ಕಾಲಕಾಲಕ್ಕೆ ತಿರುಗಿ ತಿರುಗಿ
ಏರಿ ಇಳಿದ ರಾಗತಾಳಕ ಅಮ್ಮ
ಒಂದೇ ಲಯವಿಟ್ಟಳು ಜೋಕಾಲಿ ಜೀಕಿ

ರಾತ್ರಿ ಕತ್ತಲೆ ಹಗಲುಬೆಳಕು
ಹದವಿಧದ ಚಲನೆಗೆ ಅಮ್ಮ
ಚಾಲನೆ ಕೊಟ್ಟಳು ಕಂದನ ಮೆದುಬೆರಳುಗಳ ಹಿಡಿದು.

ಮತ್ತೆ ಮತ್ತೆ ಸುತ್ತ ಸುಳಿವ ಬಿದ್ದು ಏಳುವ
ಸಾವಿರಾರು ಕನಸುಗಳಿಗೆ ರಂಗು ಇಟ್ಟಳು ಅಮ್ಮ
ಕಂದನ ಎಳೆಗಣ್ಣಗಳಿಗೆ ಕಾಡಿಗೆ ನೀಯುತ್ತ.

ರೇಖೆ ಅತಿರೇಖೆ ಅಡಿಮೇಲೆ
ನಿಲುಕುವ ಮೊಳಕೆಗೆ ಪ್ರೀತಿ ಎದೆ ಹಾಲು ಸುರಿದಳು ಅಮ್ಮ
ಬಾಚಿ ತಬ್ಬಿಕೊಂಡ ಎಲ್ಲಾ ಕ್ಷಣಗಳಲಿ

ಅವಳ ಕೈಯ ಬೆರಳತುದಿಯ ಮಾಂತ್ರಿಕ ಸ್ಪರ್ಶ
ಅದಕೂ ಇದಕೂ ಎದಕೂ ಸುತ್ತುವರಿದು
ಎಲ್ಲೆ ಮೀರಿದ ಭೂಮಿ ಬಟ್ಟಲು ಜೀವ ಹಿಡಿದಿದೆ ನಿಜದಲಿ.

ಸಹಜ ಪ್ರೀತಿ ಕೊನರಿ ರೆಂಬೆಕೊಂಬೆಗೆ ಹಸಿರು
ಚಿಗುರು ಹೊಮ್ಮಿ ಬಯಲು ಬಸಿರು ಅಮ್ಮ
ಎಲ್ಲಾ ದಾರಿಗಳಲ್ಲಿ ಹೂವು ಚಿಟ್ಟೆಜೇನು ಕಟ್ಟಿದವು ಗೂಡು.
*****

ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)