ಗೋಪಾಳಭಟ್ಟರ ಹುಲಿ

ಗೋಪಾಳಭಟ್ಟರ ಹುಲಿ

ನಮ್ಮೂರಿಗೆ ಪುಣೆ ಮುಂಬೈ ಕಡೆಯಿಂದ ಅತಿಥಿಗಳು ಬಂದರೆ ನಿಜವಾಗಿಯೂ ನಮ್ಮ ಊರಿನ ಪರಿಸ್ಥಿತಿಯನ್ನು ಕಂಡು ಅವರಿಗೆ ಕನಿಕರವೆನಿಸದೇ ಇರುವದಿಲ್ಲ,ಐದಾರು ಸಾವಿರ ಜನವಸತಿ ನಮ್ಮೂರಿನದು. ಇತ್ತ ಹಳ್ಳಿಯೂ ಅಲ್ಲ, ಇತ್ತ ಪಟ್ಟಣವೂ ಅಲ್ಲ. ಆದರೆ ಹಳ್ಳಿಯ ಎಲ್ಲ ಅನಾನುಕೂಲತೆಗಳೂ ಪಟ್ಟಣದ ಎಲ್ಲ ತುಟಾಗ್ರತೆಯೂ ಇಲ್ಲಿ ಕೂಡಿಕೊಂಡಿವೆ. ಸುದ್ದಿ ಎನ್ನಬಹುದಾದ ಯಾವ ಸಂಗತಿಯೂ ಇಲ್ಲಿ ಘಟಿಸುವದಿಲ್ಲ. ಸಭೆ, ಮೆರವಣಿಗೆ, ಪರಿಷತ್ತು ಅಥವಾ ಕನಿಷ್ಟವಾಗಿ ಹೊಡದಾಟ ಬಡಿದಾಟಗಳು ಜರುಗಿದರೂ ಊರಿಗೊಂದು ಕಳೆಬರಬಹುದಾಗಿತ್ತು. ಅದರೆ ಅಂಥದೇನೂ ಫಲಿಸುತ್ತಿರಲಿಲ್ಲವಾದ್ದರಿಂದ, ಆಳಬಾವಿಯಲ್ಲಿರುವ ಆಮೆಯಂತೆ ನಮ್ಮ ಆಯುಷ್ಯವು ಸಾಗಿದ್ದಿತು. ಆದರೆ ಆಗಾಗ್ಗೆ ಚಿಕ್ಕ ಪುಟ್ಟ ಘಟನೆಗಳೂ ಜರಗುತ್ತಿದ್ದವು. ಅವುಗಳನ್ನು ಹತ್ತು ಹನ್ನೆರಡು ವರುಷಗಳಾದರೂ ನಾವು ನೆನಪಿನಲ್ಲಿಡುತ್ತಿದ್ದೆವು. ಇಂತಹದೇ ಒಂದು ಘಟನೆ ನಮ್ಮ ಗೋಪಾಳಭಟ್ಟರ ಹುಲಿಯ ಕತೆಯಾಗಿದೆ.

