ಅಮ್ಮ ನಿನ್ನ ಕೈ ತುತ್ತು ತಿನ್ನೋ
ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು ||

ಹಕ್ಕಿ ಗೂಡು ಸೇರಿ
ಮುದ್ದು ಮರಿಗೆ ಗುಟುಕು ಹಾಕುವ
ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು ||

ಅಂಬೆಗಾಲ ಇಟ್ಟ ಕಂದ
ಅಮ್ಮನ ಮಡಿಲ ಸೇರಿ ನಲಿವ
ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು ||

ಅಣ್ಣ ತಮ್ಮನ ಪ್ರೀತಿ
ಅಕ್ಕ ತಂಗೀರು ಜೋಗುಳ ಹಾಡುವ
ಹೊತ್ತು ಸ್ವರ್ಗದ ಬಾಗಿಲು ತರೆದಾಯ್ತು ||

ಗೆಳೆಯ ಗೆಳತೀರು ಕೂಡಿ
ಅಪ್ಪಾಳೆ ತಿಪ್ಪಾಳೆ ರತ್ತೊ ರತ್ತೋ ಆಡಿ ಕುಣಿವ
ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು ||

ಮುಂಗಾರ ಮಳೆಯಲ್ಲಿ
ಸಿಂಗಾರ ಹೊಲದಲಿ ನೇಸರ ಹೊಂಗಿರಣ ಬೀರುವ
ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು ||

ಸುಗ್ಗಿ ಕಾಲದ ಮುಂಜಾನೆ ಹರುಷ
ಹಸನಾದ ರೈತನ ಬಾಳಿನ
ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು ||

ಹುಣ್ಣಿಮೆ ರಾತ್ರಿಯಲ್ಲಿ ಚೆಂದಾದ ಬೆಳಕಲ್ಲಿ
ಇಂಪಾದ ಗಾನ ಬೆರೆತಾದ
ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು ||

ಹಸೆ ಮಣೆ ಏರಿದ ಮದುಮಗಳ ಮೊಗವು
ನಾಚಿದ ಅರಿಶಿನ ಕುಂಕುಮ
ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು ||

ಜನನಿ ಜನ್ಮ ಭೂಮಿಯಲಿ
ಹುಟ್ಟಿ ಬೆಳದು ತಾಯ ಸೇವೆ ಮಾಡೋ
ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು ||

ಅಮ್ಮಾ ನಿನ್ನ ಕೈ ತುತ್ತು ತಿನ್ನೋ ಹೊತ್ತು
ಸ್ವರ್ಗದ ಬಾಗಿಲು ತೆರೆದಾಯ್ತು ||
*****