ಸೂರ್ಯ ಸೃಷ್ಠಿ ದೃಷ್ಠಿಯಲಿ ಬಿಂಬ
ಎಳಸು ಹಾಸುಬೀಸು ಕೊನರಿದ ಮಿಂಚು
ಸಂಚಾರ ನರನಾಡಿಗಳಲ್ಲಿ ಕೆಂಪು ಕಿರಣಗಳು
ಎಲ್ಲೆಲ್ಲೂ ಹರಿದ ಆನಂದ ಶಾಶ್ವತ
ಮರಳು ರಾಶಿಯಲ್ಲೂ ಮರೀಚಿಕೆ.

ಸದ್ದುಗದ್ದಲ ಇಲ್ಲದೇ ಆತ ಬಂದಾಗ
ಎದೆಯ ಗೂಡಿನಲಿ ಹಕ್ಕಿ ಚಿಲಿಪಿಲಿ
ತೇಲಿ ತೇಲಿ ಮುಗಿಲ ಮೇಲೆ ಗಿಳಿವಿಂಡು
ಮನಸ್ಸು ಅರಳಿದ ಮುಂಜಾನೆ ಎಲ್ಲಾ
ವ್ಯವಹಾರಗಳು ಸೋಲು ಕೂಡಾ ಹೊಸಪಾಟ.

ನದಿ ಹಳ್ಳಕೊಳ್ಳ ಹರಿದ ಜೀವಜಲ ಫಳಫಳ
ಹನಿಹನಿಗಳ ಸೆಳತ ಬಯಕೆ ಚಲನೆ
ಸುತ್ತಲೂ ನೆರೆದ ಜಗದ ಜಾತ್ರೆ ಎಲ್ಲೆಲ್ಲೂ
ಹೆರಿಗೆ ಮನೆ ಕೆಂಪು ನೀರು ಹರಿದು
ಭಾನು ಸೇರಿ ಸುತ್ತಿ ಸುಳಿದ ಕಪ್ಪುಮೋಡಗಳಾಟ.

ಸುಂದರ ಸೃಷ್ಠಿಗೆ ರಾಹುಕೇತುಗಳಕಾಟ
ರಾತ್ರಿ ಕತ್ತಲೆ ಸರಿದು ಬೆಳಕಿನಾಟ
ಬಂಗಾರದ ಬಯಲು ತುಂಬ ಹಸಿರು
ಉತ್ಸಾಹದ ಉರುಟಣಿಗೆ ದುಂಬಿಯ ಹಾಡು
ಉಗಾದಿಯ ನವ ಉಲ್ಲಾಸ ಎಲ್ಲರ ಅಂಗಳಕೆ.
*****

ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)