ನಮ್ಮ ಊರಿಗೆ ಯಾವುದಾದರೂ ನಾಟಕ ಕಂಪನಿಗಳಾಳಲೀ,ಸರ್ಕಸ ಕಂಪನಿಗಳಾಗಲೀ ಬಂದುವೆಂದರೆ, ಅವು ತಮ್ಮ ಅಂತ್ಯವಿಧಿಗಾಗಿಯೇ ಬರುತ್ತವೆಂದು ನಮ್ಮೂರಿನ ಖ್ಯಾತಿ. ಒಮ್ಮೆ ಇಂತಹದೇ ಒಂದು ಚಿತ್ತಾಕರ್ಷಕ ಸರ್ಕಸ ಕಂಪನಿಯು ನಮ್ಮೂರಿಗೆ ಬಂದಿತು. ಮತ್ತು ಅವರು ತಮ್ಮ ತಂಬೂವನ್ನೂ ಹೊಡೆದರು. ತಂಬೂ ನಿಂತರೂ, ಒಲೆ ಉರಿ ಕಂಡಿದ್ದಿಲ್ಲ. ಸರ್ಕಸ ಕಂಪನಿಯಲ್ಲಿ ಆನೆ ಇತ್ತು; ಹುಲಿ ಇತ್ತು; ಮತ್ತು ಕದುರೆಗಳೂ ಇದ್ದವು; ಆದರೆ ಅಕ್ಕಿ ಮಾತ್ರ ಇರಲಿಲ್ಲ. ಮಾನೇಜರರು ಬಹಳ ಚಿಂತೆಯಲ್ಲಿ ಬಿದ್ದಿದ್ದರು, ಅವರಿಗೆ ಹಸಿವೆ ಬಹಳವಾಗಿತ್ತು. ಆದರೂ ಊರಾದರೂ ಹೇಗಿದೆ ನೋಡಿಬರೋಣವೆಂದು, ಹಸಿದ ಹೊಟ್ಟೆಯಿಂದಲೇ ಹೊರಗೆ ಹೊರಟರು. ಒಂದೆರಡು ಮನೆ ದಾಟುವಷ್ಪವರಲ್ಲಿ ಅವರಿಗೆ ಗೋಪಾಳಭಟ್ಟರ ದರ್ಶನವಾಯಿತು. ಗಣಪತಿಯನ್ನೂ ನಾಚಿಸುವ ಅವರ ಹೊಟ್ಟೆಯನ್ನೂ ಗಡ್ಡಮೀಸೆಗಳ ಅರಣ್ಯದಲ್ಲಿ ಅಡಗಿದ ಅವರ ಬಾಯಿಯನ್ನೂ, ಮತ್ತು ಬಚ್ಚಲ ಮನೆಯಲ್ಲಿ ಸ್ನಾನಕ್ಕೆ ಕೂತವರಂತೆ ಕೂತ ಅವರ ರೀತಿಯನ್ನೂ ನೋಡಿ ಮ್ಯಾನೇಜರರ ಮನಸ್ಸಿನಲ್ಲಿ ಪೂಜ್ಯಭಾವನೇ ಉತ್ಪನ್ನವಾಯಿತು. ವಿಶೇಷವಾಗಿ ಗೋಪಾಳ ಭಟ್ಟರು ಕಿರಾಣಿ ಅಂಗಡಿಯ ವ್ಯಾಪಾರಿಗಳಾಗಿದ್ದರು. ಮತ್ತು ಅವರು ಆವಾಗ ತಮ್ಮ ಅಂಗಡಿಯಲ್ಲಿಯೇ ಕುಳಿತಿದ್ದರು. ಅಂತೆಯೇ ಮಾನೇಜರರ ಪೂಜ ಭಾವನೆಗೆ ಉಕ್ಕು ಬಂದಿತು. ಅವರು ಬಾಗಿ ಭಟ್ಟರಿಗೆ ನಮಸ್ಕಾರ ಮಾಡಿದರು.

ವೇಷದಿಂದ ನೋಡಿದರೆ ಪೆನ್ಸನ್‌ ತೆಗೆದುಕೊಂಡ ಪೋಲೀಸ ಇನ್‌ಸ್ಪೆಕ್ಟರರಂತೆ ಕಾಣುವ ಡೌಲಿನ ಒಬ್ಬ ಗೃಹಸ್ಥನು ತಮಗೆ ನಮಸ್ಕಾರ ಮಾಡುವದನ್ನು ಕಂಡು, ಗೋಪಾಳ ಭಟ್ಟರಿಗೆ ಆಶ್ಚರ್ಯವೆನಿಸಿತು; ಒಂದಿಷ್ಟು ಸಂತೋಷವೂ ಆಯಿತು. ಆದರು ನಗುನಗುತ್ತ ಮ್ಯಾನೇಜರರನ್ನು ಸ್ವಾಗತಿಸಿದರು.

