಿ
ನನ್ನಲ್ಲಿ ಒಂದಾದ ನಿಮ್ಮ ಬದುಕ ಪ್ರಾರ್ಥನೆ.
*****