ಮ್ಯಾನೇಜರರು ತಮ್ಮ ಸರ್ಕಸನ ವಿಷಯಕ್ಕೆ ಹೇಳಿ, ತಮ್ಮ ಮುಕ್ಕಾಮು ಈ ಊರಿನಲ್ಲಿ ಇರುವ ವರೆಗೆ ಉತ್ತಮ ಪ್ರಕಾರದ ಕಿರಾಣೀ ಸಾಮಾನುಗಳನ್ನು ಪೂರೈಸುವ ಒಬ್ಬ ಖರೇ ವರ್ತಕರು ತಮಗೆ ಬೇಕಾಗಿದ್ದಾರೆ ಎಂದು ಹೇಳಿದರು. ಇಂಥ ದೊಡ್ಡ ಗಿರಾಕಿಯು ಅನಾಯಾಸವಾಗಿ ನಡೆಯುತ್ತ ತಮ್ಮ ಕಡೆಗೇ ಬಂದದ್ದನ್ನು ಕಂಡು ಗೋಪಾಳಭಟ್ಟರಿಗೆ ಸಂತೋಷವೆನಿಸಿತು. ಮ್ಯಾನೇಜರರು ಆಗಾವ ಹಣ ಕೊಡಬೇಕೇ? ಎಂದು ಕೇಳಿದರು. ಈ ಹೊಸ ಗಿರಾಕಿಯನ್ನು ಸಂತೋಷಗೊಳಿಸುವದೇ ಜಾಣತನದ್ದೆಂದು ತಿಳಿದು ಗೋಪಾಳ ಭಟ್ಟರು ಆಗಾವ ಹಣವನ್ನು ಸ್ವೀಕರಿಸಲು ನಿರಾಕರಿಸಿದರು ಮ್ಯಾನೇಜರರಿಗೂ ಇದೇ ಬೇಕಾಗಿತ್ತು. ಚಿತ್ತಾಕರ್ಷಕ ಕಂಪನಿಯ ಒಲೆ ಹೊತ್ತಿತು. ಹುಡುಗರನ್ನು ಹಿಡಿದು ಹಿರಿಯರ ವರೆಗೆ, ಆಡಿನಿಂದ ಆನೆಯವರೆಗೆ ಆನಂದವೇ ಆನಂದ ಪಸರಿಸಿತು.

ಗೋಪಾಳಭಟ್ಟರ ಚೌರ ಹಾರಾಡಹತ್ತಿತು. ಅವರಿಗೆ ಸರ್ಕಸ್ಸಿಗೆ ಹೋಗಲಿಕ್ಕೆ, ಯಾವಾಗಲೂ ಮುಕ್ತದ್ವಾರವಿದ್ದಿತು. ಅಲ್ಲದೇ ಮನೆಯ ಮಂಡಳಿಗೂ ಕುರ್ಚಿಯ ಪುಕ್ಕಟೆ ಪಾಸುಗಳು ಇದ್ದವು. ಒಂದೆರಡು ದಿವಸಗಳಲ್ಲಿ ಸರ್ಕಸಿನ ನಾಯಿಗಳೂ ಕೂಡ ಗೋಪಾಳಭಟ್ಟರನ್ನು ಕಂಡ ಕೂಡಲೆ ಬಾಲ ಅಲ್ಲಾಡಿಸಹತ್ತಿದವು. ನಿಜವಾಗಿ ನೋಡಿದರೆ, ಮೂಕ ಪ್ರಾಣಿಗಳಿಂದಲೂ ತಮಗೆ ಇಂತಹ ಮರ್ಯಾದೆ ಸಿಗುತ್ತಿರುವಾಗ, ಗೋಪಾಳಭಟ್ಟರ ಮನಸ್ಸು ಅನಂದಸಾಗರದಲ್ಲಿ ಈಸಾಡಬೇಕಾಗಿತ್ತು. ಆದರೆ ಹಾಗೇನೂ ಇರದೆ, ಅವರ ಮನಸ್ಸಿನಲ್ಲಿ ಒಂದು ತರದ ಡುಗು ಡುಗಿ ಇದ್ದಿತು. ಸರ್ಕಸ್ಸಿನಲ್ಲಿ ಕುರ್ಚಿಯ ಮೇಲೆ ಕುಳಿತುಕೊಳ್ಳುವ ಒಬ್ಬಿಬ್ಬರು ಗೃಹಸ್ತರನ್ನು ಮಾತನಾಡಿಸುವ ಪ್ರಸಂಗವೂ ಇವರಿಗೆ ಬಂದಿತು. ಆದರೆ ಅವರೆಲ್ಲರೂ ಮುಖ್ಯವಾಗಿ ಪುಕ್ಕಟೆ ಯಾಗಿಯೇ ಬಂದವರಾಗಿದ್ದರು. ಪೋಲೀಸ ಅಧಿಕಾರಿಗಳೂ, ಮಾಮಲೇದಾರ ಇತ್ಯಾದಿ ಅಮಲದಾರರೂ ಮತ್ತು ಅವರ ಮನೆಯ ಮಂಡಲಿಯವರೇ ಈ ಕುರ್ಚಿಗಳನ್ನು ಅಲಂಕರಿಸುತ್ತಿರುವದನ್ನು ಕಂಡು ಭಟ್ಟರಿಗೆ ತಮ್ಮ ಬಾಕಿ ವಸೂಲಿಯ ಚಿಂತೆ ಹತ್ತಿತು.

ಇಂಥ ಚಿಂತಾಕ್ರಾಂತ ಸ್ಥಿತಿಯಲ್ಲಿ ಒಂದು ದಿವಸ ಗೋಪಾಳಭಟ್ಟರು ತಮ್ಮ ಚಿರಂಜೀವನಾದ ವಿಠ್ಠಲನನ್ನು ಕರೆದುಕೊಂಡು ಬಾಕೀ ಕೇಳಲಿಕ್ಕೆಂದು ಮ್ಯಾನೇಜರರ ಕಡೆಗೆ ಹೋದರು. ಆಗ ಮ್ಯಾನೇಜರ ಸಾಹೇಬರು ಆನೆಗೆ ಏನನ್ನೋ ಕಲಿಸುವುದರಲ್ಲಿ ಮಗ್ನರಾಗಿದ್ದರು. ಅವರು ದೂರದಿಂದಲೇ ನಮಸ್ಕಾರ ಮಾಡಿದರು. ಮತ್ತು ತಂದೆ ಮಕ್ಕಳು ಸಮೀಪಕ್ಕೆ ಬರುತ್ತಲೇ ಥಟ್ಟನೇ ಮಗುವನ್ನೆತ್ತಿ ಮಾವುತನ ಕೈಯಲ್ಲಿ ಕೊಟ್ಟರು. ಆನೆಯ ಮೇಲೆ ವಿರಾಜಮಾನನಾಗಿರುವ ವಿಠ್ಠಲನನ್ನು ಕಂಡು ಭಟ್ಟರು ಹಿಗ್ಗಿ ಹೋದರು, ಮುಂದೆ ವಿಠ್ಠಲನ ಮನಸ್ಸು ತಿರುಗಿಸಿ ಕೆಳಗಿಳಿಸಬೇಕಾದರೆ ಭಟ್ಟರಿಗೆ ಸಾಕುಬೇಕಾಯಿತು. ಈ ಗದ್ದಲದಲ್ಲಿ ಬಾಕೀ ಕೇಳುವ ನೆನಪು ಕೂಡ ಭಟ್ಟರಿಗೆ ಉಳಿಯಲಿಲ್ಲ. ಈ ರೀತಿಯಾಗಿ ಸರ್ಕಸಿನ ಮೇಲಿನ ದೊಡ್ಡ ಸಂಕಟವು ಅನಾಯಾಸವಾಗಿ ತಪ್ಪಿತು.

ಚಿತ್ತಾಕರ್ಷಕ ಸರ್ಕಸ ಮಂಡಲಿಯನರು ನಮ್ಮೂರಿಗೆ ಬಂದು ೧೫ ದಿನಸಗಳಾದವು. ಸರ್ಕಸಿನ ಉತ್ಪನ್ನ ಮತ್ತು ವೆಚ್ಚ ಇವು ಎಂದೂ ಬಾಯಿ ಗೂಡುತ್ತಿರಲಿಲ್ಲ. ಇಂಥ ಹೊತ್ತಿನಲ್ಲಿಯೇ “ನಾಳಿನಿಂದ ಉದ್ರಿ ಬಂದು” ಎಂಬ ನೋಟೀಸನ್ನು ಭಟ್ಟರು ಕೊಟ್ಟರು. ಮ್ಯಾನೇಜರರಿಗೆ ಸರ್ಕಸ್ಸನ್ನು ಕಿತ್ತುದ ಹೊರತು ಬೇರೊಂದು ಉಪಾಯವೇ ಉಳಿಯಲಿಲ್ಲ.

ಬಾಡಿಗೆಯ ಬಂಡಿಗಳಲ್ಲಿ ಸರ್ಕಸಿನ ಸಾಮಾನುಗಳನ್ನು ಹೇರುತ್ತಿರುವದನ್ನು ಕಂಡು ಗೋಪಾಳಭಟ್ಟರು ಯವಮುದೂತರ ಹಾಗೆ ಮ್ಯಾನೇರರ ಮುಂದೆ ಬಂದು ನಿಂತರು. “ಮುಂದಿನ ಊರಿನ ಉತ್ಪನ್ನದಿಂದ ತಮ್ಮ ಬಾಕಿ ತೀರಿಸುತ್ತೇನೆ” ಎಂದು ಮ್ಯಾನೇಜರರು ಹೇಳಹತ್ತಿದರು. ಆದರೆ ಭಟ್ಟರು ಒಳ್ಳೇ ಆಸಾಮಿ ಗಂಟು ಬಿದ್ದರು. ಅವರು ಇಂಥ ಗುಳಿಗೆಗಳಿಗೆ ಮೋಸ ಹೋಗುವವರಿರಲಿಲ್ಲ. ತಮ್ಮ ಎರಡುನೂರು ರೂಪಾಯಿಗಳನ್ನು ಎಣಿಸದ ಹೊರತು ಗಾಡಿಗಳನ್ನು ಮುಂದೆ ಹೋಗಗೊಡುವದಿಲ್ಲವೆಂದು ಭಟ್ಟರು ಸ್ಪಷ್ಟ ಹೇಳಿಬಿಟ್ಟಿದ್ದರು. “ನಮ್ಮ ಹತ್ತರ ಹಣವಿಲ್ಲ. ಬೇಕಾದರೆ ಹಣಕ್ಕಾಗಿ ಏನಾದರೂ ಸಾಮಾನುಗಳನ್ನು ಒತ್ತೆ ಇಟ್ಟು ಕೊಳ್ಳರಿ” ಎಂದು ಮ್ಯಾನೇಜರರು ಹೇಳಿದರು. ಗೋಪಾಳಭಟ್ಟರಿಗೆ ವಿಚಾರಿಸುವುದಕ್ಕೆ ಸಮಯವೇ ಇರಲಿಲ್ಲ. ಅವರು ನಿಂತ ನಿಂತಲ್ಲಿಯೇ ನಿಶ್ಚಯ ಮಾಡಿದರು. ತಮ್ಮಕಡೆಗೆ ಹುಲಿಯನ್ನು ಒತ್ತೆ ಇಟ್ಟರೆ ಮಾತ್ರ ಉಳಿದ ಗಾಡಿಗಳನ್ನು ಮುಂದೆ ಬಿಡುವುದಾಗಿ ಬಜಾಯಿಸಿದರು. ಮ್ಯಾನೇಜರರು ಬೇಕಾದಷ್ಟು, ಅತ್ತು ಕರೆದು ಹೇಳಿಕೊಂಡರೂ ಗೋಪಾಳಭಟ್ಟರ ಮನಸ್ಸು ಕರಗಲಿಲ್ಲ. ಸರ್ಕಸನಲ್ಲಿ ಹುಲಿಯ ಕೆಲಸವೇ ಮಹತ್ತದ್ದಿರುವುದರಿಂದ ಮ್ಯಾನೇಜರರು ಶಕ್ಯವಿದ್ದಷ್ಟು ತೀವ್ರ ಬಾಕಿ ತೀರಿಸಿ, ಹುಲಿ ಬಿಡಿಸಿಕೊಂಡು ಹೋಗುವರೆಂದು ಭಟ್ಟರು ತರ್ಕಿಸಿ ಹುಲಿಯ ಬಂಡಿಗೇ ಗಂಟುಬಿದ್ದರು. ಪಾಪ ಮ್ಯಾನೇಜರರಿಗೆ ಇನ್ನೊಂದು ಉಪಾಯವೇ ಉಳಿಯಲಿಲ್ಲ. ಅವರು ಹುಲಿಯ ಪಂಜರವನ್ನು ಗೋಪಾಳಭಟ್ಟರ ಸ್ವಾಧೀನಪಡಿಸಿ ಮುಂದಿನ ಊರಿನ ದಾರಿ ಹಿಡಿದರು.

ಹುಲಿಯ ಪಂಜರವು ಮನೆಯ ತಲೆಬಾಗಿಲಿನಿಂದ ಹಾಯ್ದು ಅಂಗಳದಲ್ಲಿ ಹೋಗುವಂತೆ ಇರದ್ದರಿಂದ, ಮನೆಯ ಹೊರಗೆ ಕಟ್ಟೆಯ ಮೇಲೆಯೇ ಪಂಜರವನ್ನು ಇಡಬೇಕಾಯಿತು. ತಮ್ಮ ಬಾಕಿ ಕೊಡದೆ ರಕ್ಕಿಸಿ ಹೋಗುವ ಮ್ಯಾನೇಜರರನ್ನೇ ತಾವು ಮೀರಿಸಿದಿವೆಂದು ಭಟ್ಟರು ಒಳಗಿಂದೂಳೆಗೇ ನಗುತ್ತಿದ್ದರು. ಈ ಹಿಗ್ಗಿನ ಭರದಲ್ಲಿ ಅಂದು ಅವರಿಗೆ ಅಂಗಡಿಯ ನೆನಪು ಕೂಡ ಆಗಲಿಲ್ಲ. ಬಲಗಡೆಯ ಕಟ್ಟೆಗೆ ಹುಲಿಯ ಪಂಜರ ಎಡಗಡೆಯ ಕಟ್ಟೆಗೆ ಗೋಪಾಳಭಟ್ಟರು. ಈ ಜೋಡಿ ಸಂಜೆಯವರೆಗೆ ಕಾಣುತ್ತಿದ್ದಿತು. ಸಂಜೆಗೆ ಅಡಿವಿಗೆ ಹೋದ ಭಟ್ಟರ ಆಕಳು ತಿರುಗಿ ಮನೆಗೆ ಬಂದಿತು. ಆದರೆ ದೂರದಿಂದಲೇ ಹುಲಿಯ ವಾಸನೆ ಹತ್ತಿ ಆಕಳು ಹಿಂದಿನಿಂದಲೇ ತಿರುಗಿ ಓಡಿ ಹೋಯಿತು. ಏಕಾಗ್ರಚಿತ್ತರಾಗಿ ಹುಲಿಯನ್ನೇ ನೋಡುತ್ತ ಕುಳಿತ ಭಟ್ಟರ ಲಕ್ಷವು ಈಗ ಇತರ ವಿಷಯಗಳ ಕಡೆಗೆ ಹೊರಳಿತು. ಅವರು ಅವಸರದಿಂದ ದೋತರವನ್ನು ಸರಪಡಿಸುತ್ತ ಆಕಳ ಹಿಂದೆ ಧಾವಿಸಿದರು. ಆದರೆ ತನ್ನ ಜೀವ ಉಳಿಸಿಕೊಳ್ಳಲು ಓಡುವ ಆಕಳ ವೇಗಕ್ಕೂ ತಮ್ಮ ಹೊಟ್ಟೆ ಸಂಭಾಳಿಸಿಕೊಂಡು ಓಡುವ ಭಟ್ಟರ ವೇಗಕ್ಕೂ ಮಹದಂತರವಾದ್ದರಿಂದ ಭಟ್ಟರಿಗೆ ಆಕಳು ಸಿಕ್ಕಲಿಲ್ಲ.

ಭಟ್ಟರು ತಿರುಗಿದರು. ಅದರೆ ಮನೆಯ ಮುಂದೆ ಓಣಿಯ ಹುಡುಗರ ಬಾಜಾರವೇ ನೆರದಿತ್ತು. ಆಕಳನ್ನು ಕಂಡಾಗಿನಿಂದ ಹುಲಿಯು ಒಂದೇಸವನೇ ಗರ್ಜಿಸುತ್ತ ಪಂಜರದಲ್ಲಿ ಸುತ್ತಾಡುತ್ತಿತ್ತು. ಹುಡುಗರಿಗೆ ಇದೊಂದು ಮೌಜೇ ಆಗಿತ್ತು. ಅವರು ಸಣ್ಣ ಸಣ್ಣ ಹರಳು ಒಗೆಯಹತ್ತಿದರು. ಇದರಿಂದ ಹುಲಿ ಮತ್ತಷ್ಟು ರೇಗಿತ್ತು. ಭಟ್ಟರು ತಿರುಗಿ ಬರುತ್ತಲೇ ಹುಡುಗರು ಚದುರಿದರು. ಭಟ್ಟರು ಆಕಳನ್ನು ಹುಡುಕಲಿಕ್ಕೆ ಒಂದು ಆಳು ಕಳಿಸಿದರು. ಮತ್ತು ಇನ್ನೊಂದು ಆಳನ್ನು ಹುಲಿಯ ಪಂಜರದ ಪಹರೇ ಮಾಡಲಿಕ್ಕಿಟ್ಟರು. ತಾವು ಸ್ವತಃ ಹುಲಿಯ ಸಂಜೆಯ ಫಲಾಹಾರದ ವ್ಯವಸ್ಥೆಗೆ ನಿಂತರು. ಅಂಗಡಿಗೆ ಹೋಗಿ, ಅವರ ಸಲಹೆಯಂತೆಯೇ ಅವರ ಅಳಿನ ಕಡೆಯಿಂದಲೇ ನಾಲ್ಕೈದು ಸೇರು ಆಡಿನ ಮಾಂಸನನ್ನು ತರಿಸಿ ಪಂಜರದಲ್ಲಿ ಹಾಕಿಸಿದರು. ಹುಲಿರಾಯನ ವ್ಯವಸ್ಥೆಯಾದ ನಂತರ ಭಟ್ಟರು ಊಟ ಮಾಡಿ ಮಲಗಿದರು.

ಮರುದಿವಸ ಒಂದು ಹೊಸ ಸಮಸ್ಯೆಯೇ ಉಪಸ್ಥಿತವಾಯಿತು. ಮೊದಲಿನಿಂದಲೂ ಹುಲಿಯ ಪಂಜರದಿಂದ ಉಗ್ರವಾದ ದುರ್ವಾಸನೆ ಬರುತ್ತಿತ್ತು. ಅದರಲ್ಲಿ ಕೊಳೆತ ಮಾಂಸದ ಮತ್ತು ಹುಲಿಯ ಮಲ ಮೂತ್ರದ ವಾಸನೆ ಕೂಡಿದ್ದರಿಂದ ಆ ಓಣಿಯಲ್ಲೆಲ್ಲ ದುರ್ವಾಸನೆ ತುಂಬಿಹೋಯಿತು. ಗೋಪಾಳ ಭಟ್ಟರ ಮನೆಗೆ ಭಿಕ್ಷುಕರು ಕೂಡ ಬರದಂತಾಯಿತು ಅಪ್ಪಿ ತಪ್ಪಿ ಕಾವಲುಗಾರರ ಕಣ್ಣು ತಪ್ಪಿಸಿ ಕಲ್ಲು ಒಗೆಯಲಿಕ್ಕೆ ಹುಡುಗರು ಮಾತ್ರ ಬರುತ್ತಿದ್ದರು. ಈ ದುರ್ವಾಸನೆಗಾಗಿ ಓಣಿಯ ಜನರಿಂದ ತಕರಾರು ಬರ ಹತ್ತಿತು. ಆದರೂ ಭಟ್ಟರು ಇದಕ್ಕೆ ಕಿವಿಗೊಡಲಿಲ್ಲ.

ಮೂರನೇ ದಿವಸ ಭಟ್ಟರ ಧರ್ಮಪತ್ನಿಯೂ ನೋಟಸು ಕೊಟ್ಟಳು. ಪಾಪ ಅವಳಿಗೆ ಹಗಲು-ರಾತ್ರಿ ಮನೆಯಲ್ಲಿಯೇ ಇರಬೇಕಾದ್ದರಿಂದ ಹುಲಿಯ ದುರ್ವಾಸನೆ ಅಸಹ್ಯವಾಗಿತ್ತು. ಇತ್ತ ಹುಲಿಗೆ ಏನು ಅನಿಸಿತ್ತೋ ದೇವರೇ ಬಲ್ಲ!! ಹುಲಿಯು ಆ ದಿವಸ ಎನೂ ತಿನ್ನಲಿಲ್ಲ. ಕೇವಲ ಪಂಜರದ ಒಂದು ಮೂಲೆಯಲ್ಲಿ ಬಿದ್ದುಕೊಂಡಿತ್ತು. ಭಟ್ಟರ ಮನಸ್ಸು ಚಂಚಲವಾಯಿತು. ಮನೆಯಿಂದಲೂ, ಓಣಿಯ ಜನರಿಂದಲೂ ತಕರಾರುಗಳಂತೂ ನಡೆದೇ ಇದ್ದವು. ಇತ್ತ ಹುಲಿಯಂತೂ ಅನ್ನಸತ್ಯಾಗ್ರಹವನ್ನೇ ಪ್ರಾರಂಭಿಸಿತ್ತು. ಈ ಗೊಂದಲದಲ್ಲಿ ಹುಲಿಯ ಜೀವಕ್ಕೆ ಏನಾದರೂ ಹೆಚ್ಚು ಕಡಿಮೆಯಾದರೆ ಮುಂದೇನು? ಎಂಬ ಪ್ರಶ್ನೆ ಭಟ್ಟರೆ ಮುಂದೆ ನಿಂತಿತು. ತಮ್ಮ ಬಾಕೀ ಬರುವದಂತೂ ದೂರೇ ಉಳಿಯಿತು. ತಿರುಗಿ ಮ್ಯಾನೇಜರರಿಗೆ ಮತ್ತೊಂದು ಹೊಸ ಹುಲಿಯನ್ನೇ ತಂದು ಕೊಡಬೇಕಾದೀತು! ಇಷ್ಟರಿಂದಲೇ ಬಗೆ ಹರಿಯಲಿಕ್ಕಿಲ್ಲ. ಸರ್ಕಸ ಮಾಡುವ ಹುಲಿಯೇ ಬೇಕು ಎಂದು ಮ್ಯಾನೇಜರನು ಹಟ ಹಿಡಿದರೆ ಮಾಡುವುದೇನು? ಈ ಎಲ್ಲ ವಿಚಾರಗಳನ್ನು ಮಾಡಿ, ಅಂದು ಭಟ್ಟರಿಗೆ ಚಹ ಕೂಡ ರುಚಿ ಹತ್ತಲಿಲ್ಲ. ಈ ಅವಧಿಯಲ್ಲಿ ಭಟ್ಟರ ಕೈಯಿಂದ ೫-೬ ರೂಪಾಯಿಗಳೂ ಕೈ ಬಿಟ್ಟಿದ್ದವು. ಇನ್ನು ಹುಲಿಯ ಔಷಧೋಪಚಾರಕ್ಕಾಗಿ ಹಣ ಖರ್ಚು ಮಾಡುವ ಪ್ರಸಂಗ ಬಂದಿತು.

ಗೋಪಾಳಭಟ್ಟರ ಓಡಾಟ ಸುರುವಾಯಿತು. ಅವರಿಗೆ ಬಾಡಿಗೆ ಬಂಡಿ ಸಿಗುವದು ಕೂಡ ಕಠಿಣವಾಯಿತು. ನಿತ್ಯದ ಬಾಡಿಗೆಯ ಮೂರುಪಟ್ಟು ಬಾಡಿಗೆ ಕೊಟ್ಬು ಭಟ್ಟರು ಒಂದು ಗಾಡಿ ಮಾಡಿ ಸಮೀಪದ ಊರಲ್ಲಿಯೇ ಇರುವ ಸರ್ಕಸ ಕಂಪನಿಗೆ ಹುಲಿರಾಯನನ್ನು ಮುಟ್ಟಿಸಿ ತಿರುಗಿ ಬಂದರು. ಅಂದಿನಿಂದ ನಮ್ಮ ಭಟ್ಟರು ಮೊಹರಮ್ಮದ ಹುಲಿಯನ್ನು ಕಂಡರೂ ರೇಗುತ್ತಾರೆ, ಮತ್ತು ಸರ್ಕಸ ಎಂದರೆ ಬಯ್ಯಲಿಕ್ಕೆ ಪ್ರಾರಂಭಿಸುತ್ತಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಗು ವಿಷವನೌಷಧಿ ಎನಬಹುದೇ?
Next post ಕವಿಶಿಷ್ಯ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…